January 30, 2026
1761226642928.jpg

ಚಿತ್ರದುರ್ಗ ಅ.23:
ಭಾರತದ 1857ರ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ, ಬ್ರೀಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತ್ರಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಎಂದು ಸಾಹಿತಿ ಸಿ.ಬಿ.ಶೈಲಾ ಜಯಕುಮಾರ್ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ, ಸ್ವಾಭಿಮಾನ, ನೈತಿಕತೆ, ಧರ್ಮ, ಹಾಗೂ ಜನ ಉಪಯೋಗಿ ಕಾರ್ಯಗಳ ಮೂಲಕ ಕಿತ್ತೂರು ರಾಣಿ ಚನ್ನಮ್ಮ ಚರಿತ್ರೆ ಪುಟಗಳಲ್ಲಿ ಅಜರಾಮರವಾಗಿದ್ದಾರೆ. ಕಿತ್ತೂರು ಸಂಸ್ಥಾನದ ಆಡಳಿತದಲ್ಲಿ ಪರಕೀಯರಾದ ಬ್ರೀಟಿಷರ ಹಸ್ತಕ್ಷೇಪ ವಿರೋಧಿಸಿದ ಚನ್ನಮ್ಮ ಶಸ್ತ್ರ ಹಿಡಿದು ಹೋರಾಟ ನಡೆಸಿದಳು. 1824 ಅಕ್ಟೋಬರ್ 23 ರಂದು ಕಿತ್ತೂರು ಕೋಟೆ ವಶ ಪಡಿಸಿಕೊಳ್ಳಲು ಬಂದ ಧಾರವಾಡದ ಅಂದಿನ ಕಲೆಕ್ಟರ್ ಥ್ಯಾಕರೇ ಯುದ್ದದಲ್ಲಿ ಹತನಾದ. ಬ್ರಿಟೀಷ್ ಸೇನೆ ಸೋತು ಶರಣಾಯಿತು. ಈ ಐತಿಹಾಸಿಕ ದಿನದ ನೆನಪಿನಲ್ಲಿಯೇ ರಾಜ್ಯ ಸರ್ಕಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಆಚರಿಸುತ್ತಲಿದೆ ಎಂದು ಸಿ.ಬಿ.ಶೈಲಾ ಜಯಕುಮಾರ್ ಹೇಳಿದರು.
ಚಿಕ್ಕವಯಸ್ಸಿನಲ್ಲಿ ಮದುವೆ, ಗಂಡನ ಸಾವು, ಸ್ವಂತ ಮಗನ ಸಾವು, ಸುತ್ತಮುತ್ತಲಿನ ರಾಜ್ಯಗಳ ಆಕ್ರಮಣದ ಭೀತಿ, ನಂಬಿಕೆ ದ್ರೋಹ ಎಲ್ಲವನ್ನೂ ಮೆಟ್ಟಿ ನಿಂತ ರಾಣಿ ಚನ್ನಮ್ಮ ಸ್ವಾತ್ರಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಹೋರಾಟ ನಡಿಸಿ, ಸಮಸ್ತ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾಳೆ. ಸಂಗೊಳ್ಳಿ ರಾಯಣ್ಣ, ಗಜವೀರ, ಗರುಸಿದ್ದಪ್ಪ, ಅಮಟೂರು ಬಾಳಪ್ಪ ಸೇರಿದಂತೆ ಸಾವಿರಾರು ಸೈನಿಕರಿಗೆ ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ದದ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಳು. ಆದರೆ ದೇಶದ್ರೋಹಿಗಳ ಕುತಂತ್ರಕ್ಕೆ ಬಲಿಯಾದ ಚನ್ನಮ್ಮ ಬ್ರೀಟಿಷರ ಸೆರೆಯಾಳಾಗಿ ಹೋರಾಟದ ಮನೋಭಾವದಲ್ಲಿಯೇ ಹುತಾತ್ಮಳಾದಳು ಎಂದು ಸಿ.ಬಿ.ಶೈಲಾ ಜಯಕುಮಾರ್ ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರ್.ಶಿವಣ್ಣ ರಾಜ್ಯ ಸರ್ಕಾರ ಚನ್ನಮ್ಮ ಶೌರ್ಯ, ಪರಾಕ್ರಮ ಹಾಗೂ ಸ್ವಾಭಿಮಾನವನ್ನು ದೇಶದಾದ್ಯಂತ ಪಸರಿಸುವ ಸಲುವಾಗಿ ಕಿತ್ತೂರು ಉತ್ಸವ ಕಾರ್ಯಕ್ರಮ ಆಯೋಜಿಸುತ್ತಿದೆ. ಚನ್ನಮ್ನ ಹೆಸರಿನಲ್ಲಿ ವಸತಿ ಶಾಲೆ ತೆರದಿದೆ. ಪ್ರಶಸ್ತಿ ಪ್ರಧಾನ ಮಾಡುತ್ತಿದೆ. ಭಾರತ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಬೆಳಗಾವಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಚನ್ನಮ್ಮನ ಹೆಸರು ಹಿಡಲಾಗಿದೆ. ಮಕ್ಕಳು ಹಾಗೂ ಇಂದಿನ ಯುವಜನತೆ ಚೆನ್ನಮ್ಮಳ ಜೀವನ ಚರಿತ್ರೆಯನ್ನು ತಿಳಿದೊಂಡು ಅವರ ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿಯಾದ ಸ್ವಾಂತತ್ರ್ಯ ಹೋರಾಟಗಾರ್ತಿ. ಬ್ರೀಟಿಷರ ದಾಸ್ಯ ಒಪ್ಪದೇ ದಿಟ್ಟತನದಿಂದ ಹೋರಾಟ ಮಾಡಿದಳು. ಹೆಣ್ಣು ಮಕ್ಕಳು ಬರಿ ಮನೆಗೆ ಸೀಮಿತವಾಗದೇ ಸಾಧನೆ ಮಾಡಲು ಚನ್ನಮ್ಮ ಸ್ಫೂರ್ತಿ ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮುಖಂಡರಾದ ರೀನಾ ವೀರಭದ್ರಪ್ಪ, ಟಿಪ್ಪು ಖಾಸಿಂ ಕಿತ್ತೂರು ರಾಣಿ ಚನ್ನಮ್ಮನ ಕುರಿತು ಮಾತನಾಡಿದರು. ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಗೋವಿಂದರಾಜ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಜೆ.ಶಿವಪ್ರಕಾಶ್, ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಗಂಗಾಧರಪ್ಪ, ಪಂಚಮಸಾಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಮಾ ರಮೇಶ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು. ಡಾ.ಬಿ.ಎಂ.ಪ್ರಜ್ವಲ್ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು.
ಫೋಟೋ ವಿವರಣೆ: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ಚನ್ನಮ್ಮನ ಭಾವಚಿತ್ರಕ್ಕೆ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ತಹಶೀಲ್ದಾರ್ ಗೋವಿಂದರಾಜ್, ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಸೇರಿಂದತೆ ಮುಖಂಡರು ಪುಷ್ಪನಮನ ಸಲ್ಲಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading