ಚಿತ್ರದುರ್ಗ ಜ. 23 :
ಚಿತ್ರದುರ್ಗ ನಗರದ ಹೊರ ವಲಯದ ಹಂಪಯ್ಯನಮಾಳಿಗೆ ಬಳಿ ಇರುವ ಕಸ ಹಾಗೂ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ, ಘಟಕದ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಘಟಕದಿಂದ ವಾಸನೆ, ಸೊಳ್ಳೆ, ನೊಣಗಳ ಹರಡುವಿಕೆಯನ್ನು ತಡೆಗಟ್ಟಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದು ತಾಕೀತು ಮಾಡಿದರು.
ಗುರುವಾರ ಬೆಳ್ಳಂ ಬೆಳಿಗ್ಗೆ ಹಂಪಯ್ಯನಮಾಳಿಗೆ ಬಳಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ಉಪಲೋಕಾಯುಕ್ತರು ಭೇಟಿ ನೀಡಿದ ವೇಳೆ, ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಥರು, ಕಸ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆಯ ಕಾರಣದಿಂದ, ಈ ಭಾಗದಲ್ಲಿ ನೊಣ, ಸೊಳ್ಳೆಗಳ ಕಾಟ ವಿಪರೀತವಾಗಿದೆ, ಇದರ ಜೊತೆಗೆ ಮಾಂಸದ ತ್ಯಾಜ್ಯವನ್ನು ಕೂಡ ಇಲ್ಲಿ ಹಾಕುವುದರಿಂದ ನಾಯಿಗಳು ಸೇರಿಕೊಂಡು, ವಿಪರೀತ ಹಾವಳಿ ಮಾಡುತ್ತಿವೆ. ಸಾರ್ವಜನಿಕರು ಈ ದಾರಿಯಲ್ಲಿ ಓಡಾಡುವುದು ಕಷ್ಟವಾಗಿದೆ. ಸೊಳ್ಳೆ, ನೊಣದ ವಿಪರೀತ ಕಾಟದ ಕಾರಣಯಲ್ಲಿ ತುಂಬಾ ತೊಂದರೆಯಾಗುತ್ತಿದೆ, ಮನೆಯಲ್ಲಿ ಊಟ ಮಾಡಲೂ ಕಷ್ಟವಿದೆ, ಪದೇ ಪದೇ ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಉಪಲೋಯುಕ್ತರು, ಕಸ ವಿಲೇವಾರಿ ಘಟಕವನ್ನು ಒಂದು ಸುತ್ತುಹಾಕಿ ವೀಕ್ಷಿಸಿ, ಘಟಕ ನಿರ್ವಹಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಘಟಕದ ಕಾರಣದಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದ ರೀತಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು, ಒಣ ಕಸದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಹಸಿ ಕಸ ಮತ್ತು ಇಲ್ಲಿ ಹರಿಯುವ ಚರಂಡಿ ನೀರಿನ ಕಾರಣದಿಂದ ಸೊಳ್ಳೆ, ನೊಣಗಳು ಹೆಚ್ಚು ಉತ್ಪತ್ತಿಯಾಗುತ್ತವೆ. ಹೀಗಾಗಿ ಹಸಿ ಕಸ ಮತ್ತು ತ್ಯಾಜ್ಯ ನೀರು ಹರಿಯುವ ಚರಂಡಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ತಜ್ಞರಿಂದ ಸಲಹೆ ಪಡೆದು, ಅದರಂತೆ ಘಟಕದಲ್ಲಿ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು. ಘಟಕದ ಒಳಗಡೆ ನಾಯಿಗಳು ಬೀಡು ಬಿಡದಂತೆ, ಇಲ್ಲಿನ ನಾಯಿಗಳನ್ನು ಹಿಡಿಸಿ, ಬೇರೆ ದೂರದ ಸ್ಥಳಕ್ಕೆ ಸಾಗಿಸಬೇಕು. ಘಟಕದಲ್ಲಿ ಕೆಟ್ಟ ವಾತಾವರಣ ಆಗದಂತೆ ಲೆಮನ್ ಗ್ರಾಸ್ ನಿತ್ಯ ಎರಡೆರಡು ಬಾರಿ ಬಳಸಬೇಕು, ಲಿಚೆಟ್ ಡ್ರೈನ್ ಅನ್ನು ಸಂಪೂರ್ಣವಾಗಿ ಕವರ್ ಮಾಡಬೇಕು. ಇಲ್ಲಿ ಕೆಲಸ ಮಾಡುವವರಿಗೆ ಶೂ, ಗ್ಲೌಸ್, ಮಾಸ್ಕ್ ಸೇರಿದಂತೆ ಎಲ್ಲ ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಪರಿಸರ ಅಧಿಕಾರಿ ಆಸೀಫ್ ಅವರನ್ನು ಉಪಲೋಕಾಯುಕ್ತರು, ಎಷ್ಟು ಬಾರಿ ಈ ಘಟಕಕ್ಕೆ ಭೇಟಿ ನೀಡಿದ್ದೀರಿ, ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ನಿರ್ವಹಣೆಗೆ ಏನೆಲ್ಲ ಸಲಹೆ ನೀಡಿದ್ದೀರಿ, ನಿಯಮ ಉಲ್ಲಂಘಿಸಿದ್ದಲ್ಲಿ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅವರಿಂದ ಸಮರ್ಪಕ ಉತ್ತರ ದೊರೆಯದ ಕಾರಣ ಅಸಮಾಧಾನ ವ್ಯಕ್ತಪಡಿಸಿ, ಜನರ ಆರೋಗ್ಯದ ಬಗ್ಗೆಯೂ ಆಡಳಿತ ಯಂತ್ರ ಯೋಚಿಸಬೇಕು. ಘಟಕ ನಿರ್ವಹಣೆ ಸಮರ್ಪಕವಾಗಿ ಇಲ್ಲದರಿವುದನ್ನು ಗಂಭೀರವಾಗಿ ಪರಿಗಣಿಸಿದ್ದು, ನಗರಸಭೆ ಹಾಗೂ ಪರಿಸರ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗುತ್ತಿದ್ದು, 01 ತಿಂಗಳ ಒಳಗಾಗಿ ಕಸ ವಿಲೇವಾರಿ ಘಟಕದ ನಿರ್ವಹಣೆ ಸಮರ್ಪಕವಾಗಿಸಿ, ಇದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳ ಬಗ್ಗೆ ಫೊಟೋ, ವಿಡಿಯೋ ಸಹಿತ ವರದಿಯನ್ನು ಸಲ್ಲಿಸಬೇಕು, ಈ ಬಗ್ಗೆ ಗ್ರಾಮಸ್ಥರನ್ನು ಕೂಡ ಸಾಕ್ಷಿದಾರರನ್ನಾಗಿಸಿಕೊಳ್ಳಲಾಗಿದ್ದು, ಅವರಿಂದಲೂ ಹೇಳಿಕೆ ಪಡೆದು, ಬಳಿಕವಷ್ಟೇ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು ಎಂದು ಉಪಲೋಕಾಯುಕ್ತ ಫಣೀಂದ್ರ ಅವರು ಹೇಳಿದರು.




ಮಠದ ಬಳಿಯ ಅರಸನಕೆರೆಗೆ ಭೇಟಿ :
*** ಉಪಲೋಕಾಯುಕ್ತರು ಬೆಳಿಗ್ಗೆ ನಗರದ ಹೊರವಲಯದಲ್ಲಿನ ಮುರುಘಾಮಠ ಎದುರಿನ ಅರಸನಕೆರೆಗೆ ಭೇಟಿ ನೀಡಿ, ಅಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ, ಸಮಗ್ರ ಮಾಹಿತಿ ಪಡೆದುಕೊಂಡರು. ಐತಿಹಾಸಿಕ ಚಿತ್ರದುರ್ಗ ನಗರಕ್ಕೆ ಇದೊಂದು ಉತ್ತಮ ಕೆರೆಯನ್ನಾಗಿಸಲು ಸದಾವಕಾಶವಿದೆ, ಇದನ್ನು ಒಳ್ಳೆಯ ಪ್ರವಾಸಿ ತಾಣವಾಗಿಸಬಹುದಾಗಿದೆ, ಕೆರೆಯ ಅಭಿವೃದ್ಧಿ ಕಾರ್ಯವನ್ನು ಗುಣಮಟ್ಟದಿಂದ, ಯೋಜನಾಬದ್ಧವಾಗಿ ಮಾಡಬೇಕು, ಇಲ್ಲಿ ವಾಯುವಿಹಾರ ಮಾಡಲು ವಾಕಿಂಗ್ ಪಾಥ್ ನಿರ್ಮಿಸಬೇಕು. ಅಭಿವೃದ್ಧಿ ಕಾಮಗಾರಿಯ ಸಮಗ್ರ ವಿವರವನ್ನು ಕಾಮಗಾರಿಯ ಸ್ಥಳದಲ್ಲಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೋರ್ಡ್ ಅಳವಡಿಸಿ ಪ್ರದರ್ಶಿಸಬೇಕು. ಕೆರೆಗೆ ಯಾವುದೇ ಕಾರಣಕ್ಕೂ ನಗರದ ಚರಂಡಿ ನೀರು, ಕಲುಷಿತ ನೀರು ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್ ಅವರು, ಪ್ರಾಧಿಕಾರದ ವತಿಯಿಂದ ಅರಸನಕೆರೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಜೀವನ್ ಪ್ರಕಾಶ್ ಎಂಬುವ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಲಾಗಿದೆ, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ, ಜಿ.ಪಂ. ಸಿಇಒ ಸೋಮಶೇಖರ್ ಎಸ್.ಜೆ., ಲೋಕಾಯುಕ್ತ ಅಧೀಕ್ಷಕ ವಾಸುದೇವರಾಮ, ಡಿವೈಎಸ್‍ಪಿ ಮೃತ್ಯುಂಜಯ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.