ಚಿತ್ರದುರ್ಗಜ.24:
ಗ್ರಾಮೀಣ ಭಾಗದ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅವರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ಮದಕರಿಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ. ನಾಗರಾಜ್ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಮಕ್ಕಳ ಗ್ರಾಮ ಸಭೆ’ಯಲ್ಲಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ಪ್ರತಿ ವರ್ಷ ನವೆಂಬರ್ 14 ರಿಂದ ಜನವರಿ 24 ರ ಒಳಗೆ ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತದೆ. ಈ ಸಭೆಯು ಸಂಪೂರ್ಣವಾಗಿ ಮಕ್ಕಳಿಗಾಗಿ ಮೀಸಲಾಗಿದ್ದು, ಅವರ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ವೇದಿಕೆ ಕಲ್ಪಿಸುತ್ತದೆ. ಮಕ್ಕಳ ಅಹವಾಲುಗಳನ್ನು ಆಲಿಸಿ, ಅವುಗಳನ್ನು ತಕ್ಷಣವೇ ಬಗೆಹರಿಸಲು ಪಂಚಾಯತಿ ವತಿಯಿಂದ ಎಲ್ಲಾ ಕ್ರಮ ವಹಿಸಲಾಗುವುದು ಎಂದು ಜಿ. ನಾಗರಾಜ್ ಅವರು ಭರವಸೆ ನೀಡಿದರು.
ಪಿಎಸ್‍ಐ ಗೀತಾ ಅವರು ಮಕ್ಕಳ ರಕ್ಷಣೆ ಮತ್ತು ಕಾನೂನು ಅರಿವು ಮೂಡಿಸಿದರೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಪಿ. ಸತೀಶ್ ಕುಮಾರ್ ಅವರು ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದರು. ಮಕ್ಕಳ ರಕ್ಷಣಾ ಘಟಕದ ರೇಣುಕಾ ಹಾಗೂ ಡಾನ್ ಬಾಸ್ಕೊ ಸಂಸ್ಥೆಯ ಮಹಂತೇಶ್ ಅವರು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಮದಕರಿಪುರ ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲಾ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎಸ್. ಭವ್ಯ, ಉಪಾಧ್ಯಕ್ಷೆ ಜ್ಯೋತಿ ದೇವೇಂದ್ರಪ್ಪ ಹಾಗೂ ಪಂಚಾಯತಿ ಸದಸ್ಯರಾದ ನವೀನ್ ಕುಮಾರ್, ಮಂಜುನಾಥ, ಲಕ್ಷ್ಮಿ, ಯಶೂದಮ್ಮ, ಮಂಜುಳಾ ಮತ್ತು ತಿಪ್ಪೇಸ್ವಾಮಿ ನಾಯ್ಕ, ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.