ಚಳ್ಳಕೆರೆ ಸುದ್ದಿ:
ರಾಷ್ಟ್ರೀಯ ಯುವ ಪ್ರಶಸ್ತಿ ಸ್ವೀಕರಿಸಿದ ಕೋಡಿಹಳ್ಳಿ ಟಿ. ಶಿವಮೂರ್ತಿ
ರಾಯಚೂರು ಜಿಲ್ಲೆಯ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೋಡಿಹಳ್ಳಿ ಟಿ. ಶಿವಮೂರ್ತಿ ಅವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಮಾಜಿಕ ಸಂಘಟನೆಗಳಲ್ಲಿ ಸಲ್ಲಿಸಿರುವ ಸಕ್ರಿಯ ಸೇವೆ, ಸಾಹಿತ್ಯ ಕ್ಷೇತ್ರದ ಚಟುವಟಿಕೆಗಳು, ಯುವ ಬರಹಗಾರರ ಉತ್ತೇಜನ, ಜಾನಪದ ಕಲಾವಿದರು ಹಾಗೂ ವಿವಿಧ ಸಾಹಿತ್ಯ ವೇದಿಕೆಗಳಲ್ಲಿ ನೀಡಿರುವ ಸಾಮಾಜಿಕ ಕನ್ನಡ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಮಾರಂಭದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಅರ್ಜುನ್ ಗೊಳಸಂಗಿ, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡಾ. ಜಯದೇವಿ ಗಾಯಕವಾಡ, ರಾಯಚೂರು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ತಾಯರಾಜ್ ಮರ್ಚಟಳ, ಬೆಂಗಳೂರು ವಿಭಾಗೀಯ ಸಂಯೋಜಕ ಶ್ರೀ ಗಣಪತಿ ಗೋ. ಛಲವಾದಿ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು, ಕವಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕವಿಗಳು, ಸಾಹಿತ್ಯಾಸಕ್ತರು, ಕಲಾವಿದರು, ಲೇಖಕರು, ಯುವ ಬರಹಗಾರರು, ದಲಿತ ಚಳವಳಿ ಹೋರಾಟಗಾರರು, ಪ್ರಗತಿಪರ ಚಿಂತಕರು ಹಾಗೂ ಪತ್ರಕರ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕೋಡಿಹಳ್ಳಿ ಟಿ. ಶಿವಮೂರ್ತಿ ಅವರ ಸೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಿ ಹಾಗೂ ಹೆಚ್ಚಿನ ಗೌರವಗಳು ದೊರೆಯಲಿ ಎಂದು ಚಿತ್ರದುರ್ಗ ಜಿಲ್ಲೆಯ ಸ್ನೇಹಿತರು, ಹಿತೈಷಿಗಳು, ಕವಿಗಳು ಹಾಗೂ ಸಾಹಿತಿಗಳು ಶುಭ ಹಾರೈಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.