January 29, 2026
FB_IMG_1769187474398.jpg

ಕರ್ನಾಟಕ ವಾರ್ತೆ ಜ.23:
ರಾಜ್ಯದ ಬರುವ 2026-27 ನೇ ಬಜೆಟ್‍ನಲ್ಲಿ ಅಳವಡಿಸುವ ಯೋಜನೆಗಳು ಅಭಿವೃದ್ಧಿಪರ, ಜನರ ಭಾವನೆ ಹಾಗೂ ಆಶೋತ್ತರಗಳಿಗೆ ಅನುಗುಣವಾಗಿ ಇರಬೇಕು. ಇದರ ಆಧಾರದ ಮೇಲೆ ಬಜೆಟ್ ರೂಪಿತವಾಗಬೇಕು ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಹೇಳಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ, ಸ್ಥಳೀಯ ಸಂಸ್ಥೆಗಳ ಮೂಲಕ ತಳಮಟ್ಟದಿಂದ ಯೋಜನೆ ರೂಪಿಸುವ ಕುರಿತು ಗ್ರಾಮ, ತಾಲ್ಲೂಕು, ಜಿಲ್ಲೆ ಹಾಗೂ ಇತರೆ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈವರೆಗೂ ಯೋಜನೆಗಳು ಬೆಂಗಳೂರು ಅಥವಾ ದೆಹಲಿಯ ಮಟ್ಟದಲ್ಲಿ ಸಿದ್ಧವಾಗುತ್ತಿದ್ದವು. ಆದರೆ ಇನ್ನು ಮುಂದೆ ಜನರ ಭಾವನೆಗಳಿಗೆ ಅನುಗುಣವಾಗಿ ತಳಮಟ್ಟದಿಂದಲೇ ಯೋಜನೆಗಳು ರೂಪಿತವಾಗಬೇಕು ಎಂಬ ಆಶಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರಕ ಅವಕಾಶ ನೀಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರು ಕೇವಲ ಬಜೆಟ್ ಚರ್ಚೆಯಲ್ಲಿ ಮಾತ್ರ ಭಾಗವಹಿಸುತ್ತಿದ್ದರು. ಆದರೆ ಯೋಜನಾ ತಯಾರಿಕೆ ಪ್ರಕ್ರಿಯೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಈ ವ್ಯವಸ್ಥೆಗೆ ಬದಲಾವಣೆ ತರುವ ಮೂಲಕ ಜನರ ಅಗತ್ಯಗಳಿಗೆ ತಕ್ಕಂತೆ ಆಡಳಿತ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಜನಪ್ರತಿನಿಧಿಗಳು ಕೇವಲ ಅಧಿಕಾರ ಅನುಭವಿಸದೇ, ಜನರ ಆಶೋತ್ತರಗಳಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿಯಾಗಬೇಕು ಎಂದು ಡಿ.ಆರ್. ಪಾಟೀಲ್ ಅಭಿಪ್ರಾಯಪಟ್ಟರು.
ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಲಿ:
************
ಮಹಾತ್ಮಾ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ದ ಕನಸನ್ನು ನನಸು ಮಾಡಲು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನಬದ್ಧವಾಗಿ ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಡಿ.ಆರ್.ಪಾಟೀಲ್ ಈ ಸಂದರ್ಭದಲ್ಲಿ ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಪಾತ್ರವಿದೆ ಎಂದು ಭಾವಿಸಬೇಕು. ಗ್ರಾಮ ಪಂಚಾಯತ್ ಮಟ್ಟದಿಂದಲೇ ಈ ಜವಾಬ್ದಾರಿಯುತ ಭಾವನೆ ಮೂಡಿದಾಗ ಮಾತ್ರ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯ. ಅಧಿಕಾರ ವಿಕೇಂದ್ರೀಕರಣದ ಮೂಲ ಉದ್ದೇಶವನ್ನು ಈಡೇರಿಸಲು ನಾವೆಲ್ಲರೂ ಬದ್ಧರಾಗಬೇಕಿದೆ. ಪಂಚಾಯತ್ ರಾಜ್ ವ್ಯವಸ್ಥೆಯು ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗದೆ, ಜನರ ಭಾವನೆಗಳಿಗೆ ಸ್ಪಂದಿಸುವ ವೇದಿಕೆಯಾಗಬೇಕು ಎಂದು ಡಿ.ಆರ್.ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಗ್ರಾಮ ಸಭೆಯ ನಿರ್ಣಯ ಬದಲಿಸುವ ಶಕ್ತಿ ಸಿಎಂ ಅಥವಾ ಪ್ರಧಾನಿಗೂ ಇಲ್ಲ:
*************
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳೇ ಅತ್ಯಂತ ಪ್ರಬಲವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಬದಲಿಸುವ ಅಧಿಕಾರ ಮುಖ್ಯಮಂತ್ರಿಗಳಿಗಾಗಲಿ ಅಥವಾ ಪ್ರಧಾನ ಮಂತ್ರಿಗಳಿಗಾಗಲಿ ಇಲ್ಲ ಎಂದು ಆರ್.ಡಿ. ಪಾಟೀಲ್ ಅವರು ಪ್ರತಿಪಾದಿಸಿದರು.
ಸ್ಥಳೀಯ ಸಂಸ್ಥೆಗಳೇ ನಿಜವಾದ ಸರ್ಕಾರಗಳು ಸಂವಿಧಾನದ ಆಶಯದಂತೆ ಗ್ರಾಮ ಪಂಚಾಯತ್‍ಗಳು ಕೇವಲ ಅಭಿವೃದ್ಧಿ ಸಂಸ್ಥೆಗಳಲ್ಲ, ಅವು ‘ಗ್ರಾಮ ಸರ್ಕಾರ’ಗಳಾಗಿ ಕೆಲಸ ಮಾಡಬೇಕು. ಅದೇ ರೀತಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‍ಗಳು ಆಯಾ ಹಂತದ ಸರ್ಕಾರಗಳಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ಹೊಂದಿವೆ ಎಂದು ಆರ್.ಡಿ.ಪಾಟೀಲ್ ತಿಳಿಸಿದರು.
ಜಾಗೃತಿಗಾಗಿ ಅಭಿಯಾನಕ್ಕೆ ಸೂಚನೆ:
************
ಬರುವ ಜನವರಿ 26 ರ ಗಣರಾಜ್ಯೋತ್ಸವದ ಒಳಗೆ ಪ್ರತಿಯೊಂದು ಮನೆಗೆ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಜವಾಬ್ದಾರಿ ಹಾಗೂ ಅಧಿಕಾರಗಳ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚನೆ ನೀಡಿದರು. ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದರೆ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ. ಈ ವಿಷಯದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಆರ್.ಡಿ.ಪಾಟೀಲ್ ಹೇಳಿದರು.
ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ:
************
ದಶಕಗಳಿಂದ ಬರಗಾಲದ ನೆರಳಿನಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಸಮಗ್ರ ಬದಲಾವಣೆಗೆ ಜಿಲ್ಲಾಡಳಿದಿಂದ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್.ಟಿ ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯ ಪ್ರಮುಖ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಅಂತಿಮ ಹಂತ ತಲುಪಿದ್ದು, ಮುಂದಿನ 3-4 ತಿಂಗಳಲ್ಲಿ ಜಿಲ್ಲೆಯ ಭೂಮಿಗೆ ನೀರು ಹರಿಯುವ ನಿರೀಕ್ಷೆಯಿದೆ. ಇದು ಕೃಷಿ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಜಿಲ್ಲೆಯ ಆರ್ಥಿಕತೆಗೆ ಬಲ ತುಂಬಲು ಇಲ್ಲಿನ ಸಮೃದ್ಧ ಖನಿಜ ಸಂಪತ್ತನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಮ್ಯಾಂಗನೀಸ್, ಕಬ್ಬಿಣದ ಅದಿರು ಹಾಗೂ ಸುಣ್ಣದ ಕಲ್ಲಿನ ಗಣಿಗಾರಿಕೆಯಿಂದ ಬರುವ ರಾಯಧನವನ್ನು ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಆಡಳಿತಾತ್ಮಕವಾಗಿ ಜಿಲ್ಲೆಯನ್ನು ಚುರುಕುಗೊಳಿಸಲು 375 ಹೊಸ ಗ್ರಾಮಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ರಾಜ್ಯದಲ್ಲೇ ಅತಿ ಹೆಚ್ಚು ಎಸ್.ಸಿ ಹಾಗೂ ಎಸ್.ಟಿ ಜನಸಂಖ್ಯೆ ಹೊಂದಿರುವ ಜಿಲ್ಲೆಯಾಗಿರುವುದರಿಂದ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ತಳಮಟ್ಟದ ಅಗತ್ಯತೆಗಳನ್ನು ಆಧರಿಸಿ ಸಿದ್ಧಪಡಿಸಲಾದ ಯೋಜನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಜಿಲ್ಲಾಧಿಕಾರಿ ವೆಂಕಟೇಶ್.ಟಿ ತಿಳಿಸಿದರು.
ಜಿಲ್ಲಾ ಅಭಿವೃದ್ಧಿಗೆ ರೂ.6,085 ಕೋಟಿ ಕ್ರಿಯಾಯೋಜನೆ: ಫೆ.12ಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಕೆ
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯತ್ 2026-27 ನೇ ಸಾಲಿಗಾಗಿ ಒಟ್ಟು ರೂ.6,085.97 ಕೋಟಿಗಳ ಬೃಹತ್ ಅನುದಾನದ ಬೇಡಿಕೆಯನ್ನು ಸಿದ್ಧಪಡಿಸಿದೆ. ಈ ಅಂತಿಮ ವರದಿಯನ್ನು ಫೆಬ್ರವರಿ 12 ರಂದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಿಇಒ ಡಾ.ಆಕಾಶ್ ತಿಳಿಸಿದರು.
ಈ ಯೋಜನೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜನಸಂಖ್ಯೆ ಆಧಾರಿತ ಎಸ್‍ಸಿಪಿ (ರೂ.2,567 ಕೋಟಿ) ಮತ್ತು ಟಿಎಸ್‍ಪಿ (ರೂ.1,102 ಕೋಟಿ) ಯೋಜನೆಗಳ ಪಾಲು ಶೇ. 50ಕ್ಕಿಂತ ಹೆಚ್ಚಿದೆ. ಶಿಕ್ಷಣ ಕ್ಷೇತ್ರಕ್ಕೆ ಸಿಂಹಪಾಲು ಅನುದಾನ ಮೀಸಲಿಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ ರೂ.550 ಕೋಟಿ ಬೇಡಿಕೆ ಇಡಲಾಗಿದೆ. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಿದ್ಧಪಡಿಸಲಾದ ಈ ವರದಿಯು ಜಿಲ್ಲೆಯ ಆರ್ಥಿಕ ಮತ್ತು ಭೌತಿಕ ಪ್ರಗತಿಗೆ ವೇಗ ನೀಡುವ ನಿರೀಕ್ಷೆಯಿದೆ ಎಂದರು.
