September 16, 2025
IMG-20250523-WA0169.jpg

‘ 🔴ಕವಿ ಇನಾಯತ್ ಪಾಷಾ ಅವರ ನೆಲಮುಗಿಲು- ಸುಮಧುರ ಭಾವಗಳ ಒಡಲು.’🌈

ಸುಂದರದ ರಸ ನೂರು;ಸಾರವದರೊಳು* ಮೂರು/
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ//
ಒಂದರಿಂದೊಂದು ಬೆಳೆಯಾದಂದು ಜೀವನವು/ ಚೆಂದಗೊಂಡುಜ್ಜುಗವೊ-ಮಂಕುತಿಮ್ಮ //

ನೂರೂರು ಸುಂದರದ ರಸಗಳಿವೆ. ಅವುಗಳಲ್ಲಿ ಸಾರ ಮೂರರಲ್ಲಿ ಮಾತ್ರ ಅಡಗಿಕೊಂಡಿವೆ. ಅವುಗಳೇ ಮೋಹ,ಕರುಣೆ,& ಶಾಂತಿಗಳು. ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವುದರಿಂದಲೇ ಜಗತ್ತು ಬೆಳೆಯುವುದು. ತನ್ನಂತೆಯೇ ಇರುವ ಇತರ ಜೀವಿಗಳು ಕಷ್ಟದಲ್ಲಿರುವಾಗ ಅವುಗಳ ಮೇಲೆ ಕರುಣೆಗಳನ್ನು ತೋರಿಸುವುದರಿಂದ ಜೀವಿಗೆ ಶಾಂತಿ ದೊರಕುತ್ತದೆ. ಒಂದರಿಂದ ಮತ್ತೊಂದು ಬೆಳೆದಾಗ ಜೀವನವು ಚೆಂದವಾಗುವುದು ಎಂದು ಡಿವಿಜಿಯವರು ಈ ಕಗ್ಗದಲ್ಲಿ ತಿಳಿಸಿದ್ದಾರೆ. ಈ ಕಗ್ಗದಂತೆ ತಮ್ಮ ಜೀವನದಲ್ಲಿ ಪ್ರೀತಿ,ಸ್ನೇಹ,ಕರುಣೆ ಶಾಂತಿಯ ಗುಣಗಳನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೊಂದಿಗೂ ಸೌಮ್ಯಸ್ವಭಾವದಿಂದ ವರ್ತಿಸುವ ಸರಳ ಸಜ್ಜನಿಕೆಯ ಕವಿ ಎಸ್.ಇನಾಯತ್ ಪಾಷಾ ಸರ್ ಅವರ ಮೊದಲ ಕವನ ಸಂಕಲನನೆಲಮುಗಿಲು’.ಆಗಿದೆ. ಈ ಕೃತಿಯ ಶೀರ್ಷಿಕೆಯೇ ನಮಗೇನೋ ಹೊಸ ಅನುಭವ ನೀಡುತ್ತದೆ ಎಂದೇ ಹೇಳಬಹುದು. ಕಾರಣ *ನೆಲ & ಮುಗಿಲು* *ಈ ಎರಡರ ಮಧ್ಯೆಯೇ ನಮ್ಮ ಜೀವನದ* *ಪ್ರತಿ ಮಗ್ಗಲು* *ಪ್ರಾರಂಭವಾಗುವುದು* *ಹಾಗೆಯೇ ಅಂತ್ಯವೂ ಕೂಡ!* *ಅಂತಹ* *ಒಳಾರ್ಥವನ್ನ ಹೊಂದಿದ* ' *ನೆಲಮುಗಿಲು* ' ಅನ್ನುವ ಶೀರ್ಷಿಕೆಯ ಕವನ ಸಂಕಲನದಲ್ಲಿ ದೇವರು,ತಾಯಿ, ಬಾಲ್ಯ,ಯೌವನ, ಕಾಯಕ,ದಾಂಪತ್ಯ,ಸಂತಾನ, ಬದುಕಿನ ಶಿಸ್ತು,ಪ್ರಕೃತಿಯ ಸೊಬಗು, ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಬಂದುಹೋಗುವ ನಾನಾ ಬಗೆಯ ಆಶಯಗಳನ್ನ ಒಳಗೊಂಡ ಒಟ್ಟು ೭೦ ಕವಿತೆಗಳನ್ನ ತಮ್ಮ ಅನುಭವ ಮೂಸೆಯಿಂದ ರಚಿಸಿದ್ದಾರೆ.

ಭಾವಗಳ ಒಡಲಾಗಿರುವ ನೆಲಮುಗಿಲಿನ ಕೃತಿಯಲ್ಲಿನ ಕೆಲವು ಕವಿತೆಗಳನ್ನ ಇಲ್ಲಿ ಪ್ರಸ್ತಾಪಿಸುವುದಾದರೆ…..

🌹 ದೇವನಿರುವನು 🌹

ದೇವನಿರುವನು ಅವನು ಕಾಣದಿರುವನು
ನನ್ನಲ್ಲಿರುವನು ಅವನು ನಿನ್ನಲ್ಲಿರುವನು
ಉಸಿರಿನಲ್ಲಿರುವನು ಅವನು ಹಸಿರಲಿರುವನು ದೇವರಿರುವನು ಅವನ ಕಾಣದಾದೆನು….

ದ್ವೇಷಾಸೂಯೆ ಬಿಡು ಅಲ್ಲಿ ಅವನು ಬರುವನು
ಪ್ರೀತಿ ಪ್ರೇಮಗಳ ಹಂಚು ಅವನು ಕಾಣಸಿಗುವನು ಮನುಜ, ಜಾತಿ ಎಂದು ಬಿಡುವ ಅವನು ನಿನಗೊಲಿಯುವನು
ದೇವನಿರವನು ಅವನ ಕಾಣದಾದೆನು

ಅನಾದಿ ಕಾಲದಿಂದಲೂ ಮನುಷ್ಯನ ಕಲ್ಪನೆಗೆ ನಿಲುಕದೆ, ಪರಿಪೂರ್ಣ ಒಮ್ಮತವಿಲ್ಲದೆ ಇರುವ ಒಂದು ವಿಚಾರವೆಂದರೆ ದೇವರು ! ಎಂಬುದನ್ನ ನಾವು ಘಂಟಾಘೋಷವಾಗಿಯೇ ಹೇಳಬಹುದು. ಕಾರಣ ದೇವರು ಎಲ್ಲಿದ್ದಾನೆ ಎನ್ನುವುದಕೆ ಉತ್ತರ ಕಂಡುಕೊಂಡವರಲ್ಲಿಯೇ ಸಾಕಷ್ಟು ವೈರುಧ್ಯಗಳಿವೆ.

ಕೆಲವು ಧರ್ಮಗಳು ದೇವರು ನಿರಾಕಾರವೆಂದರೆ,ಕೆಲವು ಧರ್ಮಗಳು ಆಕಾರವೆನ್ನುತ್ತವೆ, ಕೆಲ ಧರ್ಮಗಳು ದೇವರು ಸರ್ವವ್ಯಾಪಿ ಅಂದರೆ, ಕೆಲವು ಮಾನವ ನಿರ್ಮಿತ ಕಟ್ಟಡಗಳಲ್ಲಿ ಮಾತ್ರ ಇದ್ದಾನೆ ಎನ್ನುತ್ತವೆ! ಇಂತಹ ಗೊಂದಲದ ಗೂಡಾದ ‘ ದೇವರು ‘ ಕುರಿತ ಇನಾಯತ್ ಪಾಷಾ ಸರ್ ಅವರು ಈ ಕವಿತೆಯಲ್ಲಿ, ಇಡೀ ಮಾನವಕುಲ ದೇವರೆಂದರೆ ಯಾರು? ಎಲ್ಲಿದ್ದಾನೆ…ಎನ್ನುವ ಈ ಪ್ರಶ್ನೆಗೆ ಗೊಂದಲದ ಉತ್ತರಗಳಲ್ಲಿ ತೊಳಲಾಡುತ್ತಿದ್ದಾರೆ. ಅದರ ಅಗತ್ಯವೇ ಇಲ್ಲ; ಕಾರಣ, ದೇವರು ಬೇರೆಲ್ಲೋ,ಕಾಣದ ಜಾಗದಲ್ಲಿ ಇಲ್ಲ! ಈ ಜಗದ ಅಣು ಅಣುವಿನಲ್ಲಿ ದೇವನಿದ್ದಾನೆ. ನಮ್ಮಲ್ಲಿನ ದ್ವೇಷ, ಅಸೂಯೆಗಳನ್ನು ಬಿಟ್ಟು ಪ್ರೀತಿ ಪ್ರೇಮ ಹಂಚಿದರೆ ಅಲ್ಲಿ ದೇವರು ಕಾಣಸಿಗುತ್ತಾನೆ. ಮನುಷ್ಯ ಮನುಷ್ಯರ ಮಧ್ಯೆ ಕಲಹ ತಂದಿಡುವ ಜಾತಿ ವಿಚಾರಗಳನ್ನ ಬಿಟ್ಟು ಮಾನವೀಯತೆಯಿಂದ ಬದುಕಿದರೆ ಅಲ್ಲಿಯೂ ದೇವರು ಕಾಣುವನು. ಪ್ರೀತಿ,ಕರುಣೆ,ಸ್ನೇಹ ಎಲ್ಲೆಲ್ಲಿಹದೊ ಅಂತಹ ಎಲ್ಲಾ ಕಡೆ ದೇವನಿರುವನು ಎಂದು ತುಂಬಾ ದೃಢಮನಸ್ಸಿನಿಂದ ಹೇಳಿರುವುದು ಪ್ರತಿ ಓದುಗನಿಗೂ ಇಷ್ಟವಾಗುತ್ತದೆ ಎಂದೇ ಹೇಳಬಹುದು.

ಇನಾಯತ್ ಪಾಷಾ ಸರ್ ಅವರ ಈ ಕವಿತೆ ರಾಷ್ಟಕವಿ ಜಿ‌.ಎಸ್‌. ಶಿವರುದ್ರಪ್ಪ ಅವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ. ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ…ಈ ಸಾಲುಗಳನ್ನು ನೆನಪಿಸುವುದು ವಿಶೇಷವೆನಿಸುತ್ತದೆ.

🌹 ಆಸೆ 🌹

ಕೂಸೆ ಯಾಕಿಷ್ಟು ನಿನಗೆ ನುಂಗುವ ಆಸೆ
ಇಹ ಬದುಕ ಬದುಕಿ ಮಸಣದ ಇಣುಕಿ
ಹೋಗುವ ಜೀವವಿದು ಎಲ್ಲವ ತೊರೆದು
ಬರಿದಾದ ಕೈಗಳ ನೋಡಿ ಬಾ ಒಮ್ಮೆ
ಮಸಣಕ್ಕೆ ಹೊರಟವರ ವಸ್ತ್ರಕ್ಕಿಲ್ಲ ಕಿಸೆಯು
ಜೀವಿತ ನೀನುಟ್ಟ ಬಟ್ಟೆ ಹೊದ್ದ ಹಾಸಿಗೆಯು
ನೀ ಸತ್ತ ಮೇಲೆ ಮನೆಯವರಿಗೆ ಮೈಲಿಗೆಯು
ಎಲ್ಲವ ಎತ್ತಿ ಬಿಸುಟುವರು ಊರಾಚೆ…
ನೀ ಗಳಿಸಿದ ದುಡ್ಡು ಕೂಡಿಟ್ಟ ಬಂಗಾರ
ಕಟ್ಟಿದ ಅರಮನೆ ಹಾಗೇ ಬಿಸುಟುವರೆ ಸುಮ್ಮನೆ

ಈ ಕವಿತೆ ಬದುಕಿನ ಅದೆಷ್ಟೋ ಸತ್ಯಗಳನ್ನು ತನ್ನೊಳಗಡಿಗಿಸಿಕೊಂಡಿದೆ.
ಮನುಷ್ಯನ ಬೇಡಿಕೆಗಳಿಗೆ ಕೊನೆಯೇ ಇಲ್ಲ ನಾವು ಯಾವಾಗಲೂ ಯಾರನ್ನಾದರೂ ಅಪೇಕ್ಷಿಸುತ್ತಲೇ ಇರುತ್ತೇವೆ. ‘ ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆ ಮತ್ತಿಷ್ಟು ದೊರಕಿದರೆ ಮತ್ತೂ ಇಷ್ಟರಾಸೆ’ ಪುರಂದರ ದಾಸರ ಈ ಮಾತಿನಂತೆ ಈ ರೀತಿಯಾಗಿ ಬೇಕು ಬೇಕೆಂದು ಯಾವಾಗಲೂ ಬೊಬ್ಬೆ ಹಾಕುತ್ತಿರುವ ನಾವು ಜೀವನದ ಸತ್ಯ ತಿಳಿವುದು ಯಾವಾಗ? ಧನ ಸಂಪಾದನೆಯ ಮೋಹ ನಂದುವಂತಹದಲ್ಲ. ಅದು ಉರಿಯುವ ಬೆಂಕಿ ಇದ್ದಂತೆ. ಅದಕೆ ಎಷ್ಟು ವಸ್ತುಗಳನ್ನು ಎಸೆಯೆತ್ತೀರೋ ಅಷ್ಟನ್ನು ದಹಿಸುತ್ತದೆ. ಮತ್ತು ಇನ್ನೂ ದಹಿಸಲು ಕಾತರಿಸುತ್ತದೆ.

ಹಣದ ಹಿಂದೆ ಹೋಗಿ ಮನುಷ್ಯ ಸಕಲ ಸೌಕರ್ಯಗಳನು ತನ್ನದಾಗಿಸಿಕೊಂಡಿದ್ದಾನೆ ನಿಜ. ಆದರೆ….ಇಂದು ಮೆತ್ತನೆಯ ಹಾಸಿಗೆ ಮೇಲೆ ಮಲಗಿದರೂ ನೆಮ್ಮದಿಯ ನಿದ್ದೆ ಮಾಡಲಾಗುತ್ತಿಲ್ಲ, ಮನೆಯಲ್ಲಿ ಭಕ್ಷ್ಯ ಭಕ್ಷ್ಯಭೋಜನಗಳಿದ್ದರೂ ಹೊಟ್ಟೆ ತುಂಬಾ ತನಗೆ ಬೇಕಾದದ್ದನ್ನ ತಿನ್ನಲಾಗುತ್ತಿಲ್ಲ, ಬ್ಯಾಂಕ್ ಖಾತೆಯಲ್ಲಿ ಲಕ್ಷಗಟ್ಟಲೆ ಹಣವಿದ್ದರೂ ಆರೋಗ್ಯದಿಂದ ಬಾಳಲಾಗುತ್ತಿಲ್ಲ! ಇದು ನಮ್ಮ ಬದುಕಿನ ಕಹಿ ಸತ್ಯವಾಗಿದೆ! ಅಷ್ಟೇಯಲ್ಲ ನಾವು ಸತ್ತ ಮೇಲೆ ನಮ್ಮವರಿಗೆ ನಾವು ಮೈಲಿಗೆ ಆಗುತ್ತೇವೆ! ನಾವು ಬಳಸಿದ ವಸ್ತುಗಳನ್ನೆಲ್ಲಾ ಬಿಸಾಡುವ ನಮ್ಮವರು ನಾವು ಗಳಿಸಿದ ಸಂಪತ್ತನ್ನ ಮಾತ್ರ ಬಿಸಾಡುವುದಿಲ್ಲ..ಇದನ್ನರಿಯದ ನಾವು ನಾನು….ನಾನು ನನ್ನವರು ಎಂದು ಶ್ರಮಕ್ಕೆ ಮೀರಿದ ಸಂಪಾದನೆ ಗಳಿಸುತ್ತೇವೆ. ಇದು ತರವಲ್ಲ. ಮನುಷ್ಯ ತನ್ನ ಅಗತ್ಯ ಅವಶ್ಯಕತೆಗಳನ್ನು ಪೂರೈಸುವಷ್ಟು & ಭವಿಷ್ಯಕ್ಕೊಂದಿಷ್ಟು ಎಂದು ಸಂಪಾದಿಸಿದರೆ ಸಾಕು ಅತಿಯಾಸೆ ಒಳ್ಳೆಯದಲ್ಲ ಎಂಬುದನ್ನ ತುಂಬಾ ಸರಳವಾಗಿಯೇ ಕವಿ ಈ ಕವಿತೆಯಲ್ಲಿ ತಿಳಿಸಿದ್ದಾರೆ.

