ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುಮಾರು 20ದಿನಗಳ ಕಾಲ ಮಳೆ ಹೆಚ್ಚಾಗಿ ಮೋಡ ಕವಿದ ವಾತಾವರಣದಿಂದ ಈರುಳ್ಳಿ ಬೆಳೆಯು ನಾಶವಾಗಿದ್ದು, ಇರುವ ಅಲ್ಪಸ್ವಲ್ಪ ಬೆಳೆಯು ಗುಣಮಟ್ಟ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಗೆ 150 ರಿಂದ 200ರೂ ಗಳಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಅಪಾರ ನಷ್ಟವಾಗುತ್ತಿದೆ ಎಂಬುದಾಗಿ ಜಿಲ್ಲಾಧ್ಯಕ್ಷರಾದ ಧನಂಜಯ ಅವರು ಹೇಳಿದರು.
ಈರುಳ್ಳಿ, ಮೆಕ್ಕೆಜೋಳ ಹಾಗೂ ಶೇಂಗಾಬೆಳೆ ನಷ್ಟವಾಗಿರುವುದಕ್ಕೆ ಬೆಳೆ ಪರಿಹಾರ, ಬೆಳೆ ವಿಮೆ ಬಿಡುಗಡೆಗೊಳಿಸುವ ಕುರಿತಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಆದ್ದರಿಂದ ಸರ್ಕಾರ ಕೂಡಲೇ ಆಂಧ್ರಸರ್ಕಾರದ ಮಾದರಿಯಂತೆ ಬೆಳೆಪರಿಹಾರದ ಹಣ ಬಿಡುಗಡೆ ಮಾಡಬೇಕು ಹಾಗೂ ಬೆಂಬಲ ಬೆಲೆಯಡಿ ಈರುಳ್ಳಿಯನ್ನು ಖರೀದಿ ಮಾಡಬೇಕು. ಇದೇರೀತಿಯಲ್ಲಿ 2024ರಲ್ಲಿ ಮಳೆ ಹೆಚ್ಚಾಗಿ ಬೆಳೆ ನಾಶವಾಗಿದ್ದರೂ ಕಂದಾಯಇಲಾಖೆಯ ನಿರ್ಲಕ್ಷ್ಯದಿಂದ ಬೆಳೆ ಪರಿಹಾರ ಬಂದಿರುವುದಿಲ್ಲ ಈರುಳ್ಳಿ ಪ್ರತಿ ಎಕರೆಗೆ ರೂ 30ಸಾವಿರ ಗಳಂತೆ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಅತಿ ಹೆಚ್ಚಾಗಿ ಶೇಂಗವನ್ನು ಬೆಳೆಯಲಾಗುತ್ತಿದೆ. ಈ ಬೆಳೆಗೆ ಬೆಂಕಿರೋಗ ಮಚ್ಚೆರೋಗ ಬಿದ್ದು ಸಂಪೂರ್ಣ ಬೆಳೆ ನಾಶವಾಗಿರುತ್ತದೆ ಹಾಗೂ ಕಾಯಿಕಟ್ಟುವ ಸಮಯವಾಗಿದ್ದು ಸುಮಾರು 20ದಿನಗಳು ಮಳೆ ಇಲ್ಲದ ಕಾರಣ ಕಾಯಿಕಟ್ಟುವುದು ಒಣಗುತ್ತಿದೆ ಎಂಬುದಾಗಿ ಅವರು ಮನವಿ ಮಾಡಿದರು.
ಅದೇ ರೀತಿಯಾಗಿ ಮೆಕ್ಕೆಜೋಳ ಬೆಳೆಯು ಕೂಡ ಬೆಂಕಿರೋಗ ಹಾಗೂ ಕಾಳುಕಟ್ಟುವ ಸಮಯವಾಗಿದ್ದು ಮಳೆಯ ಅಭಾವದಿಂದ ತೆನೆಯು ಬತ್ತುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಬೆಳೆ ಪರಿಹಾರ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಸರ್ಕಾರ ರೈತರ ಎಲ್ಲಾ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಇತ್ತೀಚೆಗೆ ಸರ್ಕಾರವು ಬಡಜನರ ಬಿ.ಪಿ.ಎಲ್. ಕಾರ್ಡ್, ಅರ್ಹತೆ ಇದ್ದ ಕಾರ್ಡನ್ನು ರದ್ದು ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು. ಪ್ರತಿ ಎಕರೆಗೆ ರೂ 25ಸಾವಿರಗಳಂತೆ ಎಲ್ಲಾ ಬೆಳೆಗಳಿಗೂ ಬೆಳೆಪರಿಹಾರ ನೀಡಬೇಕು ಎಂದರಲ್ಲದೆ,
ಈ ಎಲ್ಲಾ ಬೇಡಿಕೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದೆಂದು ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಆರ್. ಚೇತನ್ ಯಳನಾಡು, ಚಿಕ್ಕಪ್ಪನಹಳ್ಳಿ ರುದ್ರಪ್ಪ ಎಂ, ಎಂ.ಬಿ.ತಿಪ್ಪೇಸ್ವಾಮಿ, ಬಸ್ತಿಹಳ್ಳಿ ಸುರೇಶಬಾಬು, ಟಿ. ಮುನಿಸ್ವಾಮಿ, ಜಿ.ಪಿ.ತಿಪ್ಪೇಸ್ವಾಮಿ, ಜಿ.ಕರಿಬಸವಯ್ಯ,ರಾಜ್ಯ ಉಪಾಧ್ಯಕ್ಷರಾದ ಕೆ.ಪಿ.ಭೂತಯ್ಯ, ಟಿ.ತಿಪ್ಪೇಸ್ವಾಮಿ, ಎಂ.ಎಸ್.ಪ್ರಭು, ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.