ನಾಯಕನಹಟ್ಟಿ :
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಇಡೀ ವಿಶ್ವದಲ್ಲಿಯೇ ಮಾದರಿಯಾಗಿದೆ ಎಂದು ದ್ರಾಕ್ಷಿ ರಸ ಮತ್ತು ವೈನ್ ನಿಗಮದ ಅಧ್ಯಕ್ಷ ಡಾ. ಬಿ. ಯೋಗೇಶ್‌ಬಾಬು ಹೇಳಿದರು.
ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದ್ದು, ಜನಪರ, ಯುವಕರ ಪರ, ರೈತಪರ, ಬಡವರ ಪರ, ಮಹಿಳೆಯರ ಹಾಗೂ ಕಾರ್ಮಿಕರ ಪರವಾದ ಅನೇಕ ಜನಹಿತ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಹಾಗೂ ಜನತೆಗೆ ಉತ್ತಮ ಆಡಳಿತ ನೀಡಲಾಗುತ್ತಿದೆ ಎಂದು ಪ್ರಶಂಸಿಸಿದರು.
ಬಡವರು–ಶ್ರೀಮಂತರು ಎಂಬ ಬೇಧವಿಲ್ಲದೆ ಎಲ್ಲ ವರ್ಗಗಳಿಗೂ ಲಾಭ ತಲುಪಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿ ದೇವಸ್ಥಾನಗಳು ಹಾಗೂ ತೀರ್ಥಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ. ದಿನನಿತ್ಯ ಕೆಲಸಕ್ಕೆ, ಶಾಲೆ–ಕಾಲೇಜುಗಳಿಗೆ ಹೋಗುವ ಮಹಿಳೆಯರು ಈ ಯೋಜನೆಯಿಂದ ಸ್ವಾವಲಂಬಿಯಾಗುತ್ತಿದ್ದಾರೆ. ಸಂಕಷ್ಟದಲ್ಲಿದ್ದ ಮಹಿಳೆಯರಿಗೆ ಉಚಿತ ಪ್ರಯಾಣ ದೊಡ್ಡ ವರದಾನವಾಗಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯು ರಾಜ್ಯದ ವಿದ್ಯಾವಂತ ಹಾಗೂ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದ್ದು, ಪದವೀಧರರಿಗೆ ತಿಂಗಳಿಗೆ ರೂ.3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1,500 ಸಹಾಯಧನ ನೀಡಲಾಗುತ್ತಿದೆ. ಇದರಿಂದ ಸಾವಿರಾರು ಯುವಕರು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ನಿವಾರಣೆಗೆ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದ್ದು, ಇಂದು ರಾಜ್ಯದಲ್ಲಿ ಯಾವುದೇ ಕುಟುಂಬವೂ ಹಸಿವಿನಿಂದ ಬಳಲದಂತಾಗಿದೆ. ಈ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಬಡವರ ಕಷ್ಟವನ್ನು ಹತ್ತಿರದಿಂದ ಕಂಡಿರುವ ನಾಯಕನಿಂದಲೇ ಇಂತಹ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ರೂ.2,000 ಸಹಾಯಧನದಿಂದ ಅನೇಕರು ಗೃಹೋಪಯೋಗಿ ವಸ್ತುಗಳು, ಯಂತ್ರೋಪಕರಣಗಳು, ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಬಡ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಹೇಳಿದರು.
ಕಳೆದ ಎರಡು ವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದು, ಪಂಚ ಗ್ಯಾರೆಂಟಿ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿವೆ ಎಂದು ಡಾ. ಬಿ. ಯೋಗೇಶ್‌ಬಾಬು ಹೇಳಿದರು.
About The Author
Discover more from JANADHWANI NEWS
Subscribe to get the latest posts sent to your email.