January 30, 2026
FB_IMG_1766406972783.jpg

ಚಿತ್ರದುರ್ಗ ಡಿ.22:
ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗೇಟ್ ಬಳಿ ಸೋಮವಾರ ಸಮುದಾಯ ಆರೋಗ್ಯ ಕೇಂದ್ರ (ಹೈಟೆಕ್ ಆಸ್ಪತ್ರೆ) ನೂತನ ಕಟ್ಟಡ ಮತ್ತು ವಸತಿ ಗೃಹಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.ಸಾರ್ವಜನಿಕ ವಲಯದಲ್ಲಿ ಆರೋಗ್ಯ ಇಲಾಖೆಗೆ ದೊಡ್ಡ ಜವಾಬ್ದಾರಿ ಇದೆ. ಎಲ್ಲವನ್ನೂ ನೀಡಲು ಸಾಧ್ಯವಿಲ್ಲ ಆದಾಗ್ಯೂ, ಗ್ರಾಮೀಣ ಮಟ್ಟದಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯ ಸೇವೆಗಳು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ತಜ್ಞ ವೈದ್ಯ ಸೇವೆಗಳು, ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಜಾರಿಗೆ ತರುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ತಾಲ್ಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು 24*7 ಕಾರ್ಯನಿರ್ವಹಣೆ ಮಾಡುವಂತೆ ತೀರ್ಮಾನ ಮಾಡಲಾಗಿದ್ದು, ಪ್ರತಿಯೊಂದು ತಾಲ್ಲೂಕು ಆಸ್ಪತೆಗಳಲ್ಲಿ 2 ಸ್ತ್ರೀ ರೋಗ ತಜ್ಞರು, 2 ಅರವಳಿಕೆ ತಜ್ಞರು, 2 ಮಕ್ಕಳು ತಜ್ಞರು, ರೇಡಿಯೋಲಾಜಿಸ್ಟ್, ಪ್ರಸೂತಿ ತಜ್ಞರು ಸೇರಿದಂತೆ ಇತರೆ ತಜ್ಞ ವೈದ್ಯರು ಇರಲೇಬೇಕು. ಸಾರ್ವಜನಿಕರು ದಿನದ 24 ಗಂಟೆಯಲ್ಲಿ ಯಾವಾಗಬೇಕಾದರೂ ಆಸ್ಪತ್ರೆಗೆ ಆಗಮಿಸಿದರೂ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು ಎಂದು ತಿಳಿಸಿದರು.
ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿ ನಿತ್ಯ 300-400 ಹೊರ ರೋಗಿಗಳು ಬರುತ್ತಿದ್ದು, ಇಲ್ಲಿ ರೂ. 14 ಕೋಟಿ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆಗೆ ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ರೂ. 2 ಕೋಟಿ ವೆಚ್ಚ ಮಾಡಲಾಗಿದೆ. ಇದೇ ರೀತಿ ತಾಲ್ಲೂಕು ಕೇಂದ್ರದಲ್ಲಿ ರೂ.20 ಕೋಟಿ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆಯನ್ನೂ ಹಾಗೂ ರೂ. 13 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ರಾಮಗಿರಿಯಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ರೂ.2 ಕೋಟಿ ವೆಚ್ಚದಲ್ಲಿ ವಸತಿ ಗೃಹವನ್ನು ನಿರ್ಮಿಸಲಾಗುತ್ತಿದೆ. ಎಚ್.ಡಿ. ಪುರದಲ್ಲಿ ಈಗಾಗಲೇ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಆಸ್ಪತ್ರೆ ಸಿಬ್ಬಂದಿಗೆ ವಸತಿ ಗೃಹದ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಕೊಡಿಸುವಂತೆ ಚಂದ್ರಪ್ಪ ಅವರು ಸಚಿವರಲ್ಲಿ ಮನವಿ ಮಾಡಿದರು.
ಈಗಾಗಲೇ ರೈತರ ಅನುಕೂಲಕ್ಕಾಗಿ ತಾಲ್ಲೂಕಿನ 17 ಕಡೆಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗ ರೈತರ ಪಂಪ್‍ಸೆಟ್‍ಗಳಗೆ 5 ರಿಂದ 7 ಗಂಟೆ ನಿರಂತರವಾಗಿ ವಿದ್ಯುತ್ ನೀಡಲಾಗುತ್ತಿದೆ. ಕೋಟೆಹಾಳ್ ಬಳಿ 13 ಎಕರೆ ಪ್ರದೇಶದಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ದೊಡ್ಡ ವಿದ್ಯುತ್ ವಿತರಣಾ ಘಟಕವನ್ನು ನಿರ್ಮಿಸಲಾಗುವುದು. ಇದರಿಂದ ಈ ಭಾಗದ ರೈತರಿಗೆ 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ ಎಂದರು.
2026ರ ಜನವರಿ ಮಾಹೆಯೊಳಗೆ ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ನೀರನ್ನು ಹರಿಸಲಾಗುವುದು ಎಂದು ತಿಳಿಸಿದ ಅವರು, 300 ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಹೊಳಲ್ಕೆರೆಯಲ್ಲಿ ಹೈಟೆಕ್ ಶಾಲೆಯನ್ನು ನಿರ್ಮಿಸಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯವನ್ನು ನೀಡಿರುವುದರಿಂದ ಶಾಲೆಯಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಇದೇ ವೇಳೆ ಚಿಕ್ಕಜಾಜೂರಿನ ಜನತಾ ಕಾಲೊನಿಯಲ್ಲಿ ನಿರ್ಮಿಸಿರುವ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂರು ಸುಸಜ್ಜಿತ ಶಾಲಾ ಕೊಠಡಿಗಳ ನಾಮಫಲಕವನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಂ. ಶಿವಕುಮಾರ್, ಬಿ. ಪುಟ್ಟಸ್ವಾಮಿ, ಡಿ.ಸಿ. ಮೋಹನ್, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್, ಉಪಾಧ್ಯಕ್ಷೆ ಶಶಿಕಲಾ, ಗುಂಜಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ತಿಪ್ಪಮ್ಮ ಶಿವಮೂರ್ತಿ, ಉಪಾಧ್ಯಕ್ಷ ಗುರುಮೂರ್ತಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಪಿ.ರೇಣುಪ್ರಸಾದ್. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಸ್. ಶಿವಪ್ರಕಾಶ್, ಆಸ್ಪತ್ರೆಯ ವೈದ್ಯ ಡಾ, ಪ್ರದೀಪ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಶ್ರೀನಿವಾಸ್, ಜನತಾ ಕಾಲೊನಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪಿ. ಗಂಗಮ್ಮ, ಪಿಡಿಒಗಳಾದ ಜಯಪ್ಪ, ಎಚ್.ಆರ್. ಪ್ರದೀಪ್, ಚಿಕ್ಕಜಾಜೂರು ಹಾಗೂ ಗುಂಜಿಗನೂರು ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.==========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading