ಚಿತ್ರದುರ್ಗ ಮಾರ್ಚ್ 23:
ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದ ದೇವರ ದಾಸಿಮಯ್ಯನವರು, ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಗೆ ಭದ್ರ ಬುನಾದಿ ಹಾಕಿದ ಮಹಾಪುರುಷ ಎಂದು ಉಪವಿಭಾಗಾಧಿಕಾರಿ ಡಾ. ಕಾಂತರಾಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದಲ್ಲಿ, ಸಂಸ್ಕøತ ಭೂಯಿಷ್ಠವಾಗಿದ್ದ ಪಂಡಿತರ ಭಾಷೆಯನ್ನು ಜನಸಾಮಾನ್ಯರ ಆಡುಭಾμÉಗೆ ಇಳಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಅದರಲ್ಲಿಯೂ 11ನೇ ಶತಮಾನದ ದೇವರ ದಾಸಿಮಯ್ಯನವರು ಮೊದಲಿಗರು ಎಂದು ಸ್ಮರಿಸಿದ ಅವರು, “ಭಕ್ತಿ ಎಂತಹುದಯ್ಯ ಎಂದರೆ ದಾಸಿಮಯ್ಯ ಮಾಡಿದಂತಹುದಯ್ಯ” ಎಂದು ಸ್ವತಃ ಬಸವಣ್ಣನವರೇ ತಮ್ಮ ವಚನದಲ್ಲಿ ದಾಸಿಮಯ್ಯನವರ ಭಕ್ತಿಯನ್ನು ಕೊಂಡಾಡಿದ್ದಾರೆ ಎಂದರು.
ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ದಾಸಿಮಯ್ಯನವರು, “ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿಯುವ ಆತ್ಮನು, ಹೆಣ್ಣೂ ಅಲ್ಲ ಗಂಡೂ ಅಲ್ಲ” ಎನ್ನುವ ಮೂಲಕ ಆತ್ಮಕ್ಕೆ ಲಿಂಗಭೇದವಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.
ನೇಯ್ಗೆ ಕಾಯಕದಲ್ಲಿ ತೊಡಗಿದ್ದ ದಾಸಿಮಯ್ಯನವರು, ತಮ್ಮ ನಿಷ್ಕಲ್ಮಷ ಭಕ್ತಿಯಿಂದ ದೇವಸ್ಥಾನದ ಬಾಗಿಲುಗಳೇ ತಾವಾಗಿಯೇ ತೆರೆಯುವಂತೆ ಮಾಡಿದ ಪವಾಡ ಪುರುಷರಾಗಿದ್ದರು. ‘ರಾಮನಾಥ’ ಅಂಕಿತನಾಮದಲ್ಲಿ ದಾಸಿಮಯ್ಯನವರು ರಚಿಸಿದ ಸುಮಾರು 176 ವಚನಗಳು ಇಂದಿನ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕಿ ಡಾ.ಗಾಯತ್ರಿ ಉಪನ್ಯಾಸ ನೀಡಿ, “ಹನ್ನೊಂದನೇ ಶತಮಾನದಲ್ಲಿಯೇ ಸಾಮಾಜಿಕ, ಧಾರ್ಮಿಕ ಮತ್ತು ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಶ್ರೀ ದೇವರ ದಾಸಿಮಯ್ಯನವರು ವಚನ ಸಾಹಿತ್ಯದ ಆದ್ಯ ಪ್ರವರ್ತಕ ಹಾಗೂ ಮೂಲಪುರುಷರಾಗಿದ್ದಾರೆ ಎಂದು ತಿಳಿಸಿದರು.
“ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂಬ ಅವರ ವಚನವು ಅಂದಿನ ಕಾಲಘಟ್ಟದಲ್ಲಿ ಹೆಣ್ಣು-ಗಂಡಿನ ಸಮಾನತೆ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ತಮ್ಮ ಪತ್ನಿ ದುಗ್ಗಲೆಯೊಂದಿಗೆ ಕಾಯಕದಲ್ಲಿ ನಿರತರಾಗಿದ್ದ ಅವರು, ಹೆಣ್ಣಿಗೆ ಸಮಾಜದಲ್ಲಿ ಸಮಾನ ಗೌರವ ನೀಡಬೇಕು ಎಂಬ ಪ್ರಗತಿಪರ ಆಲೋಚನೆಯನ್ನು ಅಂದೇ ಹೊಂದಿದ್ದರು ಎಂದರು.
ದಾಸಿಮಯ್ಯನವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ವೈಚಾರಿಕರು. ಅಂದಿನ ಕಾಲದ ಭಕ್ತಿಯ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆಗಳನ್ನು ಅವರು ಕಟುವಾಗಿ ಟೀಕಿಸಿದರು. “ಬೋಳು ತಲೆಯ ಕಂಡರೆ ಭಕ್ತರೆನ್ನಬೇಡ” ಎಂಬಂತಹ ವಚನಗಳ ಮೂಲಕ ವೇಷಧಾರಿಗಳ ಮುಖವಾಡ ಕಳಚಿದರು. ಸಮಾಜದಲ್ಲಿನ ಸುಳ್ಳು ಮತ್ತು ಮೋಸದ ವಿರುದ್ಧ ಅವರು ನಡೆಸಿದ ಹೋರಾಟ ಅದ್ವಿತೀಯವಾದುದು ಎಂದು ತಿಳಿಸಿದರು.
ಇಂದು ನಾವು ಪಾಶ್ಚಿಮಾತ್ಯ ದೇಶಗಳಿಂದ ಪ್ರಭಾವಿತರಾಗಿ ಸ್ತ್ರೀ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಭಾರತೀಯ ಪರಂಪರೆಯಲ್ಲಿ 12ನೇ ಶತಮಾನಕ್ಕಿಂತ ಮೊದಲೇ ದಾಸಿಮಯ್ಯನವರು ಸಮಾನತೆಯ ಬೀಜ ಬಿತ್ತಿದ್ದರು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಆವರಿಸಿರುವ ಮೌಢ್ಯ ಮತ್ತು ಅಜ್ಞಾನದ ಅಂಧಕಾರ ಹೋಗಲಾಡಿಸಲು ಶರಣರ ವಿಚಾರಧಾರೆಗಳು ಇಂದಿಗೂ ದಾರಿದೀಪವಾಗಿವೆ ಎಂದರು. ಆದ್ಯ ವಚನಕಾರ ದೇವರ ದಾಸಿಮಯ್ಯನವರು ವಚನಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸಿದರು. ಇವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ, ಇವರು ನೀಡಿದ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಹಿರಿಯೂರು ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸುರೇಶ್ ಏಕಬೋಟೆ ಮಾತನಾಡಿ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ವಚನಗಳಲ್ಲಿನ ಸತ್ವ ಹಾಗೂ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಇಂದಿನ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಜಯಂತಿ ಎಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಕಳೆದ ಒಂದು ವರ್ಷದಲ್ಲಿ ನಾವು ಸಾಧಿಸಿದ್ದೇನು ಮತ್ತು ಮುಂದಿನ ಒಂದು ವರ್ಷದಲ್ಲಿ ನಾವು ಸಾಗಬೇಕಾದ ಹಾದಿ ಯಾವುದು ಎಂಬ ನಿರ್ಧಾರ ಮಾಡುವ ದಿನವಿದು. ದಾಸಿಮಯ್ಯನವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಶ್ರೀ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರ ಸಾಧಕರಾದ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಸಮುದಾಯದ ಹಿರಿಯ ಡಾ.ಸತ್ಯನಾರಾಯಣ, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಡಿನ್ ಡಾ.ಸುರೇಶ್ ಏಕಬೋಟೆ, ಚಳ್ಳಕೆರೆ ತಾಲ್ಲೂಕು ಮೀರಸಾಬಿಹಳ್ಳಿ ಆಡಳಿತ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಹಾಗೂ ವಿದ್ಯಾರ್ಥಿನಿ ಹರ್ಷಿಣಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ ಅವರು, ನೇಕಾರ ಸಮಾಜದವರ ಸಾಂಸ್ಕøತಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕಾಗಿ ಚಿತ್ರದುರ್ಗ ನಗರದಲ್ಲಿ ಸೂಕ್ತ ನಿವೇಶನ, ನೇಕಾರಿಕೆ ವೃತ್ತಿ ಕೈಗೊಳ್ಳಲು ನಗರದ ಸಮೀಪದಲ್ಲಿ 2 ಎಕರೆ ಜಮೀನು ಹಾಗೂ ದೇವರದಾಸಿಮಯ್ಯ ಜನ್ಮಸ್ಥಳವಾದ ಯಾದಗಿರಿ ಜಿಲ್ಲೆಯ ಮುದನೂರಿನ ಅಭಿವೃದ್ಧಿಗೆ ಶ್ರೀ ದೇವರ ದಾಸಿಮಯ್ಯನವರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಚಿತ್ರದುರ್ಗ ನಗರದ ಯಾವುದಾದರೊಂದು ಪ್ರಮುಖ ವೃತ್ತ ಮತ್ತು ರಸ್ತೆಗೆ ಆದ್ಯ ವಚನಕಾರ ವಿಶ್ವಮಾನ್ಯ ಸಂತ ಶ್ರೀ ದೇವರದಾಸಿಮಯ್ಯನವರ ಹೆಸರನ್ನಿಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ಎಸ್.ಸುರೇಶ್, ಸಹ ಕಾರ್ಯದರ್ಶಿ ಎನ್.ಆರ್.ಶಶಿಧರ್, ಪಟ್ಟಸಾಲಿ ಸಮಾಜದ ಜಿ.ಶ್ರೀನಿವಾಸ್, ದೇವಾಂಗ ಸಮಾಜದ ಗೋವಿಂದಪ್ಪ, ಪದ್ಮಶಾಲಿ ಸಮಾಜದ ಜಿ.ಎನ್.ಚಂದ್ರಶೇಖರ್, ಮುಖಂಡರಾದ ಯೋಗೇಶ್, ಸುರೇಶ್, ರಘು, ಶಕಾಂಬರಿ ಮಹಿಳಾ ಸಮಾಜದ ಶ್ರೀದೇವಿ, ಮಮತಾ, ಜಿಲ್ಲಾ ನೇಕಾರ ಮಹಿಳಾ ಒಕ್ಕೂಟದ ಮಹಿಳಾ ಅಧ್ಯಕ್ಷೆ ಸಿ.ಮಲ್ಲಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಕೆ.ಹೆಚ್.ಭಾಗ್ಯಮ್ಮ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಿರೂಪಿಸಿದರು.
============
About The Author
Discover more from JANADHWANI NEWS
Subscribe to get the latest posts sent to your email.