September 14, 2025
1755956219688.jpg


ಹಿರಿಯೂರು:
ತಾಲ್ಲೂಕಿನಲ್ಲಿ ಮಾರಿಕಣಿವೆ ಎಂದೇ ಹೆಸರಾಗಿರುವ ಪ್ರವಾಸ ತಾಣ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಬೋಟಿಂಗ್ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಪ್ರವಾಸಿಗರ ಬಹುದಿನದ ಬೇಡಿಕೆಯು ಈಡೇರುವ ದಿನಗಳು ಸನ್ನಿಹಿತವಾಗಿರುವುದು ಸಂತಸದ ವಿಚಾರವಾಗಿದೆ.
ಬಯಲುಸೀಮೆಯಲ್ಲಿ ಸದಾ ಹಚ್ಚಹಸಿರಿನಿಂದ ಚಿಮ್ಮುವ ಈ ವಾಣಿವಿಲಾಸಸಾಗರ ಜಲಾಶಯವು ಪ್ರಕೃತಿ ಸೊಬಗನ್ನು ತನ್ನಲ್ಲಿ ಮೈತುಂಬಿಕೊಂಡು ತನ್ನಡೆಗೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ವಾಣಿವಿಲಾಸಸಾಗರ ಜಲಾಶಯವು ಹಿನ್ನೀರಿನಲ್ಲಿ ಪ್ರವಾಸಿಗರಿಗೆ ದೋಣಿವಿಹಾರ ಸೇವೆಯನ್ನು ಒದಗಿಸಬೇಕೆಂಬುದು ಬಹುದಿನದಿಂದ ಬಹುಜನರ ಬೇಡಿಕೆಯಾಗಿತ್ತು.

ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ವಿಧಾನಸಭಾ ಅಧಿವೇಶನದಲ್ಲಿ ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿದೆ. ವಾಣಿವಿಲಾಸಸಾಗರ ಜಲಾಶಯದಲ್ಲಿ ರಾಜ್ಯೋತ್ಸವ ದಿನದಂದು ಬೋಟಿಂಗ್ ಆರಂಭಿಸಲಾಗುವುದು.
ಅಲ್ಲದೆ, ವಾಣಿವಿಲಾಸಸಾಗರ ಜಲಾಶಯದಲ್ಲಿ ಬೋಟಿಂಗ್, ಜೆಟ್ ಸ್ಕೀಂ, ಬನಾನಾ ರೈಡ್ ಮುಂತಾದ ಚಟುವಟಿಕೆಗಳನ್ನು ನಡೆಸಲು ಜಲಸಂಪನ್ಮೂಲ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ನಿರೀಕ್ಷಿಸಲಾಗುತ್ತಿದೆ. ಪತ್ರ ದೊರೆಯುತ್ತಲೇ ಹೂಡಿಕೆದಾರರನ್ನು ಆಯ್ಕೆ ಮಾಡಿ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂಬುದಾಗಿ ಸಚಿವರು ಹೇಳಿದರು.
ಈ ಸಂಬಂಧ ಈಗಾಗಲೇ ಅಗತ್ಯ ಸಿದ್ಧತೆ ನಡೆದಿದ್ದು, ಬರುವ ನವಂಬರ್ 1ರಿಂದ ಜಲಸಾಹಸ ಕ್ರೀಡೆ ಆರಂಭ ನಿಶ್ಚಿತವಾಗಿದೆ. ಇದರೊಂದಿಗೆ ಮಧುಗಿರಿ ಏಕಶಿಲಾ ಬೆಟ್ಟ, ಸೇರಿದಂತೆ ರಾಜ್ಯದ 11ಪ್ರವಾಸಿತಾಣಗಳಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ.)ದಲ್ಲಿ ರೋವ್ ವೇ ಅಭಿವೃದ್ಧಿ ಪಡಿಸಲು ಕಾರ್ಯಸಾಧ್ಯತಾ ವರದಿ ಸಲ್ಲಿಕೆಯಾಗಿದ್ದು, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಿಂದ ಅನುಮೋದನೆ ಪಡೆಯುವುದು ಬಾಕಿ ಇದೆ ಎಂದಿದ್ದಾರೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಜನಪರ ಕಾಳಜಿಗೆ ಸಾಕ್ಷಿಯಾಗಿರುವ ಈ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಹಿನ್ನೀರಿನಲ್ಲಿ ಜಲಸಾಹಸ ತರಬೇತಿ ವ್ಯವಸ್ಥೆ ಇದ್ದರೂ ಪ್ರವಾಸಿಗರಿಗೆ ಮಾತ್ರ ಯಾವುದೇ ಅವಕಾಶ ಇಲ್ಲ. ಈ ಸೌಲಭ್ಯ ಆರಂಭಿಸಿದರೆ ಪ್ರವಾಸಿಗರಿಗೂ ಸಂತಸ ಹಾಗೂ ಸರ್ಕಾರಕ್ಕೂ ಆದಾಯ, ಆ ಹಿನ್ನಲೆಯಲ್ಲಿ ಈ ಮಹತ್ವದ ಬೆಳವಣಿಗೆಯು ಪ್ರವಾಸಿಗರಲ್ಲಿ ಕಾತುರತೆಯನ್ನು ಹೆಚ್ಚಿಸಿದೆ.
ಶ್ರೀಯುತ ಗೂಳಿಹಟ್ಟಿಶೇಖರ್ ಅವರು 2008ರಲ್ಲಿ ಕ್ರೀಡಾ ಸಚಿವರಾಗಿದ್ದಾಗ ವಾಣಿವಿಲಾಸಸಾಗರ ಜಲಾಶಯದಲ್ಲಿ ಹಿನ್ನೀರಿನಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರದ ನೇತೃತ್ವದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು ಸ್ಥಾಪಿಸಿದ್ದರು.ಅಂದಿನಿಂದಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಕ್ ಜಲಸಾಹಸ ಕ್ರೀಡಾ ತರಬೇತಿಯನ್ನು ನೀಡಲಾಗುತ್ತಿದೆ.
ಅಷ್ಟೇ ಅಲ್ಲದೆ, ನಾನಾ ಸಂಘಸಂಸ್ಥೆ, ಇಲಾಖೆಯ ಸಿಬ್ಬಂದಿಗೆ ಈಜು, ರ್ಯಾಪಿಂಗ್, ಕಾಯಕಿಂಗ್, ವೀಂಗ್ ಸರ್ಫಿಂಗ್, ಕೋನೋ, ಬಾನಾನರೈಡ್, ಸೈಕ್ಲಿಂಗ್, ನೇಚರ್ ಸ್ಟಡಿ, ಪಕ್ಷಿಗಳ ವೀಕ್ಷಣೆ, ಹಾವುಗಳಿಂದ ರಕ್ಷಣೆ ಪಡೆಯುವ ಬಗ್ಗೆ, ಪಕ್ಷಿಗಳ ವೀಕ್ಷಣೆ, ಚಿತ್ರಕಲೆ ಇತ್ಯಾದಿ ವಸತಿ ಹಾಗೂ ಊಟ ಸಹಿತ ತರಬೇತಿ ನೀಡಲಾಗುತ್ತಿದೆ. ಆದರೆ ಸಾರ್ವನಜನಿಕರು ಹಾಗೂ ಪ್ರವಾಸಿಗರಿಗೆ ಇಲ್ಲಿಗೆ ಪ್ರವೇಶವಿಲ್ಲ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading