
ಹಿರಿಯೂರು:
ನಗರದ ಟಿಬಿ ವೃತ್ತದಿಂದ ಗಾಂಧಿ ಸರ್ಕಲ್ ವರೆಗೂ ನಡೆಯುತ್ತಿರುವ ಹುಳಿಯಾರು ರಸ್ತೆ ಅಗಲೀಕರಣ ಕಾರ್ಯ ತೀರ ವಿಳಂಬವಾಗುತ್ತಿದ್ದು, ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ವಾಹನ ಸವಾರರಿಗೆ, ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬುದಾಗಿ ನಗರಸಭೆ ಸದಸ್ಯ ಹಾಗೂ ವಕೀಲರಾದ ಜಿ.ಎಸ್.ತಿಪ್ಪೇಸ್ವಾಮಿ ತೀವ್ರಆಕ್ರೋಶ ವ್ಯಕ್ತಪಡಿಸಿದರು.
ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಜೆ.ಆರ್. ಅಜಯ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ನಗರಸಭೆ ಸದಸ್ಯ ಗುಂಡೇಶ್ ಕುಮಾರ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿನ ಅನೇಕ ಕೆಲಸಗಳು ಅಪೂರ್ಣಗೊಂಡಿದ್ದು, ಕೌನ್ಸಿಲ್ ಅವಧಿಯೂ ಸಹ ಮುಗಿಯುತ್ತಾ ಬಂದಿದ್ದು, ಈ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ ಎಂದು ಅಧಿಕಾರಿಗಳನ್ನು ಗೋಗರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಬೇಸರ ವ್ಯಕ್ತಪಡಿಸಿದರು,
ನಗರದ ಮುಖ್ಯರಸ್ತೆ ಅಗಲೀಕರಣದ ವಿಚಾರದಲ್ಲಿ ನಗರಸಭೆ ಇಂಜಿನಿಯರ್ ಗಳು ಸಾರ್ವಜನಿಕರ ಪರವಾಗಿ ನಿಲ್ಲದೆ ಕಾಮಗಾರಿ ಕಂಟ್ರಾಕ್ಟರ್ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಎಂಬುದಾಗಿ ಆಪಾದಿಸದರಲ್ಲದೆ, ನಮ್ಮ ಸದಸ್ಯರುಗಳಿಗೂ ಸಹ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂಬುದಾಗಿ ಇಂಜಿನಿಯರ್ ಶ್ರೀರಂಗಯ್ಯ ವಿರುದ್ಧ ಹಲವು ಸದಸ್ಯರು ಮುಗಿಬಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಎ.ವಾಸೀಂರವರು, ನಗರದಲ್ಲಿ ಈ ಬಾರಿ ಸುರಿದ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ಅಷ್ಟೇ ಅಲ್ಲದೆ ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳ ತೆರವು ಕಾರ್ಯಕ್ಕೆ ಮಳೆ ಅಡ್ಡಿಯಾಗಿರುವ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ, ನಾಳೆಯಿಂದಲೇ ಈ ಬಗ್ಗೆ ಸೂಕ್ತ ಗಮನ ಹರಿಸಿ, ಕಾಮಗಾರಿ ವೇಗ ಹೆಚ್ಚಿಸಲಾಗುವುದು ಎಂಬುದಾಗಿ ಸಭೆಗೆ ಭರವಸೆ ನೀಡಿದರು.
ನಗರಸಭೆ ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಕಟ್ಟಡಗಳನ್ನು ನೆಲಸಮಗೊಳಿಸಿಕೊಳ್ಳಲು ವಾಸೋಪಯೋಗದ ಕಟ್ಟಡಗಳಿಗೆ 1500ರೂ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ 3000 ರೂ ಶುಲ್ಕವನ್ನ ನಗರಸಭೆಗೆ ಕಟ್ಟಿಸಿಕೊಳ್ಳುತ್ತಿದ್ದು, ಅಳತೆಯ ಆಧಾರದ ಮೇಲೆ ಶುಲ್ಕವನ್ನು ನಿಗದಿಪಡಿಸಬೇಕು ಎಂಬುದಾಗಿ ಅಧ್ಯಕ್ಷಕರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಶುಲ್ಕ ಪಾವತಿಸುವ ಬಗ್ಗೆ ಬೇರೆ ನಗರಸಭೆಗಳ ಜೊತೆ ಚರ್ಚೆ ನಡೆಸಿ, ಯಾವ ಯಾವ ನಗರಸಭೆಯಲ್ಲಿ ಯಾವರೀತಿಯಾಗಿ ಶುಲ್ಕ ನಿಗದಿಪಡಿಸಿದ್ದಾರೆ, ಎಂಬುದನ್ನು ತಿಳಿದುಕೊಂಡ ನಂತರ ಶುಲ್ಕ ನಿಗದಿ ಪಡಿಸಿದರೆ ಒಳ್ಳೆಯದು ಎಂಬುದಾಗಿ ಹೇಳಿದರು.
ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ ಮಾತನಾಡಿ, ಶುಲ್ಕ ಕಟ್ಟಿಸಿಕೊಳ್ಳುವ ವಿಷಯ ಹಾಗಿರಲಿ, ನಗರಸಭೆ ಮುಂಭಾಗದಲ್ಲಿ ಸುಮಾರು 40 ವರ್ಷಗಳ ಹಿಂದೆ ಕಟ್ಟಿದಂತ ರಾಜ್ ಮೋಹನ್ ಟೆಕ್ಸ್ ಟೈಲ್ಸ್ ಸೇರಿದಂತೆ ಹಲವು ಕಟ್ಟಡಗಳನ್ನು ನೆಲಸಮಗೊಳಿಸದೇ ಹಾಗೆಯೇ ಬಿಡಲಾಗಿದೆ, ಇದಕ್ಕೆ ಕಾರಣವೇನೆಂಬುದು ನಮಗೆ ತಿಳಿಯದಾಗಿದೆ ಎಂಬುದಾಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಕಟ್ಟಡ ಬಾಡಿಗೆದಾರರಾದ ರಾಜ್ ಮೋಹನ್ ಟೆಕ್ಸ್ ಟೈಲ್ಸ್ ನವರು ನಗರಸಭೆಯ ತೆರಿಗೆಯ ಸುಮಾರು 12 ಲಕ್ಷ ಹಣವನ್ನು ಪೂರ್ಣವಾಗಿ ಪಾವತಿಸಿ, ಕಟ್ಟಡ ನೆಲಸಮಮಾಡಲು ಸಮಯಾವಕಾಶ ಮಾಡಿಕೊಡಬೇಕೆಂದು ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ನಲ್ಲಿ ತೀರ್ಪು ಬಂದ ಮೇಲೆ ಮುಂದಿನ ಕ್ರಮತೆಗೆದುಕೊಳ್ಳಲಾಗುವುದು ಎಂಬುದಾಗಿ ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಸುದ್ದಿಗೋಷ್ಠಿ ನಡೆಸಲು ಒಂದು ಕಟ್ಟಡ ಹಾಗೂ ಪತ್ರಕರ್ತರುಗಳಿಗೆ ಲ್ಯಾಪ್ ಟಾಪ್ ನೀಡುವಂತೆ ಒತ್ತಾಯಿಸಿ, ಅರ್ಜಿಯನ್ನು ಮಾನ್ಯ ಅಧ್ಯಕ್ಷರಿಗೆ ನೀಡಲಾಯಿತು. ನಗರಸಭೆಯ ಸರ್ವ ಸದಸ್ಯರು ಈ ವಿಷಯಕ್ಕೆ ಒಪ್ಪಿಗೆ ನೀಡಿದ್ದು, ಈ ವಿಷಯಕ್ಕೆ ಮುಂದಿನ ಸಭೆಯಲ್ಲಿ ರೆಜುಲೇಶನ್ ಸೇರಿಸಿ ನೀಡುವುದಾಗಿ ಪೌರಾಯುಕ್ತರಾದ ವಾಸೀಂ ರವರು ಸಭೆಗೆ ತಿಳಿಸಿದರು.
ಈ ಸಭೆಯಲ್ಲಿ ಪೌರಾಯುಕ್ತರಾದ ವಾಸೀಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ನಗರಸಭೆ ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ಗುಂಡೇಶ್ ಕುಮಾರ್, ಜಿ.ಎಸ್.ತಿಪ್ಪೇಸ್ವಾಮಿ, ಎಂ.ಡಿ.ಸಣ್ಣಪ್ಪ, ಈ. ಮಂಜುನಾಥ್, ಮಹೇಶ್ ಪಲ್ಲವ, ಚಿತ್ರಜಿತ್ ಯಾದವ್, ಬಾಲಕೃಷ್ಣ, ವೈಪಿಡಿ ದಾದಾಪೀರ್, ಗಿರೀಶ್ ಕುಮಾರ್, ಶಿವಕುಮಾರ್, ಶ್ರೀಮತಿ ಶಿವರಂಜಿನಿ ಯಾದವ್, ಶಂಷುನ್ನೀಸಾ, ಮೊದಲಮೇರಿ, ಸಿ.ಅಂಬಿಕಾ ಆರಾಧ್ಯ, ಶ್ರೀಮತಿ ರತ್ನಮ್ಮ, ಶ್ರೀಮತಿ ಮಮತಾ, ನಗರಸಭೆ ಲೆಕ್ಕ ಅಧೀಕ್ಷಕರಾದ ಗೋವಿಂದರಾಜು, ವ್ಯವಸ್ಥಾಪಕರಾದ ಶ್ರೀಮತಿ ಮಂಜುಳ, ಶ್ರೀಮತಿ ಸಂದ್ಯಾ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಪ್ರಿಯಾಂಕ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.