🌹 ತುಟಿ ಬಿಚ್ಚದಿರು 🌹

ತುಟಿ ಬಿಚ್ಚದಿರು ಉಸಿರೆತ್ತದಿರು .
ನಿನ್ನ ನೆತ್ತರು ಹರಿಸುವರಿಲ್ಲಿ
ಸತ್ಯ ನುಡಿಯದಿರು ಮಿಥ್ಯಕೆ ಒಲಿದಿರು
ನಿನ್ನ ಎತ್ತರಕೆ ಕುಳ್ಳಿರಿಸುವರಿಲ್ಲಿ

ಸತ್ಯವಂತರಿಗಿದು ಕಾಲವಲ್ಲ’ ಪುರಂದರದಾಸರ ಮಾತಿನಂತೆ ಈ ಜಗತ್ತೆಲ್ಲವೂ ಕಪಟ & ಸುಳ್ಳುಗಳಿಂದ ತುಂಬಿಹೋಗಿದೆ.ಸತ್ಯವೆನ್ನುವುದು ಯಾರಲ್ಲಿಯೂ ಇಲ್ಲ. ಅಂತಹವರ ಮಧ್ಯೆ ನಿಂತು ಅವರೆದುರು ನಾವು ಬದುಕಿನ ಸತ್ಯ,ಶಿಸ್ತು ನುಡಿದರೆ ಅವರೆಂದಿಗೂ ಅದನ್ನ ಒಪ್ಪುವುದಿಲ್ಲ & ಅನುಸರಿಸುವುದಿಲ್ಲ! ಏಕೆಂದರೆ ಅವರು ಸತ್ಯಪ್ರಿಯರಲ್ಲ! ಸತ್ಯ ಹೇಳುವದ ಬಿಟ್ಟು ಅವರಿಗೆ ಖುಷಿ ನೀಡುವ ಮಿಥ್ಯ ಹೇಳಿದರೆ ನಮ್ಮನ್ನು ಎತ್ತರದಲಿಟ್ಟು ಸಂಭ್ರಮಿಸುತ್ತಾರೆ…. ಎಂದು ಹೇಳುತ್ತಾ…ತಾವು ಕಂಡ ಅಂತಹ ಅಜ್ಞಾನಿಗಳ ಸಣ್ಣತನ, ಮತಿಹೀನತೆಯ ಕುರಿತು ನೋವು,ಸಂಕಟವನ್ನ ಈ ಕವಿತೆಯಲ್ಲಿ ಕವಿ ವ್ಯಕ್ತಪಡಿಸಿರುವುದು ಇಷ್ಟವಾಗುತ್ತದೆ. ಕಾರಣ ‘ಸತ್ಯ& ಅರ್ಥಪೂರ್ಣ ಬದುಕಿನ ಕುರಿತು ಆಲೋಚಿಸುವುದು,ಅನುಸರಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಯಾರಿಗೆ ಅಂತರಂಗದ ಅರಿವು ಗೋಚರವಾಗಿದಿಯೊ ಅಂತಹವರಿಂದ ಮಾತ್ರ ಸಾಧ್ಯವಾಗುತ್ಯದೆ. ಆ ಸಾಲಿಗೆ ಕವಿ ಇನಾಯತ್ ಪಾಷಾ ಸರ್ ಅವರು ಸೇರಿತ್ತಾರೆಂದರೆ ಅತಿಶಯೋಕ್ತಿ ಎನಿಸಲಾರದು!

🌹 ಅಹಮಿಕೆಯ ಕೂಗು 🌹
ಎಂದಿಗೂ ಕೇಳಿಲ್ಲ ಸೂರ್ಯನ ಪಿಸುಮಾತು
ನಾ ಬರುತಿಹೆನು ಎಂದು ಹೇಳುವ ಸೂಚ್ಯವನು
ಜಗವ ಬೆಳಗುತಿಹ ಕಾರ್ಯವನು ಹೇಳುವ ಹೆಗ್ಗಳಿಕೆ
ಇಳಿಸಂಜೆ ತಂಪಾಗಿ ಮರೆಯಾದ ಮೌನಕೆ ಶರಣಾಗಿ
ಯಾಕಿಷ್ಟು ನಿನಗೆ ನಾನೆಂಬ ಅಹಮಿಕೆಯ ಕೂಗು.

‘ಅಹಂಕಾರ ಎನ್ನುವುದು ಸೊಂಪಾಗಿ ಬೆಳೆಯುವ ಗಿಡಕ್ಕೆ ರೋಗವಿದ್ದಂತೆ! ಹಾಗೆಯೇ ವ್ಯಕ್ತಿತ್ವ ವಿಕಸನದ ಹಾದಿಯಲ್ಲಿರುವ ಮನುಷ್ಯನಿಗೂ ಕೂಡ ‘ನಾನು’ ಎಂಬ ಅಹಂಕಾರ ವಾಸಿಯಾಗದ ರೋಗವಿದ್ದಂತೆ ಎಂದೇ ಹೇಳಬಹುದು! ಕಾರಣ ನಮಗರಿವಿಲ್ಲದೇ ನಮ್ಮ ಕುಂಠಿತಕ್ಕೆ ಅದು ಮಾರಕವಾಗುತ್ತಾ ಹೋಗುತ್ತದೆ. ಆದ್ದರಿಂದ ಕವಿ ಈ ಕವಿತೆಯಲ್ಲಿ ಜಗ ಬೆಳಗುವ ಸೂರ್ಯನಿಗೆ ಇರದ ಅಹಂಕಾರ ಹುಲುಮಾನವರಾದ ನಮಗೇಕೆ ಬೇಕು ಎಂದು ಪ್ರಶ್ನಿಸುತ್ತಾ ‘ ಅಹಂಕಾರ ಎಂಬುದು ಮನುಷ್ಯನ ಕೆಟ್ಟ ಅಲಂಕಾರ! ಎಂಬ ಸತ್ಯವನ್ನ ಅರುಹಿದ್ದಾರೆ. ಇದು ಕವಿಯ ಸಹೃದಯತೆಯ ಪ್ರತಿಬಿಂಬವಾಗಿದೆ.

🌹 ನನ್ನೂರು 🌹

ಮುಂಜಾನೆ ಓಣಿಯದು ಅವಸರದ ತಾಣವದು.
ಮಕ್ಕಳ ಓಡಾಟ ಹಸುಕರುಗಳ ಚಿನ್ನಾಟ
ಹಿತ್ತಲಲಿ ಕೈದೋಟ ಬಗೆಬಗೆಯ ರಸದೂಟ
ಜೋಡೆತ್ತು ನೊಗಕಟ್ಟು ಹೊಲದತ್ತ ಸಾಗಿತ್ತು
ತಲೆ ಮೇಲೆ ಬುತ್ತಿಕಟ್ಟು ಉಳುಮೆಯ ತಾಕತ್ತು

ಕವಿಯಾದವರು ಯಾರೇಯಾಗಲಿ ತನ್ನೂರಿನ ಬಗ್ಗೆ ಬರೆಯದೆ ಇರಲಾರರು! ಅದರಂತೆ ಇನಾಯತ್ ಪಾಷಾಸರ್ ಅವರು ಅವರೂರಾದ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆಯಲ್ಲಾದ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಪ್ರಕೃತಿಯ ಮಡಿಲಿನ ಅವರೂರಿನ ಹಳ್ಳಿಯ ಆ ಸೊಗಡನ್ನು ಕವಿಯ ಮನ ಮತ್ತೆ ಮತ್ತೆ ಅದೆಷ್ಟು ಸ್ಮರಿಸುತಿದೆ,ಅದೆಷ್ಟು ಬಯಸುತಿದೆ ಎಂಬುದನ್ನ ಈ ಕವಿತೆ ಸಾರಿ ಸಾರಿ ಹೇಳುವಂತಿದೆ!
ಇವರ ಈ ಕವಿತೆ ನಾವು ಬಾಲ್ಯದಲಿ ಓದಿದ ‘ ನಮ್ಮೂರ ಹಳ್ಳ ಬತ್ತುವುದಿಲ್ಲ,ನಮ್ಮೂರು ಹುಲ್ಲು ಒಣಗುವುದಿಲ್ಲ,ನಮ್ಮೂರೇ ನಮಗೆ ಸವಿಬೆಲ್ಲ’ ಪದ್ಯದ ಸಾಲುಗಳನ್ನ ನೆನಪಿಸುತ್ತಾ… ನಮ್ಮನ್ನು ನಮ್ಮೂರಿನ ಬಾಲ್ಯದ ದಿನಗಳಿಗೆ ಕರೆದೊಯ್ಯೊದಂತೆ ಭಾಸವಾಗುತ್ತದೆ.

