
ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಮಾಜದ ಬೆಳವಣಿಗೆ ಹಾಗೂ ಏಳಿಗೆಗೆ ಮಠಮಾನ್ಯಗಳ ಕೊಡುಗೆ ಅಪಾರವಾದುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಅವರು ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಶ್ರೀ ಜಂಗಮ ಮಠದಲ್ಲಿ ಆಯೋಜಿಸಿದ್ದ ಜಂಗಮ ಮಠದ ಮಹಾದ್ವಾರ, ಶ್ರೀ ಚೌಡೇಶ್ವರಿ ದೇವಿ ಪ್ರಸಾದ ನಿಲಯ, ಶ್ರೀ ಗುರು ಚಂದ್ರಶೇಖರ ಯಾತ್ರಿ ನಿವಾಸ, ಧ್ಯಾನ ಮಂದಿರ, ಶ್ರೀ ಕಾಮಧೇನು ಗೋಶಾಲಾ ಉದ್ಘಾಟನೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಹಲವಾರು ಯುವಕರು, ಯುವತಿಯರಿಗೆ ಶಿಕ್ಷಣವನ್ನು ಕೊಟ್ಟು ಅಕ್ಷರ ಹಾಗೂ ಅನ್ನ ದಾಸೋಹವನ್ನು ಮಠಮಾನ್ಯಗಳು ತನ್ನದೇ ಆದ ರೀತಿಯಲ್ಲಿ ಕೊಡುಗೆಯಾಗಿ ನೀಡಿಕೊಂಡು ಬರುತ್ತಿವೆ. ಇಂತಹ ಗುರುಪೀಠಗಳನ್ನು ಮುನ್ನಡೆಸಿಕೊಂಡು ಬರುತ್ತಿರುವ ಪರಮಪೂಜ್ಯ ಸ್ವಾಮೀಜಿಗಳ ಮಾರ್ಗದರ್ಶನ, ಆಶೀರ್ವಾದಗಳನ್ನು ಪಡೆದು ಸರ್ವರು ಸನ್ಮಾರ್ಗದಲ್ಲಿ ನಡೆಯುವುದರ ಜೊತೆಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.
ಕರ್ಪೂರವಳ್ಳಿಯ ಶ್ರೀ ಜಂಗಮ
ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹಲವು ಸಂಕಷ್ಟಗಳ ನಡುವೆ ಅತ್ಯಂತ ಪರಿಶ್ರಮದೊಂದಿಗೆ ಸಣ್ಣದಾಗಿದ್ದ ಮಠವನ್ನು ಇಂದು ಅತ್ಯಂತ ಎತ್ತರಕ್ಕೆ ಬೆಳೆಸಿರುವುದು ದೊಡ್ಡ ಸಾಧನೆ ಎಂದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ ಧರ್ಮ ಧರ್ಮಗಳ ನಡುವೆ ಕಂದಕಗಳು, ಜಾತಿ ಜಾತಿಗಳ ನಡುವೆ ವೈಷಮ್ಯಗಳು ಅದಕ್ಕೋಸ್ಕರ ಸರ್ಕಾರದ ಕೋಟ್ಯಂತರ ರೂ ವ್ಯಯ. ಇದೆಲ್ಲವನ್ನು ನಾವು ನೋಡುತ್ತಿದ್ದೇವೆ.
ಮಾನವ ಕುಲ ದೊಡ್ಡದು ಮಾನವ ಕುಲಕ್ಕೆ ಜಯವಾಗಲಿ ಎಂಬುದು ಪಂಚಾಚಾರ್ಯರ ಘೋಷವಾಕ್ಯವಾಗಿದೆ. ಅವರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಜಯವಾಗಲಿ ಎನ್ನಲಿಲ್ಲ ಎಂದರು. ದೇಶದ ಹಲವು ಭಾಗಗಳಲ್ಲಿ ಪಂಚಾಚಾರ್ಯರ ಪೀಠಗಳು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪಂಚಪೀಠಗಳನ್ನು ಬರಮಾಡಿಕೊಂಡು ಉತ್ತಮವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಜಂಗಮ ಮಠದಲ್ಲಿ ನಡೆಸಿಕೊಂಡು ಬರುತ್ತಿರುವ ಕೀರ್ತಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದರು. ಮಠದ ಆವರಣದಲ್ಲಿ ದೇವಾಲಯಗಳು, ಯಾತ್ರಿ ನಿವಾಸ, ಗೋಶಾಲ, ಪ್ರಸಾದ ನಿಲಯ, ಧ್ಯಾನ ಮಂದಿರ, ಶಾಲೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಜಂಗಮಠವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಇತರ ಮಠಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಪೂರವಳ್ಳಿ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಪ್ರಶಸ್ತಿ ಪ್ರದಾನ: ಶಿವಮೊಗ್ಗದ ವಾಣಿಜ್ಯೋದ್ಯಮಿ
ಬಿ.ಎಸ್.ಮಹದೇವುಗೆ ಧರ್ಮ ಸೇವಾಭೂಷಣ ಪ್ರಶಸ್ತಿ, ವೀರಶೈವ ಮುಖಂಡ ಸಿ.ಪಿ.ರಮೇಶ್ ಕುಮಾರ್ ಗೆ ಸಮಾಜ ಸೇವಾ ರತ್ನ ಪ್ರಶಸ್ತಿ, ಬಸವಾಪಟ್ಟಣದ ತೊಟ್ಟಿಮನೆ ವಂಶಸ್ಥ ಶ್ರೀಕಂಠಶೆಟ್ಟರಿಗೆ ಗುರು ಸೇವಾ ರತ್ನ ಪ್ರಶಸ್ತಿ, ಶಿವಮೊಗ್ಗದ ಉದ್ಯಮಿ ಬಿ.ಜಿ.ಓಂಕಾರ ಮೂರ್ತಿಗೆ ಜಂಗಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ: ಬಸವಾಪಟ್ಟಣದ ಉದ್ಯಮಿ ಕೆಂಡಗಣ್ಣಶೆಟ್ಟಿ, ಶಿವಮೊಗ್ಗದ ಉದ್ಯಮಿ ದೊರೇಶ್ ಬಾಬು, ಹೂವಿನಳ್ಳಿಯ ಲೀಲಾವತಿ ಮೃತ್ಯುಂಜಯ, ಚನ್ನರಾಯಪಟ್ಟಣದ ಸುಮ ಬಸವರಾಜು ಅವರುಗಳನ್ನು ಶ್ರೀ ಜಂಗಮ ಮಠದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗಣ್ಯರು, ಸಾರ್ವಜನಿಕರು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಸಮಾರಂಭದಲ್ಲಿ ಬಾಳೆಹೊನ್ನೂರು ಶಾಖ ಮಠ ಯಡಿಯೂರಿನ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಆನೇಕಲ್ ನ ರಾಜಪುರ ಸಂಸ್ಥಾನ ಮಠದ ಶ್ರೀ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮಿಗಳು, ರಾವಂದೂರಿನ ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿಗಳು, ನುಗ್ಗೆಹಳ್ಳಿ ಪುರವರ್ಗ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ಮೈಮುಲ್ ನಿರ್ದೇಶಕಿ ಮಲ್ಲಿಕಾ ರವಿಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಜನಪ್ರತಿನಿಧಿಗಳು, ಮುಖಂಡರುಗಳು, ಮಹಿಳೆಯರು, ಅಪಾರ ಸಂಖ್ಯೆಯಲ್ಲಿ ಶ್ರೀ ಮಠದ ಭಕ್ತರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.