ಹಿರಿಯೂರು:
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ತಾಲ್ಲೂಕು ಕ್ರೀಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಪೌರಕಾರ್ಮಿಕರ ಕ್ರೀಡಾಕೂಟವನ್ನು ರಾಜ್ಯಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಸ್ಪರ್ಧೆಗೆ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಅವರು ಚಾಲನೆ ನೀಡಿದರು. ಕ್ರೀಡೆಗಳು ಎಲ್ಲರಿಗೂ ಅತ್ಯವಶ್ಯಕ. ಮಾನಸಿಕ ನೆಮ್ಮದಿ, ಸಂತೋಷ, ಚೈತನ್ಯ ನೀಡುವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂಬುದಾಗಿ ಅವರು ಹೇಳಿದರು.
ಪೌರಾಯುಕ್ತರಾದ ಎ.ವಾಸೀಂ ಅವರು ಮಾತನಾಡಿ ಪೌರಕಾರ್ಮಿಕರು ತಮ್ಮ ದೈನಂದಿನ ಕೆಲಸದ ನಂತರ ಧ್ಯಾನ, ಯೋಗಾಸನದಂತಹ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಮತಾ, ಸಣ್ಣಪ್ಪ, ವಿಠಲ್, ನಗರಸಭಾ ಸಿಬ್ಬಂದಿ , ಪೌರಕಾರ್ಮಿಕರು ಉಪಸ್ಥಿತರಿದ್ದರು. 100ಮೀ.ಓಟ, ಹಗ್ಗಜಗ್ಗಾಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್, ಕ್ರಿಕೇಟ್ ಮುಂತಾದ ಆಟಗಳು ನಡೆದವು.



