January 30, 2026
Fv_dyj0XgAACmOr.png

ಶಾಸಕ ಟಿ. ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿಚಿತ್ರದುರ್ಗಡಿ.22:
ಕೇಂದ್ರ ಸರ್ಕಾರ 2023-24ನೇ ಸಾಲಿನ ಆಯವ್ಯಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ಅನುದಾನ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ತ್ವರಿತವಾಗಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅನುದಾನ ಬಿಡುಗಡೆಗೆ ಕೋರಿ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯವರ ಗಮನ ಸೆಳೆಯುವ ಸೂಚನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲಿಖತ ಉತ್ತರ ನೀಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಮಧ್ಯ ಕರ್ನಾಟಕದ ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿನ 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ, 29.90 ಟಿ.ಎಂ.ಸಿ ನೀರಿನ ಬಳಕೆಯೊಂದಿಗೆ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ 367 ಕೆರೆಗಳಿಗೆ ಅವುಗಳ ಸಾಮಥ್ರ್ಯದ ಶೇ.50 ರಷ್ಟು ನೀರನ್ನು ತುಂಬಿಸಲು ಉದ್ದೇಶಿಸಿ ರೂಪಿಸಲಾಗಿರುತ್ತದೆ. ರೂ.21,473.67 ಕೋಟಿ ಮೊತ್ತದ ಪರಿಷ್ಕøತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಯೋಜನೆಗಾಗಿ 2025-26ನೇ ಸಾಲಿನಲ್ಲಿ ರೂ.1,440.29 ಕೋಟಿ ಅನುದಾನ ಹಂಚಿಕೆಯಾಗಿದ್ದು, ನವೆಂಬರ್-2025 ಅಂತ್ಯಕ್ಕೆ ರೂ.597.92 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಕೇಂದ್ರ ಸರ್ಕಾರದ ಹಣಕಾಸಿನ ನೆರವು ದೊರೆತಲ್ಲಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬಹುದಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಯೋಜನೆಯ ಪ್ರಥಮ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡುವ ರೂ.324 ಕೋಟಿಗಳ ಮೊತ್ತದ (ಪ್ಯಾಕೇಜ್-1) ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ 29.90 ಟಿ.ಎಂ.ಸಿ. ನೀರನ್ನು ಲಿಫ್ಟ್ ಮಾಡುವ ರೂ.1,032 ಕೋಟಿಗಳ ಮೊತ್ತದ (ಪ್ಯಾಕೇಜ್-2) ಮತ್ತು ಅಜ್ಜಂಪುರ ಸುರಂಗ ನಿರ್ಮಾಣ ಮಾಡುವ ರೂ.223.96 ಕೋಟಿಗಳ ಮೊತ್ತದ (ಪ್ಯಾಕೇಜ್-3) ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದ ಮೂಲಕ 2019-2020ನೇ ಸಾಲಿನಿಂದ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗಿರುತ್ತದೆ.
ಎರಡನೆ ಹಂತದಲ್ಲಿ ತರೀಕೆರೆ ಏತ ನೀರಾವರಿ, ಚಿತ್ರದುರ್ಗ ಹಾಗೂ ತುಮಕೂರು ಶಾಖಾ ಕಾಲುವೆ ಕಾಮಗಾರಿಗಳ ಮೂಲಕ ಸೂಕ್ಷ್ಮ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಜಗಳೂರು ಶಾಖಾ ಕಾಲುವೆ, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮರು, ಪಾವಗಡ, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.ಲೋಕ ಅದಾಲತ್ ಮೂಲಕ ಭೂಸ್ವಾಧೀನ ಪ್ರಕರಣಗಳ ಇತ್ಯರ್ಥ:
***************
ಚಿತ್ರದುರ್ಗ ಶಾಖಾ ಕಾಲುವೆ ಆರಂಭದಿಂದ 134.597 ಕಿ.ಮೀ. ರವರಗಿನ ನಿರ್ಮಾಣಕ್ಕೆ ರೂ.1,723.42 ಕೋಟಿ ವೆಚ್ಚದಲ್ಲಿ 12 ಪ್ಯಾಕೇಜ್‍ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 134.597 ಕಿ.ಮೀ ಕಾಲುವೆ ನಿರ್ಮಾಣ ಕಾಮಗಾರಿಯ ಪೈಕಿ 126.255 ಕಿ.ಮೀ. ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಉಳಿದ 8.342 ಕಿ.ಮೀ. ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಭೂಸ್ವಾಧೀನ ಪರಿಹಾರ ಕುರಿತಂತೆ ಅಜ್ಜಂಪುರ ತಾಲ್ಲೂಕು ಅಬ್ಬಿನಹೊಳಲು ಗ್ರಾಮದ ಭೂಮಾಲೀಕರು ಈ ಕಾಲುವೆಯ ಪ್ರಾರಂಭಿಕ ರೀಚ್ ಸರಪಳಿ 0.900ಕಿ.ಮೀ. ನಿಂದ 2.600 ಕಿ.ಮೀ.ವರೆಗಿನ ಕಾಮಗಾರಿಕೆ ಅಡ್ಡಿ ಪಡಿಸಿದ್ದರು. ಆದ್ದರಿಂದ ಸಮಸ್ಯೆ ಪರಿಹರಿಸಲು ಖುದ್ದಾಗಿ ಭೇಟಿ ನೀಡಿ ಸ್ಥಳೀಯ ರೈತರ ಮನವೊಲಿಸಿದ್ದೇನೆ, ಕಾಮಗಾರಿಗೆ ಸದ್ಯ ಯಾವುದೇ ಅಡ್ಡಿಯಿಲ್ಲ.
ಭೂಸ್ವಾಧೀನ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳು ಇತ್ಯರ್ಥವಾಗಲು ಕನಿಷ್ಠ 3-4 ವರ್ಷಗಳಾಗುತ್ತದೆ. ಇದರಿಂದ ಕೃಷ್ಣಾ ಜಲ ನಿಗಮಕ್ಕೆ ಶೇ.15 ಬಡ್ಡಿ ರೂಪದಲ್ಲಿ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಕಾಮಗಾರಿಯೂ ವಿಳಂಬದಿಂದಾಗಿ ಯೋಜನೆಯ ವೆಚ್ಚವು ಹೆಚ್ಚಾಗುತ್ತದೆ. ಆದ್ದರಿಂದ ಅಬ್ಬಿನಹೊಳಲು ಗ್ರಾಮಕ್ಕೆ ಸಂಬಂಧಿಸಿದಂತೆ 44 ಎ 20.08 ಗುಂ ಜಮೀನಿಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ್ ಅದಾಲತ್ತಿನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅನುಮೋದನೆ ನೀಡಲಾಗಿರುತ್ತದೆ.
ಲೋಕ್ ಅದಾಲತ್ ತೀರ್ಪಿನನ್ವಯ ರೈತರಿಂದ ಭೂಸ್ವಾಧೀನ ಪಡೆದು ಬಾಕಿ ಉಳಿದಿರುವ 120ಮೀ ಉದ್ದದ ಕಾಲುವೆಯನ್ನು ಪ್ರಾರಂಭಿಸಿ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 114.200 ಕಿಮೀವರೆಗೆ ನೀರನ್ನು ಹರಿಸಲಾಗುವುದು. ಇದರೊಂದಿಗೆ ಬಾಕಿ ಉಳಿದ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 114.209 ಕಿ.ಮೀ. ರಿಂದ 116.171 ಕಿ.ಮೀ.ವರೆಗಿನ ಗೋನೂರು ಅಕ್ವಡಕ್ಟ್ (ಮೇಲ್ಮಟ್ಟದ ಕಾಲುವೆ) ಕಾಮಗಾರಿಯಲ್ಲಿನ ಕೆಲವು ಭೂಸ್ವಾಧೀನ ಸಮಸ್ಯೆಗಳನ್ನು ನಿವಾರಿಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿ, ಪ್ರಾಯೋಗಿಕ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ. ಅನುದಾನದ ಲಭ್ಯತೆಯ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಭರವಸೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಉತ್ತರದಲ್ಲಿ ನೀಡಿದ್ದಾರೆ.
=========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading