ಚಿತ್ರದುರ್ಗ ಜ. 23 :
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಟೋರಿಕ್ಷಾ ಕ್ಯಾಬ್ ಗಳು ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ಸಂಚರಿಸಲು ಅವಶ್ಯವಿರುವ ದಾಖಲಾತಿಗಳನ್ನು ಸಿಂಧುಗೊಳಿಸಿಕೊಂಡು ಕಾರ್ಯಾಚರಣೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳಿಸಿಂಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಟೋರಿಕ್ಷಾ ಕ್ಯಾಬ್‍ಗಳು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ವ್ಯಾಪ್ತಿಯಲ್ಲಿ ಸಂಚರಿಸಲು ಅವಶ್ಯವಿರುವ ದಾಖಲಾತಿಗಳಾದ ರಹದಾರಿ, ವಾಹನದ ವಿಮೆ ಪತ್ರ, ಅರ್ಹತಾ ಪತ್ರ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹಾಗೂ ವಾಹನ ಚಾಲನೆ ಮಾಡುವ ಚಾಲಕರು ಚಾಲನಾ ಅನುಜ್ಞಾ ಪತ್ರ, ಬ್ಯಾಡ್ಜ್ ಅನ್ನು ವಾಯಿದೆ ಹೊಂದಿರುವಂತೆ ಸಿಂಧುಗೊಳಿಸಿಕೊಂಡಿರಬೇಕು. ಪೊಲೀಸ್ ಇಲಾಖೆಯವರಿಂದ ನೀಡಲ್ಪಡುವ ಗುರುತಿನ ಸಂಖ್ಯೆಯನ್ನು ಪಡೆದು, ಸಂಬಂಧಪಟ್ಟ ತಾಲ್ಲೂಕು, ಹೋಬಳಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ವಾಹನ ಕಾರ್ಯಾಚರಣೆ ಮಾಡಲು ಆಟೋರಿಕ್ಷಾ ವಾಹನ ಮಾಲೀಕರು / ಚಾಲಕರುಗಳಿಗೆ ಸೂಚನೆ ನೀಡಲಾಗಿದೆ. ಇವಿಷ್ಟೂ ದಾಖಲೆಗಳನ್ನು ಸಿಂಧುಗೊಳಿಸಿಕೊಂಡು ಕಾರ್ಯಾಚರಣೆ ಮಾಡಲು 2026 ರ ಜನವರಿ ಅಂತ್ಯದವರೆಗೆ ಕಾಲಮಿತಿ ನಿಗದಿಪಡಿಸಲಾಗಿದೆ. ನಂತರದ ಅವಧಿಯಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ಪ್ರವರ್ತನಾ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ರಹದಾರಿ, ವಾಹನದ ವಿಮೆ ಪತ್ರ, ಅರ್ಹತಾ ಪತ್ರ, ಸಿಂಧುವಾಗಿರದೇ ಇರುವ ದಾಖಲಾತಿಗಳು, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಗೂ ಚಾಲನಾ ಅನುಜ್ಞಾ ಪತ್ರ ಹೊಂದಿರದ ವಾಹನ ಚಾಲಕರು, ಸಿಂಧುವಾಗಿರುವ ದಾಖಲೆಗಳನ್ನು ಹೊಂದಿರದ ವಾಹನಗಳು ಪತ್ತೆಯಾದಲ್ಲಿ, ಅಂತಹ ವಾಹನಗಳನ್ನು ಜಪ್ತು ಮಾಡಿ, ಮೊಟಾರು ವಾಹನ ಕಾಯ್ದೆ 1988 ರ ಕಲಂ 200 ರ ಅಡಿ ದಂಡ ವಿಧಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳಿಸಿಂಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.