ಚಿತ್ರದುರ್ಗ ಏ. 22
ರಾಜ್ಯ ಸರ್ಕಾರವು ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಏ. 28 ರಂದು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಬೆಂಗಳೂರು ವಿಭಾಗ ಮಟ್ಟದ ಜಿಲ್ಲೆಗಳ ಜನಪ್ರತಿನಿಧಿಗಳು, ಆರ್ಥಿಕ ಮತ್ತು ಶೈಕ್ಷಣಿಕ ತಜ್ಞರು, ಕೈಗಾರಿಕಾ ಕ್ಷೇತ್ರದ ತಜ್ಞರೊಂದಿಗೆ ಸಂವಾದ ಸಭೆಯನ್ನು ನಡೆಸಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ತಾಲ್ಲೂಕುವಾರು ಸಮಗ್ರ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸುವ ಅಂಶಗಳಿಗೆ ಒತ್ತು ನೀಡಿ, ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಡಾ. ಡಿ.ಎಂ. ನಂಜುಂಡಪ್ಪ ಅವರು ಸಲ್ಲಿಸಿದ್ದ ವರದಿಯ ಅನುಷ್ಠಾನದಿಂದ ಅಭಿವೃದ್ಧಿ ಹೊಂದಿರುವ ಹಾಗೂ ಹೊಂದದೇ ಇರುವ ತಾಲ್ಲೂಕುಗಳನ್ನು ಗುರುತಿಸಿ, ಹೊಸದಾಗಿ ಸೂಚ್ಯಂಕವನ್ನು ಕಂಡುಹಿಡಿದು, ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಆರ್ಥಿಕ ತಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಿದೆ. ಬೆಂಗಳೂರು ವಿಭಾಗದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಂತೆ ಸಮಿತಿಯು ಏ. 28 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂವಾದ ಸಭೆಯನ್ನು ನಡೆಸಲಿದ್ದು, ಇದರಲ್ಲಿ ಈ ಎಲ್ಲ ಜಿಲ್ಲೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಈ ಎಲ್ಲ ನಾಲ್ಕೂ ಜಿಲ್ಲೆಗಳನ್ನು ಹೋಲಿಸಿದಾಗ ಚಿತ್ರದುರ್ಗ ಜಿಲ್ಲೆಯು ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಈ ಹಿಂದುಳಿದಿರುವಿಕೆಯನ್ನು ನಿವಾರಿಸಲು ಅಭಿವೃದ್ಧಿ ಅಗತ್ಯವಾಗಿರುತ್ತದೆ. ಈ ಕುರಿತಂತೆ ನಿಖರವಾಗಿ ಅಂಕಿ-ಅಂಶಗಳೊಂದಿಗೆ ವರದಿ ಸಲ್ಲಿಸಬೇಕಿರುತ್ತದೆ. ಕೃಷಿಗೆ ಸಂಬಂಧಿಸಿದಂತೆ ಬಿತ್ತನೆ ಪ್ರದೇಶ, ಆಹಾರ ಧಾನ್ಯ ಮತ್ತು ವಾಣಿಜ್ಯ ಬೆಳೆ ಪ್ರದೇಶ ಪ್ರಮಾಣ, ನೀರಾವರಿ ಮತ್ತು ಮಳೆ ಆಶ್ರಿತ ಪ್ರದೇಶ ಪ್ರಮಾಣ. ರಸಗೊಬ್ಬರದ ಬಳಕೆ ಪ್ರಮಾಣ, ಕೃಷಿ ಯಂತ್ರೋಪಕರಣಗಳ ಬಳಕೆ ಪ್ರಮಾಣ, ಕೃಷಿಗೆ ತಲಾ ಬ್ಯಾಂಕ್ ಸಾಲ ಪ್ರಮಾಣ ವಿವರಗಳನ್ನು ಒದಗಿಸಬೇಕು. ಕೈಗಾರಿಕೆ ಮತ್ತು ಹಣಕಾಸು ಕ್ಷೇತ್ರ ಸಂಬಂಧಿಸಿದಂತೆ ಪ್ರತಿ ಲಕ್ಷ ಜನಸಂಖ್ಯೆಗೆ ಕೈಗಾರಿಕೆ ಘಟಕಗಳ ಸಂಖ್ಯೆ, ಕಾರ್ಮಿಕರ ಸಂಖ್ಯೆ, ಬ್ಯಾಂಕುಗಳಿಂದ ಅಭಿವೃದ್ಧಿ ಸಾಲ, ಪ್ರತಿ ಲಕ್ಷ ಜನಸಂಖ್ಯೆಗೆ ವ್ಯಾಪಾರ, ಹೋಟೆಲ್ ಮತ್ತು ಸಾರಿಗೆಯಲ್ಲಿ ತೊಡಗಿರುವ ಉದ್ಯಮಗಳು. ಜನಸಂಖ್ಯೆಗೆ ಅನುಗುಣವಾಗಿ ಅಂಚೆಕಚೇರಿಗಳು, ರಸ್ತೆಗಳು, ಸಹಕಾರ ಸಂಘಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳ ವಿವರ, ಮೂಲ ಸೌಕರ್ಯಗಳ ಸೂಚ್ಯಂಕವನ್ನು ನಿರ್ಧರಿಸುವ ಸಾಕ್ಷರತಾ ಪ್ರಮಾಣ, ಆಸ್ಪತ್ರೆಗಳು ಮತ್ತು ವೈದ್ಯರ ಪ್ರಮಾಣ, ವಾಹನಗಳ ಸಂಖ್ಯೆ, ವಿದ್ಯಾರ್ಥಿ-ಶಿಕ್ಷಕರ ಅನುಪಾತ, ಪ್ರಾಥಮಿಕ ಶಾಲೆಗಳು, ಪ್ರೌಢ ಶಿಕ್ಷಣ ಮತ್ತು ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಮತ್ತು ಖಾಸಗಿ ಎರಡೂ ವಿವರಗಳನ್ನು ಒದಗಿಸಬೇಕು. ಲಿಂಗಾನುಪಾತ, ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಜನಸಂಖ್ಯೆ ಪ್ರಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿ ಸೂಚ್ಯಂಕ ನಿಗದಿಪಡಿಸುವ ಅಂಶಗಳನ್ನು ನಿಖರವಾಗಿ ಸಂಗ್ರಹಿಸಿ, ವರದಿ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.
ಸಂವಾದ ಸಭೆಗೆ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ತಜ್ಞರು, ಕೈಗಾರಿಕಾ ತಜ್ಞರನ್ನು ಆಹ್ವಾನಿಸಿ, ಸಭೆಯಲ್ಲಿ ಪಾಲ್ಗೊವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಂಗಳೂರು ವಿಭಾಗ ಮಟ್ಟದ ಜಿಲ್ಲೆಗಳಿಂದ ಆಗಮಿಸುವ ಲೋಕಸಭಾ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ವಿವರವನ್ನು ಸಂಗ್ರಹಿಸಿ, ಸೂಕ್ತ ಶಿಷ್ಟಾಚಾರ ಕಲ್ಪಿಸುವುದು, ವಾಸ್ತವ್ಯಕ್ಕೆ ವ್ಯವಸ್ಥೆ, ಊಟೋಪಹಾರದ ವ್ಯವಸ್ಥೆ ಅಲ್ಲದೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಆನಂದ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಡಿಹೆಚ್‍ಒ ಡಾ. ರೇಣುಪ್ರಸಾದ್, ಡಿಡಿಪಿಐ ಮಂಜುನಾಥ್, ಡಿಡಿಪಿಯು ಪುಟ್ಟಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.