ಚಿತ್ರದುರ್ಗಸೆ.22:
ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಸಾರ್ವಜನಿಕರ ಆರೋಗ್ಯ ಬಹು ಮುಖ್ಯ. ಸಮತೋಲನ ಆಹಾರ ಸೇವಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ ಹೇಳಿದರು.
ಚಿತ್ರದುರ್ಗ ತಾಲೂಕಿನ ಗುಡ್ಡದ ರಂಗವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಂ ಆರ್ ನಗರದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯವಂತ ಮಹಿಳೆ ಸಶಕ್ತ ಪರಿವಾರ ಅಭಿಯಾನದಡಿ ಆಯೋಜಿಸಿದ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಜವಾಬ್ದಾರಿ ಇರುತ್ತದೆ. ಜೀರ್ಣಕ್ರಿಯೆ ಆಗುವ ಆಹಾರ ಪದಾರ್ಥಗಳ ಬಳಕೆ ಮಾಡುತ್ತಾ ಜಂಕ್ ಫುಡ್ಗಳ ಬಳಕೆ ಕಡಿಮೆ ಮಾಡಿ, ಸುತ್ತಮುತ್ತ ಲಭ್ಯ ಇರುವ ಕಿರು ಧಾನ್ಯಗಳ ಬಳಕೆ ಹೆಚ್ಚು ಮಾಡುತ್ತಾ, ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕಾಗಿದೆ. ಋತುಚಕ್ರದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ, ಪೌಷ್ಟಿಕ ಆಹಾರ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಮಹಿಳೆಯರು ಪ್ರಸವಪೂರ್ವ ಮತ್ತು ಪ್ರಸವ ನಂತರ ಆರೋಗ್ಯ ಕಾಪಾಡುವ ಬಗ್ಗೆ ಮಾಹಿತಿ ತಿಳಿದು ಮಕ್ಕಳಲ್ಲಿ ಅಪೌಷ್ಟಿಕತೆ ಬಾರದಂತೆ ಹಾಗೂ ಶಿಶುಮರಣ ಮತ್ತು ತಾಯಿ ಮರಣಕ್ಕೆ ಕಡಿವಾಣ ಹಾಕಬೇಕೆಂದರು.
ಶಿಬಿರದಲ್ಲಿ ತರಕಾರಿಗಳು ಬಳಕೆ ಮೊಳಕೆ ಕಾಳುಗಳು, ದವಸ ಧಾನ್ಯಗಳ ಪ್ರದರ್ಶನದ ಮುಖಾಂತರ ಮಾಹಿತಿ ನೀಡಲಾಯಿತು.
ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮತ್ತು ಅಯೋಡಿನ್ ಉಪ್ಪಿನ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಜಾತ, ಸಿಹೆಚ್‍ಒ ಜಯಲತಾ, ಅಂಗನವಾಡಿ ಕಾರ್ಯಕರ್ತೆಯರಾದ ದುರ್ಗಮ್ಮ, ಶಾಹಿನಾ ಮತ್ತು ತಂಡದವರು ಆಶಾ ಕಾರ್ಯಕರ್ತೆ ಗೀತಾ, ಗರ್ಭಿಣಿ ಬಾಣಂತಿಯರು ಮತ್ತಿತರರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.