ಇಂದಿನ ಯುವಕ–ಯುವತಿಯರು ಡಾ. ಬಿ.ಆರ್. ಅಂಬೇಡ್ಕರರಂತೆ ಶಿಕ್ಷಣದತ್ತ ಸಾಗಿದರೆ ಮರ್ಯಾದಾಹತ್ಯೆಗೆ ಕಡಿವಾಣ ಖಚಿತ!
✍️ ಡಿ. ಶಬ್ರಿನಾ ಮಹಮದ್ ಅಲಿ
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಮರ್ಯಾದಾಹತ್ಯೆಯ ವಿಡಿಯೋ ಮನಸ್ಸಿಗೆ ಆಘಾತ ತಂದಿದೆ. ಆ ಯುವಕನ ಆಕ್ರಂದನವನ್ನು ನೋಡಿದಾಗ ಮನಸ್ಸು ಮಮ್ಮಲ ಮರುಗಿತು. ಆ ಕ್ಷಣದಲ್ಲಿ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಅನಾಯಾಸವಾಗಿ ನೆನಪಾದವು. “ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸುವುದೇ ನಮ್ಮ ಮೊದಲ ಆದ್ಯತೆ ಆಗಬೇಕು” ಎಂಬ ಅವರ ಮಾತುಗಳ ಸಾರ್ಥಕತೆ ಇಂತಹ ಸಂದರ್ಭಗಳಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತದೆ.
ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ದೊರೆತಾಗ, “ನಾನೇ ಶ್ರೇಷ್ಠ” ಎನ್ನುವವರೇ ನಮ್ಮೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವಂತಾಗುತ್ತಾರೆ; ಅಷ್ಟೇ ಅಲ್ಲ, ಸಂಬಂಧ ಬೆಳೆಸಲು ಸಹ ಹಿಂದೇಟು ಹಾಕುವುದಿಲ್ಲ. ಇದರಿಂದ ಒಂದು ಸತ್ಯ ಸ್ಪಷ್ಟವಾಗುತ್ತದೆ—ಮನುಷ್ಯರು ಜಾತಿಯನ್ನು ಬಡತನದಲ್ಲಿ ಹುಡುಕುತ್ತಾರೆ, ಶ್ರೀಮಂತಿಕೆಯಲ್ಲಿ ಅಲ್ಲ. ಈ ವಾಸ್ತವವನ್ನು ಸಮಾಜ ಗಂಭೀರವಾಗಿ ಮನಗಾಣಬೇಕಿದೆ.
ನಾವು ಇಂದು ಊಹಿಸಲೂ ಆಗದಂತಹ ಶೋಷಣೆಯನ್ನು ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನದಲ್ಲಿ ಅನುಭವಿಸಿದ್ದರು. ಆದರೆ ಅವರು ಯಾವುದೇ ಹಂತದಲ್ಲೂ ಅಳುಕದೆ, ಸಮಾಜವನ್ನು ಪ್ರಶ್ನಿಸುತ್ತಾ, ಅಪಾರ ಕಷ್ಟದ ನಡುವೆಯೂ ಶಿಕ್ಷಣ ಪಡೆದು ಮಹಾಜ್ಞಾನಿಯಾಗಿ ವಿಶ್ವಮಟ್ಟದಲ್ಲಿ ಅಸ್ಪೃಶ್ಯರ ಆಶಾಕಿರಣವಾಗಿ ನಿಂತರು. ಶೋಷಣೆಯ ನೋವು ಅನುಭವಿಸುವ ಪ್ರತಿಯೊಬ್ಬರೂ ಬಾಬಾಸಾಹೇಬರ ಶಿಕ್ಷಣ ಮಾರ್ಗವನ್ನು ಅನುಸರಿಸಿದರೆ, ಹುಬ್ಬಳ್ಳಿಯಂತಹ ಮರ್ಯಾದಾಹತ್ಯೆಗಳಿಗೆ ಖಂಡಿತ ಕಡಿವಾಣ ಬೀಳುತ್ತದೆ ಎಂಬುದು ನನ್ನ ದೃಢ ನಂಬಿಕೆ.
ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಅನೇಕ ಅವಕಾಶಗಳಿವೆ—ಉಚಿತ ಶಿಕ್ಷಣ, ಉಚಿತ ಹಾಸ್ಟೆಲ್, ಉಚಿತ ತರಬೇತಿಗಳು. ಆದರೆ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳುತ್ತಿರುವವರ ಸಂಖ್ಯೆ ಎಷ್ಟು ಎಂಬುದನ್ನು ಆತ್ಮಪರಿಶೀಲನೆ ಮಾಡಿಕೊಳ್ಳಬೇಕಿದೆ. ಅನೇಕ ಯುವಕರು ಮತ್ತು ಯುವತಿಯರು ಅರ್ಧಕ್ಕೆ ಶಿಕ್ಷಣವನ್ನು ನಿಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. “ಅವನು/ಅವಳು ಓದಲ್ಲ” ಎಂಬ ಉತ್ತರವನ್ನು ಪೋಷಕರೇ ಸುಲಭವಾಗಿ ನೀಡಿಬಿಡುತ್ತಾರೆ. ನಗರ ಪ್ರದೇಶದ ಪೋಷಕರಲ್ಲಿ ಕಾಣುವ ಶಿಕ್ಷಣದ ಕಾಳಜಿ ಗ್ರಾಮೀಣ ಭಾಗಗಳಲ್ಲಿ ಇನ್ನೂ ಕೊರತೆಯಾಗಿ ಕಾಣುತ್ತಿದೆ.
ಶಿಕ್ಷಣಕ್ಕೆ ಎಂತಹ ಶಕ್ತಿ ಇದೆ ಎಂಬುದನ್ನು ತಮ್ಮ ಜೀವನದ ಮೂಲಕ ಇಡೀ ಜಗತ್ತಿಗೆ ಸಾರಿದವರು ಬಾಬಾಸಾಹೇಬ್ ಅಂಬೇಡ್ಕರ್. ಅಂತಹ ದಿಟ್ಟ ನಿಲುವನ್ನು ಇಂದಿನ ಯುವಕರು ಮತ್ತು ಯುವತಿಯರು ಏಕೆ ಅಳವಡಿಸಿಕೊಳ್ಳುತ್ತಿಲ್ಲ ಎಂಬುದು ಚರ್ಚೆಗೆ ಒಳಪಡುವ ವಿಷಯ. ಹುಬ್ಬಳ್ಳಿಯ ಘಟನೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ—ಆ ಯುವಕ ಸರ್ಕಾರಿ ಹುದ್ದೆಯಲ್ಲಿದ್ದಿದ್ದರೆ ಅಥವಾ ಒಳ್ಳೆಯ ಉದ್ಯಮಿಯಾಗಿದ್ದರೆ ಇಂತಹ ಅಮಾನವೀಯ ಕೃತ್ಯ ಸಂಭವಿಸುತಿತ್ತೆ? ಒಮ್ಮೆ ಯೋಚಿಸಬೇಕಿದೆ. ಬಡತನದಲ್ಲಿ ಹುಟ್ಟುವ ಅಸಮಾನತೆಗಳನ್ನು ಅಳಿಸುವ ಶಕ್ತಿ ಶಿಕ್ಷಣಕ್ಕಿದೆ ಎಂಬುದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು.
ಅನಾದಿ ಕಾಲದಿಂದ ಅಟ್ಟಹಾಸ ಮೆರೆದ ಅಸಮಾನತೆಯ ಪೀಡೆ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ. ಬುದ್ಧ, ಪ್ರವಾದಿ, ಬಸವಣ್ಣ ಮೊದಲಾದ ಮಹಾನ್ ಚಿಂತಕರು ಸಮಾನತೆಯನ್ನು ಸಾರಿದರೂ, ಜಾತಿ ಮತ್ತು ಮೇಲು-ಕೀಳು ಭಾವ ಇನ್ನೂ ಸಮಾಜದೊಳಗೆ ಗಟ್ಟಿಯಾಗಿ ಬೇರೂರಿದೆ. ಜಾತಿ ಎನ್ನುವುದು ಮನುಷ್ಯನಿಗೆ ಅಂಟಿದ ವಾಸಿಯಾಗದ ರೋಗವಾಗಿಬಿಟ್ಟಿದೆಯೇನೋ ಎಂಬ ಅನುಮಾನ ಮೂಡುವಷ್ಟು ಅವ್ಯವಸ್ಥೆ ಇದೆ. ಇದಕ್ಕೆ ಏಕೈಕ ಮದ್ದು ಶಿಕ್ಷಣವೇ. ಶಿಕ್ಷಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಬೇಕಿದೆ.
ಈ ಮಹತ್ವದ ಕಾರ್ಯದಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು. ಮಕ್ಕಳ ಓದುವ ವಯಸ್ಸಿನಲ್ಲಿ ಓದಿನ ಕಡೆ ಮಾತ್ರ ಗಮನ ಹರಿಸುವಂತೆ ಜಾಗೃತಿ ಮೂಡಿಸಬೇಕು. ಬದುಕಿಗೆ ಭದ್ರವಾದ ವೃತ್ತಿ ಪಡೆದ ನಂತರ ತಮ್ಮ ಇಚ್ಛೆಯಂತೆ ಬದುಕಲು ಯಾವುದೇ ಜಾತಿಯೂ ಅಡ್ಡಿಯಾಗುವುದಿಲ್ಲ ಎಂಬ ಸತ್ಯವನ್ನು ಮಕ್ಕಳಿಗೆ ಮನದಟ್ಟು ಮಾಡಬೇಕಿದೆ. ಬಾಬಾಸಾಹೇಬರನ್ನು ಆದರ್ಶವಾಗಿ ಮುಂದಿಟ್ಟುಕೊಂಡು, ಅವರು ಶೋಷಣೆಯ ಕಲ್ಲು-ಮುಳ್ಳಿನ ಹಾದಿಯನ್ನು ಶಿಕ್ಷಣದ ಮೂಲಕ ಹೇಗೆ ಹಸನ ಮಾಡಿಕೊಂಡರು ಎಂಬುದನ್ನು ಮಕ್ಕಳಿಗೆ ತಿಳಿಸಬೇಕು.
ನಾವು ಕೂಡ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಗಳಿಸಿದರೆ, ಜಾತಿ-ಮತ-ಪಂಥ ಎಂಬ ಅಡ್ಡಗೋಡೆಗಳಿಲ್ಲದ ಬದುಕು ಸಾಧ್ಯ ಎಂಬುದನ್ನು ಸಮಾಜದ ಪ್ರತಿಯೊಬ್ಬರೂ ಅರಿಯಬೇಕಿದೆ. ಆಗ ಮಾತ್ರ ಇಂತಹ ಮರ್ಯಾದಾಹತ್ಯೆಗಳಿಗೆ ಶಾಶ್ವತ ಕಡಿವಾಣ ಬೀಳುತ್ತದೆ ಎಂಬುದು ನನ್ನ ಅಂಬೋಣ.
— ಡಿ. ಶಬ್ರಿನಾ ಮಹಮದ್
About The Author
Discover more from JANADHWANI NEWS
Subscribe to get the latest posts sent to your email.