🌹 ನಮ್ಮಮಕ್ಕಳೆಲ್ಲಿರುವರು 🌹
ನಮ್ಮ ಮಕ್ಕಳೆಲ್ಲಿರುವರು
ವೈವಿಧ್ಯಮಯ ಆಟಗಳಿಲ್ಲ.
ಮರಕೋತಿ ಲಗೋರಿ ಕುಂಟೆಬಿಲ್ಲೆ ಗೋಲಿ ಗಜ್ಜುಗಗಳಿಲ್ಲ
ಇಂಟರನೆಟ್ ಗೇಮ್ಸಗಳೇ ಅವರಿಗೆ ಗೊತ್ತಿರುವುದೆಲ್ಲಾ
ಕಾಡುಮೇಡು ಅಲೆದಾಟವಿಲ್ಲಾ
ಹಕ್ಕಿ ಪಕ್ಷಿಗಳ ಕಲರವ ಪರಿಚಯವಿಲ್ಲ.ಜೇನು ಕೀಳುವ ಪರಿಪಾಟಲಿಲ್ಲ.ಈಜುವ ಮೋಜು ಅರಿತಿಲ್ಲ
ನಮ್ಮ ಮಕ್ಕಳೆಲ್ಲಿರುವರು

ಹಳ್ಳಿಯಲ್ಲಿ ಹುಟ್ಟಿ ಬೆಳೆದವರು ಯಾರೇಯಾಗಲಿ ಈಗಿನ ಮಕ್ಕಳು ಬೆಳೆಯುವ ರೀತಿಯನ್ನು ನೋಡಿದರೆ ಮನಸ್ಸು ಹಿಂಡಿದಂತಾಗುತ್ತದೆ. ಕಾರಣ ಇಂದಿನ ಮಕ್ಕಳು ನಮ್ಮಂತೆ ಪ್ರಕೃತಿಯ ಮಡಿಲಿನಲಿ ನಲಿಯುತ್ತಿಲ್ಲ, ಝುಳು ಝುಳು ಹರಿಯುವ ನೀರಿನ ಸದ್ದು ಕೇಳುತ್ತಿಲ್ಲ, ಹಕ್ಕಿಗಳ ಕಲರವ ಕೇಳುತ್ತಿಲ್ಲ, ದೇಹ ಮನಸ್ಸು ಅರಳಿಸುವ ಗ್ರಾಮೀಣ ಕ್ರೀಡೆಗಳನ್ನು ಆಡುತ್ತಿಲ್ಲ! ಎಲ್ಲವೂ ಯಾಂತ್ರಿಕವಾಗಿದೆ ಎಂದು ತಮ್ಮ ತುಂಬಾ ನೋವಿನಿಂದ ಹೇಳಿದ್ದಾರೆ.

ಇವಷ್ಟೇಯಲ್ಲದೆ, ಅಮ್ಮ ಕವಿತೆಯಲ್ಲಿ,
ಅಮ್ಮ ಅಮ್ಮ ಅಮ್ಮ ನೀನೆ ನನ್ನ ಉಸಿರಮ್ಮ
ಅಮ್ಮ ಅಮ್ಮ ಅಮ್ಮ ನೀನೆ ನನ್ನ ಬದುಕಮ್ಮ ಎಂದು ಹೇಳುತ್ತಾ…ಕವಿ ತಮ್ಮ ತಾಯಿಯವರಾದ ಶ್ರೀಮತಿ ಖುರ್ಷಿದಮ್ಮನವರು ತಮ್ಮ ಮಕ್ಕಳನ್ನು ಸಾಕಿ ಸಲುಹಲು ಪಟ್ಟ ಕಷ್ಟ,ತಮ್ಮ ತಂದೆಯೊಂದಿಗೆ ಜೊತೆಯಾಗಿ ಕುಟುಂಬ ನಿಲ್ಲಿಸಿದ ಬಗೆಯನು ನೆನೆದು ಪ್ರಶಂಸಿಸುತ್ತಾ… ತಾಯಿಯೇ ತನ್ನ ಉಸಿರೆಂದಿದ್ದಾರೆ, ತಾಯಿಯೇ ತನ್ನ ಬದುಕೆಂದಿದ್ದಾರೆ . ಇಡೀ ಪದ್ಯದ ಕೊನೆಯ ಈ ಎರಡು ಸಾಲುಗಳು ಓದುಗನ ಮನ ಮುಟ್ಟುತ್ತವೆ.

ಮುಂದುವರೆದು
ನಂಬಿ ಆಕೆ ನನ್ನ ನಂಬಿಕೆ’ ಕವಿತೆಯಲ್ಲಿ ತಮ್ಮ ಬಾಳಸಂಗಾತಿ ಶ್ರೀಮತಿ ಆಫ್ರೀನ್ ಅವರೊಂದಿಗಿನ ಒಡನಾಟ ನೆನೆಯುತ್ತಾ….
ನಿನ್ನೆಯವರೆಗೆ ಸೂರ್ಯಕಾಂತೆ
ಈಗಂತೂ ಪ್ರಾಣಕಾಂತೆ…

ಎಂದು ಹೇಳುವ ಮೂಲಕ ಅವರಿರ್ವರ ಪ್ರೇಮವನ್ನು ಬಣ್ಣಿಸುತ್ತಾ, ಆ ಪ್ರೇಮದ ಪ್ರತಿರೂಪವಾಗಿ ಪುಟಾಣಿ ಮೊಹಮ್ಮದ್ ಷಯಾನ್.ಎಸ್.ಐ &
ಷಿಜ್ಹಾ.ಎಸ್.ಐ ಇರ್ವರು
ಜನಿಸಿದ ಸುಮಧರ ಕ್ಷಣಗಳ ಜೊತೆಗೆ ತಮ್ಮ ಒಟ್ಟಾರೆ ದಾಂಪತ್ಯದ ಸವಿನೆನಪುಗಳನ್ನ ಕವಿ ಈ ಕವಿತೆಯಲ್ಲಿ ಜತನದಿ ಕಾಪಿಟ್ಟುಕೊಂಡಿದ್ದಾರೆ.

ಇಂತಹ ಭಿನ್ನ ಭಾವಗಳನ್ನು ಒಳಗೊಂಡ ಕವಿತೆಗಳನ್ನು ರಚಿಸಿ,ವೃತ್ತಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕವಿ ಶ್ರೀ ಇನಾಯತ್ ಪಾಷಾ ಎಸ್ ಅವರ ಸಾಹಿತ್ಯಾಸಕ್ತಿ ಸೋಜಿಗವೆನಿಸುತ್ತದೆ. ಜೊತೆಗೆ ಮೆಚ್ಚುಗೆಯೂ ಆಗುತ್ತದೆ! ಕಾರಣ ಸದಾಕಾಲ ಸಾರ್ವಜನಿಕರೊಂದಿಗೆ ವ್ಯವಹರಿಸುವ ಇವರು ಸಮಯದ ಹೊಂದಾಣಿಕೆ ಮಾಡಿಕೊಂಡು ತಮ್ಮ ಜೀವನದ ಸಿಹಿ-ಕಹಿ ಅನುಭವಗಳನ್ನು ಹೀಗೆ ದಾಖಲೀಕರಿಸಿ ಕನ್ನಡ ಸಾರಸತ್ವ ಲೋಕಕ್ಕೆ ತಮ್ಮದೇಯಾದ ಕೃತಿಗಳನ್ನು ಅರ್ಪಿಸುವ ಮೂಲಕ ಕನ್ನಡಮ್ಮನ ಸೇವೆ ಮಾಡುತಿದ್ದಾರೆ.
ಕವಿಯ ಈ ಆಸಕ್ತಿಗೆ ಶರಣೆಂದು, ದೇವರು ಇವರ &ಇವರ ಕುಟುಂಬಕ್ಕೆ ಸದಾ ಆರೋಗ್ಯಆಯಸ್ಸು,ನೆಮ್ಮದಿ ಕರುಣಿಸಲಿ &ಮುಂದಿನ ಇವರ ಸಾಹಿತ್ಯ ಪಯಣಕೆ ಶುಭವಾಗಲಿ ಎಂದು ಮನಸಾರೆ ಆಶಿಸುತ್ತಾ ನನ್ನ ಲೇಖನಿಗೆ ವಿರಾಮವನ್ನಿಡುತಿದ್ದೇನೆ.
🌹🙏🌹🙏🌹🙏🌹🙏🌹
ಧನ್ಯವಾದಗಳೊಂದಿಗೆ

ಡಿ.ಶಬ್ರಿನಾ ಮಹಮದ್ ಅಲಿ
ಚಳ್ಳಕೆರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading