September 14, 2025
1755960408175.jpg


ಹಿರಿಯೂರು :
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸ್ತುತ 2024-25ನೇ ಸಾಲಿನಲ್ಲಿ 93ಕೋಟಿ 3ಲಕ್ಷ 6 ಸಾವಿರದ 756 ರೂಗಳ ವಹಿವಾಟು ನಡೆಸಿದ್ದು, ಈ ಸಾಲಿನಲ್ಲಿ 8ಕೋಟಿ 3 ಲಕ್ಷ 45 ಸಾವಿರದ 244 ರೂ.ಗಳ ನಿವ್ವಳ ಲಾಭಗಳಿಸಿ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಿ.ಸುಧಾಕರ್ ಹೇಳಿದರು.
ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಈ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಸರ್ಕಾರದಿಂದಾಗಲೀ, ಇನ್ನಾವುದೇ ಮೂಲದಿಂದಾಗಲಿ ಯಾವುದೇ ಅನುದಾನ ದೊರೆತಿಲ್ಲ, ಬ್ಯಾಂಕ್ ಆರಂಭದಲ್ಲಿ ಸುಮಾರು 75 ವರ್ಷಗಳ ಹಿಂದೆ 1 ಕೋಟಿ ಅನುದಾನ ಸರ್ಕಾರ ನೀಡಿದೆಯಷ್ಟೇ, ಆದರೂ ಸಹ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಜಿಲ್ಲೆಯ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದರಲ್ಲದೆ,
ಸುಮಾರು ಕಳೆದ 2008 ರಲ್ಲಿ ಡಿಸಿಸಿ ಬ್ಯಾಂಕ್ ಮುಚ್ಚುವ ಹಂತ ತಲುಪಿತ್ತು, ಅಲ್ಲಿಂದ ಇಲ್ಲಿಯವರೆಗೂ ತುಂಬಾ ಕಷ್ಟಪಟ್ಟು ಹಂತಹಂತವಾಗಿ ಬೆಳೆಸಲಾಗಿದೆ, ಎಲ್ಲಾ ಸಹಕಾರಿ ಸಂಘಗಳು ಬದ್ಧತೆಯಿಂದ ಕೆಲಸ ನಿರ್ವಹಿಸಿದರೆ ಹಾಗೂ ಸುಸ್ತಿ ಸಾಲ ಮರುಪಾವತಿ ಮಾಡಿದರೆ, ನಿಮ್ಮ ಡಿಸಿಸಿ ಬ್ಯಾಂಕ್ ಉಳಿಯುತ್ತದೆ, ಆಗ ಡಿಸಿಸಿ ಬ್ಯಾಂಕ್ ನಿಂದ ಎಲ್ಲಾ ರೀತಿಯ ಸಾಲಸೌಲಭ್ಯ ದೊರೆಯುತ್ತದೆ ಎಂಬುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಶರೀಫ್ ಮಾತನಾಡಿ, ಬ್ಯಾಂಕ್ 2024-25 ನೇ ಸಾಲಿನಲ್ಲಿ ಕೃಷಿ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿಧರ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆ 56950 ರೈತರಿಗೆ ರೂ 48689.52 ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಿದೆ, ಅಲ್ಪಾವಧಿ ಬೆಳೆ ಸಾಲ ವಿತರಿಸಿದ ಪೈಕಿ ಪರಿಶಿಷ್ಟ ಜಾತಿಯ 7043 ರೈತರಿಗೆ ರೂ 4791.61ಲಕ್ಷ, ಪರಿಶಿಷ್ಟ ಪಂಗಡ ರೈತಸದಸ್ಯರಿಗೆ ರೂ11365.16 ಲಕ್ಷ ಅಲ್ಪಾವಧಿ ಕೃಷಿ ಬೆಳೆ ಸಾಲ ನೀಡಲಾಗಿದೆ ಎಂಬುದಾಗಿ ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 31-3-25 ರ ಅಂತ್ಯಕ್ಕೆ 10480.26 ಲಕ್ಷ ಷೇರು ಬಂಡವಾಳ ಹೊಂದಿದ್ದು, 2025-26 ನೇ ಸಾಲಿನಲ್ಲಿ 11530 ಲಕ್ಷ ಷೇರು ಬಂಡವಾಳ ಗುರಿಹೊಂದಿದೆ, ಅಲ್ಲದೆ 3ಸಾವಿರ ಹೊಸ ರೈತರಿಗೆ 15 ಕೋಟಿ ಬೆಳೆ ಸಾಲ, 750 ಹೊಸ ರೈತರಿಗೆ 52.00 ಕೋಟಿ ಮಧ್ಯಾವಧಿ ಸಾಲ, ಅಂದರೆ ಭೂ ಅಭಿವೃಧ್ಧಿ ಸಾಲ, ಕುರಿ ಸಾಕಾಣಿಕೆ ಸಾಲ, ಹಸು ಸಾಕಾಣಿಕೆ ಸಾಲ, ರೇಷ್ಮೆ ಸಾಕಾಣಿಕೆ ಮತ್ತು ಟ್ರಾಕ್ಟರ್ ಸಾಲ ನೀಡಲು ಮತ್ತು 285.10 ಕೋಟಿ ಕೃಷಿಯೇತರ ಸಾಲ ನೀಡುವ ಗುರಿ ಹೊಂದಿದೆ ಎಂದರಲ್ಲದೆ,
ಈ ಸಾಲಗಳನ್ನು ನೀಡಲು ಠೇವಣಿ ಸಂಗ್ರಹಿಸುವುದು ಬಹಳ ಮುಖ್ಯವಾಗಿರುತ್ತದೆ, ಆದ್ದರಿಂದ ದಿನಾಂಕ : 31-03-2025ರ ಅಂತ್ಯಕ್ಕೆ 63.068.73 ಲಕ್ಷ ಠೇವಣಿ ಇದ್ದು, 2025-26 ನಾ ಸಾಲಿಗೆ 73.968.49 ಲಕ್ಷ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂಬುದಾಗಿ ಹೇಳಿದರು.
ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಮುಖ್ಯವಾಗಿ ಕಾರಣೀಭೂತರಾದ ಎಲ್ಲಾ ಅಭಿಮಾನಿ ಗ್ರಾಹಕರಿಗೆ ಬ್ಯಾಂಕಿನ ಎಲ್ಲಾ ವರ್ಗದ ಸದಸ್ಯ ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಿಬ್ಬಂದಿವರ್ಗಕ್ಕೆ ಹಾಗೂ ಎಲ್ಲಾ ಸದಸ್ಯರಿಗೆ, ಬ್ಯಾಂಕಿನ ಲೆಕ್ಕ ಪರಿಶೋಧಕರಿಗೆ ಹಾಗೂ ಸಹಕಾರಿ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರಿಗೂ ಬ್ಯಾಂಕ್ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದಿಂದ “ಸಹಕಾರಿ ರತ್ನ” ಪ್ರಶಸ್ತಿ ಪಡೆದ ಕ್ಷೇತ್ರದ ಸಚಿವ ಡಿ.ಸುಧಾಕರ್ ಹಾಗೂ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಉತ್ತಮ ಸಹಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಹೆಚ್.ಬಿ.ಮಂಜುನಾಥ್, ನಿರ್ದೇಶಕರುಗಳಾದ ಟಿ.ರಘುಮೂರ್ತಿ, ಎಸ್.ಆರ್.ಗಿರೀಶ್, ಹೆಚ್.ಟಿ.ನಾಗೀರೆಡ್ಡಿ, ಎಂ.ನಿಶಾನಿ ಜಯಣ್ಣ, ಶ್ರೀಮತಿ ವಿನೋಧಸ್ವಾಮಿ, ಕೆ.ಜಗ್ಗಣ್ಣ, ಹೆಚ್.ಎಂ.ದ್ಯಾಮಣ್ಣ, ರಘುರಾಮರೆಡ್ಡಿ, ಪಿ.ತಿಪ್ಪೇಸ್ವಾಮಿ, ಟಿ.ಮಹಂತೇಶ್, ಡಾ.ಕೆ.ಅನಂತ್, ಓ.ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಶರೀಫ್, ಸಹಕಾರ ಸಂಘಗಳ ಉಪನಿಬಂಧಕರಾದ ಆರ್.ಎಸ್.ದಿಲೀಪ್ ಕುಮಾರ್, ಚಾರ್ಟೆಡ್ ಅಕೌಂಟೆಂಟ್ ಎ.ಸುಮಂತ್, ವೃತ್ತಿಪರ ನಿರ್ದೇಶಕರಾದ ಸಿ.ಇ.ಮಹೇಶ್ವರಪ್ಪ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading