September 16, 2025
FB_IMG_1732274884890.jpg


ಚಿತ್ರದುರ್ಗ ನ.22:
ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್ ರಾಗಿಗೆ ರೂ.4290 ದರ ನಿಗದಿ ಮಾಡಲಾಗಿದೆ. ಮುಂಬರುವ ಜನವರಿ 01 ರಿಂದ ಮಾರ್ಚ್ 31 ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಗೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹೊಸದುರ್ಗ, ಹೊಳಲ್ಕೆರ ಹಾಗೂ ಚಿತ್ರದುರ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹೆಚ್ಚು ರಾಗಿ ಬಿತ್ತನೆಯಾಗಿದೆ. ಉತ್ತಮ ಇಳುವರಿಯ ನಿರೀಕ್ಷೆ ಇದ್ದು, ಹೊಸದುರ್ಗ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ರಾಗಿ ಖರೀದಿ ಕೇಂದ್ರ ಸ್ಥಾಪಿಸಬೇಕು. ನೇರವಾಗಿ ರೈತರಿಂದಲೇ ರಾಗಿ ಖರೀದಿ ಮಾಡಲಾಗುವುದು. ರಾಗಿ ಮಾರಾಟ ಮಾಡುವ ರೈತರ ಪಹಣಿಯಲ್ಲಿ ರಾಗಿ ಎಂದು ನಮೂದು ಆಗಿರುವುದು ಕಡ್ಡಾಯವಾಗಿದೆ. ಮದ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದರು.
ರಾಗಿ ಖರೀದಿ ಕೇಂದ್ರಗಳಲ್ಲಿ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೆನ್ಸಿಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಅನ್ವಯ ಎಫ್.ಎ.ಕ್ಯೂ ಗುಣಮಟ್ಟ ಆಧರಿಸಿ ರಾಗಿ ಖರೀದಿಸಬೇಕು. ಪ್ರತಿ ಖರೀದಿ ಕೇಂದ್ರದಲ್ಲೂ ಕೃಷಿ ಇಲಾಖೆಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು. ಈ ಗ್ರೇಡರ್‍ಗಳು ರಾಗಿ ಗುಣಮಟ್ಟವನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನೇಮಿಸಿರುವ ಗುಣಮಟ್ಟ ಪರೀಕ್ಷಕರೊಂದಿಗೆ ಜಂಟಿಯಾಗಿ ರಾಗಿ ಗುಣಮಟ್ಟ ಧೃಡೀಕರಿಸಬೇಕು. ರಾಗಿ ಖರೀದಿ ಹಾಗೂ ಮಾನದಂಡಗಳ ಕುರಿತು ವ್ಯಾಪಕ ಪ್ರಚಾರದೊಂದಿಗೆ ರೈತರಿಗೆ ತಿಳಿಸಬೇಕು. ಎಲ್ಲಾ ಖರೀದಿ ಕೇಂದ್ರಗಳಲ್ಲಿ ರೈತರ ಬೆಳೆಗಳ ದಾಸ್ತಾನು ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಇದರೊಂದಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ರೈತರ ಫ್ರೂಟ್ಸ್ ದಾಖಲೆಗಳ ಮೂಲಕ ನೋಂದಣಿ ಮಾಡುವಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದು. ರೈತರ ಪಹಣಿಯಲ್ಲಿ ಬೆಳೆ ನಮೂದು ಮಾಡುವಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖರೀದಿ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಕೃಷಿ ಇಲಾಖೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಖರೀದಿ ಕುರಿತು ರೈತರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, 2022-23ನೇ ಸಾಲಿನಲ್ಲಿ ರೂ.3578 ಬೆಂಬಲ ಬೆಲೆಯಡಿ ಒಟ್ಟು 21,715 ಮೆಟ್ರಿಕ್ ಟನ್ ಹಾಗೂ 2023-24ನೇ ಸಾಲಿನಲ್ಲಿ ರೂ.3846 ಬೆಂಬಲ ಬೆಲೆಯಡಿ 1832.60 ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಗಿತ್ತು. ಈ ಬಾರಿ ರಾಗಿಗೆ ರೂ.4290 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಹಾಗೂ ಶ್ರೀರಾಂಪುರ ಎ.ಪಿ.ಎಂ.ಸಿ ಯಾರ್ಡ್‍ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಬೇಡಿಕೆ ಎದುರಾದರೆ ಹೆಚ್ಚುವರಿ ಖರೀದಿ ಕೇಂದ್ರಗಳನ್ನು ಸಹ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಡಿವೈಎಸ್‍ಪಿ ದಿನಕರ್ ಸೇರಿದಂತೆ ತಹಶೀಲ್ದಾರ್‍ಗಳು, ಎ.ಪಿ.ಎಂ.ಸಿ ಕಾರ್ಯದರ್ಶಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading