ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.22:
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಜಿಲ್ಲೆಯಾದ್ಯಂತ ಸೋಮವಾರ ಆರಂಭವಾಯಿತು.
ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಮುಂಭಾಗದ ಬುದ್ಧನಗರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಅಧಿಕಾರಿಗಳು ಹಾಗೂ ಗಣತಿದಾರರೊಂದಿಗೆ ಮನೆ ಭೇಟಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರವು ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ, ರಾಜ್ಯಾದ್ಯಂತ ಸಮೀಕ್ಷಾ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಜಾತಿ ಗಣತಿ ಮಾಡುತ್ತಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ಅಂಕಿ-ಅಂಶಗಳ ಮೂಲಕ ಸಂಗ್ರಹಿಸುವುದು, ಆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದೇ ಸಮೀಕ್ಷೆಯ ಉದ್ದೇಶವಾಗಿದೆ ಎಂದು ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ 4,62,280 ಮನೆಗಳನ್ನು ಗುರುತಿಸಲಾಗಿದ್ದು, ಒಟ್ಟು 3768 ಗಣತಿದಾರರು, 376 ಮೇಲ್ವಿಚಾರಕರು, 92 ಮಾಸ್ಟರ್ ಟ್ರೈನರ್ಸ್‍ಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ಒಟ್ಟು 60 ಪ್ರಶ್ನಾವಳಿಗಳು ಕೇಳಿದ್ದು, ಮುಖ್ಯವಾಗಿ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಆಶಾ ಕಾರ್ಯಕರ್ತೆಯರು ಹಾಗೂ ಎನ್‍ಆರ್‍ಎಲ್‍ಎಂ ಮೂಲಕ ಮನೆಗಳಿಗೆ ಭೇಟಿ ನೀಡಿ ಕುಟುಂಬ ಅನುಸೂಚಿ ನಮೂನೆಗಳನ್ನು ನೀಡಿ ಜಾಗೃತಿ ಮೂಡಿಸಲಾಗಿದೆ. ಒಟ್ಟು 4,31,000 ಕುಟುಂಬ ಅನುಸೂಚಿಗಳನ್ನು ಚಿತ್ರದುರ್ಗ ಜಿಲ್ಲೆಗೆ ನೀಡಲಾಗಿದ್ದು, ಮನೆಗಳಿಗೆ ನಮೂನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಗಣತಿದಾರರಿಗೆ ಒಟ್ಟು 3491 ಕೈಪಿಡಿಗಳನ್ನು ವಿತರಣೆ ಮಾಡಲಾಗಿರುತ್ತದೆ. ಗಣತಿದಾರರಿಗೆ ಅವಶ್ಯವಾಗಿ ಬೇಕಾಗಿರುವ ಗುರುತಿನ ಚೀಟಿಗಳನ್ನು ಮತ್ತು ಟೋಪಿಗಳನ್ನು ವಿತರಣೆ ಮಾಡಲಾಗಿರುತ್ತದೆ. ಕುಟುಂಬದ ಸದಸ್ಯರು, ಮುಖ್ಯಸ್ಥರಿಂದ ಸಮೀಕ್ಷೆಗೆ ಮಾಹಿತಿ ಪಡೆದ ನಂತರ ಪಡೆಯಬೇಕಾದ ಸ್ವಯಂ ದೃಢೀಕರಣ ಪತ್ರಗಳನ್ನು ಗಣತಿದಾರರಿಗೆ ಜಿಲ್ಲಾಡಳಿತದಿಂದ ವಿತರಣೆ ಮಾಡಲಾಗಿರುತ್ತದೆ. ಸಮೀಕ್ಷಾ ಕಾರ್ಯವು ಸೆ.22 ರಿಂದ ಅ.07 ರವರೆಗೆ ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಸಹಾಯವಾಣಿ: ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯ 06 ತಾಲ್ಲೂಕುಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು, ಗಣತಿದಾರರು ಯಾವುದೇ ಪ್ರಶ್ನಾವಳಿಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಚಿತ್ರದುರ್ಗ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ-08194-235034, ಚಳ್ಳಕೆರೆ-08195-200130, 9972997738, ಹಿರಿಯೂರು-6362474421, ಹೊಳಲ್ಕೆರೆ-08191-200021, ಹೊಸದುರ್ಗ-9972385061, ಮೊಳಕಾಲ್ಮುರು-9743085676 ಹಾಗೂ ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆ 8050770004 ಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ತಹಶೀಲ್ದಾರ್ ಗೋವಿಂದರಾಜು, ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ, ಪೌರಾಯುಕ್ತೆ ಲಕ್ಷ್ಮಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಗಣತಿದಾರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.