ಹಾಸನ ಮೇ.21 ಆಯುರ್ವೇದ ಕ್ಲಿನಿಕ್ ಗೆ ನೋಂದಣಿ ಪಡೆದು ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕಂಡುಬರುತ್ತಿದೆ ಇಂತಹ ವೈದ್ಯರುಗಳ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಇಂದು ನಡೆದ ಕೆ.ಪಿ.ಎಂ.ಇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರವಾನಗಿ ಪಡೆಯದೆ ಕ್ಲಿನಿಕ್ ನಡೆಸುತ್ತಿರುವವರನ್ನು ಪತ್ತೆಹಚ್ಚಲು ನಿರ್ದೇಶನ ನೀಡಿದರು. ಅಂತವರ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಖಾಸಗಿ ಕ್ಲಿನಿಕ್‌ಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆಯೇ ಎಂಬುದನ್ನು ಪರಿಶಿಲೀಸುವಂತೆ ಸೂಚಿಸಿದರು.
ಕ್ಷಯ ರೋಗಿಗಳನ್ನು ಪರೀಕ್ಷೆ ನಡೆಸಿ ಹೆಚ್ಚಿನ ಗುರಿ ಸಾಧಿಸಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಹೆಚೆ.ಐ.ವಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ರಚನೆ ಮಾಡುವುದರ ಜೋತೆಗೆ ಶಾಲಾ, ಕಾಲೇಜು ಹಾಸ್ಟೆಲ್‌ಗಳಲ್ಲಿ ಅರಿವು ಕಾರ್ಯಕ್ರಮ ಮಾಡುವಂತೆ ಸೂಚಿಸಿದರಲ್ಲದೆ, ಪಾಸಿಟಿವ್ ಬಂದಿರುವವರು ಡ್ರಗ್ ವ್ಯಸನಿಗಳಾಗಿದ್ದಾರ ಎಂದು ಗಮನಿಸಲು ಹೇಳಿದರು.
ದಡರಾ ಮತ್ತು ರುಬೆಲ್ಲಾ ಲಸಿಕೆ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಯಾವುದೇ ಮಗುವಿಗೆ ತಪ್ಪದಂತೆ ಲಸಿಕೆ ಹಾಕಿಸಲು ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಮಗು ಜನಿಸಿದ 9 ಮತ್ತು 16ನೇ ತಿಂಗಳಿನಲ್ಲಿ ದಡರಾ ಮತ್ತು ರುಬೆಲ್ಲಾ ಲಸಿಕೆ ನೀಡಲಾಗುತ್ತದೆ ಸಾರ್ವಜನಿಕರು ತಮ್ಮ ಮಕ್ಕಳಿಗೆ ನಿಗಧಿತ ಸಮಯದಲ್ಲಿ ಲಸಿಕೆಗಳನ್ನು ಹಾಕಿಸಲು ಜಾಗೃತಿ ಮೂಡಿಸುವಂತೆ ತಿಳಿಸಿದರು.
ದಡರಾ ಮತ್ತು ರುಬೆಲ್ಲಾ ಲಸಿಕೆ ನೀಡಲು ವಿಶೇಷ ಅಭಿಯಾನ ಮೇ.26 ರಿಂದ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಟಾಂ ಟಾಂ ಮಾಡಿಸಿ, ರೇಡಿಯೋ ಮತ್ತು ಸ್ಥಳೀಯ ಕೇಬಲ್ ವಾಹಿನಿ ಗಳ ಮೂಲಕ ಹಾಗೂ ಪತ್ರಿಕೆಗಳಲ್ಲಿ ಜನರಿಗೆ ಮಾಹಿತಿ ತಲುಪುವಂತೆ ಕ್ರಮವಹಿಸಲು ಸೂಚಿಸಿದ ಅವರು ಪಲ್ಸ್ ಪೊಲೀಯೋ ಮಾದರಿಯಲ್ಲಿ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಲು ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡೆಂಗೀ ಎಚ್ಚರ: ಮಳೆಗಾಲ ಪ್ರಾರಂಭವಾಗಿದ್ದು, ಸೊಳ್ಳೆಗಳಿಂದ ಡೆಂಗ್ಯೂ ಬರುವುದರಿಂದ ಮನೆಯ ಒಳಗೆ ಮತ್ತು ಸುತ್ತ ಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೈಗಾರಿಕೆ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷ ಗುರುತಿಸಿದ್ದ ಹಾಟ್ ಸ್ಪಾಟ್‌ಗಳನ್ನು ಗಮನದಲ್ಲಿ ಇಟ್ಟುಕೊಂಡು ನಿಗಾವಹಿಸಿ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ರೀತಿಯ ಔಷಧಿಗಳ ದಾಸ್ತಾನು ಇರುವಂತೆ ನೋಡಿಕೊಳ್ಳಿ ಎಂದರಲ್ಲದೆ, ನೀರಿನಿಂದ ಉಂಟಾಗುವ ರೋಗ ರುಜಿನಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಿ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಹಿಮ್ಸ್ ನಿರ್ದೇಶಕರಾದ ಡಾ.ರಾಜಣ್ಣ, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ನಾಗಪ್ಪ, ಹಿಮ್ಸ್ ಪ್ರಸೂತಿ ವಿಭಾಗದ ತಜ್ಞರಾದ ಡಾ.ಸುಧಾ ಮತ್ತಿತರರು ಉಪಸ್ಥಿತರಿದ್ದರು.
*–
About The Author
Discover more from JANADHWANI NEWS
Subscribe to get the latest posts sent to your email.