ನಾಯಕನಹಟ್ಟಿ: ತಳಕು ಹೋಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ಸಮೀಪದಲ್ಲಿರುವ ಚಿಕ್ಕಹಳ್ಳಿ ಗ್ರಾಮ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಹಳ್ಳಿ ಗ್ರಾಮ ಚಳ್ಳಕೆರೆ ತಾಲ್ಲೂಕಿಗೆ ಸೇರಿದ್ದರೂ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಈ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಸಾರಿಗೆ, ಬೀದಿ ದೀಪ, ಸರ್ಕಾರಿ ಶಾಲೆ, ಸ್ವಚ್ಛತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ಹಲವು ದಶಕಗಳಿಂದಲೂ ಇಲ್ಲದಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಚಿಕ್ಕಹಳ್ಳಿ ಮೂಲಕ ಪ್ರಸಿದ್ಧ ಗೌರಸಮುದ್ರ ಮಾರಮ್ಮನ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು 20 ವರ್ಷಗಳಿಂದ ಡಾಂಬರೀಕರಣವಾಗದೇ, ಎರಡು-ಮೂರು ಅಡಿ ಆಳದ ಗುಂಡಿಗಳಿಂದ ಅಪಾಯಕಾರಿಯಾಗಿದ್ದು, ವಾಹನ ಸವಾರರು ಪ್ರಾಣಭಯದಲ್ಲಿ ಸಂಚರಿಸುವಂತಾಗಿದೆ.
ಈ ಕುರಿತು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಹಿರಿಯ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.
ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಗೆ ಕಾಯಕ ಗ್ರಾಮ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆಕಾಶ್ ಅವರನ್ನು ನೇಮಿಸಿದ್ದರೂ, ಅವರ ಅಧೀನದಲ್ಲಿರುವ ಸರ್ಕಾರಿ ಶಾಲೆ, ಕುಡಿಯುವ ನೀರು, ಬೀದಿ ದೀಪ, ರಸ್ತೆ ಮತ್ತು ಸ್ವಚ್ಛತೆ ಮುಂತಾದ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚಿಕ್ಕಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ಸೌಲಭ್ಯ ಸಿಗದಿದ್ದರೆ ಚುನಾವಣಾ ಬಹಿಷ್ಕಾರ ಎಚ್ಚರಿಕೆ
- ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಗೆ ಒಳಪಟ್ಟಿರುವ ಚಿಕ್ಕಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರಿಪಡಿಸುವಂತೆ ರಸ್ತೆ ತಡೆ ಚಳುವಳಿ ನಡೆಸಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
- ಈ ಹಿಂದೆ, ಸುಮಾರು 30 ವರ್ಷಗಳ ಹಿಂದೆ ಮೂಲಭೂತ ಸೌಲಭ್ಯಗಳಿಗಾಗಿ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಈಗಲೂ ಸಮಸ್ಯೆಗಳಿಗೆ ಪರಿಹಾರ ದೊರಕದಿದ್ದರೆ ಮುಂದಿನ ಚುನಾವಣೆಯನ್ನೂ ಬಹಿಷ್ಕರಿಸಲು ತೀರ್ಮಾನಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
- ಕೆ.ಹೆಚ್. ರಾಜಣ್ಣ
- ಅಧ್ಯಕ್ಷರು, ಎಸ್‌ಡಿಎಂಸಿ
- ಚಿಕ್ಕಹಳ್ಳಿ ಗ್ರಾಮ
About The Author
Discover more from JANADHWANI NEWS
Subscribe to get the latest posts sent to your email.