ಗ್ರಾ.ಪಂ. ಮಟ್ಟದಿಂದಲೇ ಕೃಷಿ ಯೋಜನೆಗಳ ಅನುμÁ್ಠನಕ್ಕೆ ಸಿದ್ದತೆ :
************ರೈತರ ಬೇಡಿಕೆಗಳಿಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಅಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಸಭೆಯಲ್ಲಿ ಹೇಳಿದರು. ಗ್ರಾಮ ಸಭೆಗಳ ಮೂಲಕ ಸಂಗ್ರಹಿಸಿದ ಈ ಎಲ್ಲಾ ಬೇಡಿಕೆಗಳನ್ನು ಮೊದಲು ತಾಲೂಕು ಮಟ್ಟದಲ್ಲಿ, ನಂತರ ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಲಾಗುತ್ತದೆ. ರೈತರಿಗೆ ಹೊಸ ತಳಿಗಳ ಪರಿಚಯ ಮತ್ತು ಆಧುನಿಕ ಬೆಳೆ ಪದ್ಧತಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಯಾಂತ್ರೀಕರಣ ಮತ್ತು ಸೂಕ್ಷ್ಮ ನೀರಾವರಿ ಉತ್ತೇಜನ ನೀಡಲಾಗುತ್ತದೆ. ಮಣ್ಣಿನ ಗುಣಮಟ್ಟ ಪರೀಕ್ಷಿಸಿ, ಅದಕ್ಕೆ ಅನುಗುಣವಾಗಿ ಮಾರ್ಗದರ್ಶನ ನೀಡುಲಾಗುತ್ತಿದೆ ಎಂದರು.
ಕಾಲೋನಿ ಅಭಿವೃದ್ಧಿ :
******** ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಿ.ರೇಖಾ ತಿಳಿಸಿದರು. ಇದರೊಂದಿಗೆ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸುವುದು. ಮುಂದಿನ ವರ್ಷಕ್ಕೆ ಅಗತ್ಯ ಇರುವ ವಿದ್ಯಾರ್ಥಿ ವೇತನ ಅನುದಾನವನ್ನು ಯೋಜನೆಯಲ್ಲಿ ಕೋರಲಾಗಿದೆ ಎಂದರು.
ತೆರಿಗೆ ಹಣ ಬಳಕೆ ಅಧಿಕಾರ ನೀಡಿಲಿ:
********** ಗ್ರಾಮ ಪಂಚಾಯಿತಿ ವಸೂಲಿ ಮಾಡುವ ತೆರಿಗೆ ಪಾಲಿನಲ್ಲಿ ಶೇ. 24 ರಷ್ಟನ್ನು ಗ್ರಂಥಾಲಯ, ಆರೋಗ್ಯ ಮುಂತಾದ ಸೆಸ್‍ಗಳ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ. ಇದರೊಂದಿಗೆ ಶೇ. 25 ರಷ್ಟು ಎಸ್.ಸಿ. ಎಸ್.ಎಸ್ಟಿ ನಿಧಿಯನ್ನು ಕೇವಲ ವೈಯಕ್ತಿಕ ಫಲಾನುಭವಿ ಆಧಾರಿತ ಸೌಲಭ್ಯಗಳಿಗೆ ಬಳಸಬೇಕಿದ್ದು, ಆ ಕಾಲೋನಿಗಳ ರಸ್ತೆ ಅಥವಾ ಮೂಲಭೂತ ಸೌಕರ್ಯಗಳಿಗೆ ಬಳಸಲು ಅವಕಾಶವಿಲ್ಲದಿರುವುದು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಮೆದೆಹಳ್ಳಿ ಪಿಡಿಓ ಪಾತಣ್ಣ ಹೇಳಿದರು. 15ನೇ ಹಣಕಾಸು ಯೋಜನೆಯಡಿ ಬರುವ ಹಣದಲ್ಲಿ ಶೇ. 60 ರಷ್ಟು ಭಾಗವನ್ನು ಕಡ್ಡಾಯವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಮೀಸಲಿಡಬೇಕಾಗಿರುವುದರಿಂದ, ಇತರೆ ತುರ್ತು ಕಾಮಗಾರಿಗಳಿಗೆ ಹಣದ ಕೊರತೆಯಾಗುತ್ತಿದೆ. ಅನುದಾನದ ಕೊರತೆ ಮತ್ತು ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್, ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್. ಗಾಯತ್ರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒ ಗಳು ಯೋಜನೆ ವರದಿ ಸಿದ್ದತೆ ಹಾಗೂ ಅನುದಾನ ಹಂಚಿಕೆ ಕುರಿತು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಅವರೊಂದಿಗೆ ಸಂವಾದ ನಡೆಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading