ಹೊಸದರ್ಗ: ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ದೇಶದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಅದರ ಮೂಲ ಆಶಯಗಳು ಈಡೇರದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಟ್ಟಾರೆ ದೇಶದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ನಿವೃತ್ತ ಡಿಡಿಪಿಐ ಕೆ. ರುದ್ರಪ್ಪ ತೀವ್ರ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಜನತಂತ್ರ ಉಳಿಸಿ ಆಂದೋಲನ ಕರ್ನಾಟಕ ಹೊಸದುರ್ಗ ಶಾಖೆ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ–ಧರ್ಮದ ಹೆಸರಿನಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ, ಅತ್ಯಾಚಾರ ಪ್ರಕರಣಗಳಿಗೆ ಅಂತ್ಯ ಕಾಣುತ್ತಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪ್ರಜೆ ತನ್ನ ಮತದ ಮೌಲ್ಯವನ್ನು ಅರಿತು ಜವಾಬ್ದಾರಿಯುತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಎಚ್ಚರಿಸಿದರು. ಇದೇ ಕಾರಣಕ್ಕಾಗಿ ಜನತಂತ್ರ ಉಳಿಸಿ ಆಂದೋಲನ ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಜನತಂತ್ರಕ್ಕೆ ಎದುರಾಗಿರುವ ಸವಾಲುಗಳ ಕುರಿತು ವಕೀಲ ಹಾಗೂ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ. ರಮೇಶ್ ಮಾತನಾಡಿ, ಭಾರತ ಸೇರಿ ವಿಶ್ವದ ಅನೇಕ ದೇಶಗಳಲ್ಲಿ ಜನವಿರೋಧಿ ಆಡಳಿತಗಳು ಮುಂದುವರಿದಿವೆ. ಇದರ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ಅನಿವಾರ್ಯವಾಗಿದೆ ಎಂದರು. ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಸಂವಿಧಾನಾತ್ಮಕ ಸಂಸ್ಥೆಗಳು ದುರ್ಬಲಗೊಳ್ಳುತ್ತಿರುವುದು ಗಂಭೀರ ಪರಿಸ್ಥಿತಿ ಎಂದ ಅವರು, ಭ್ರಷ್ಟಾಚಾರ, ಧರ್ಮರಾಜಕಾರಣ, ಭಯೋತ್ಪಾದನೆ, ನಕ್ಸಲ್ವಾದ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವಕ್ಕೆ ಸವಾಲುಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಜನತಂತ್ರ ಸವಾಲುಗಳಿಗೆ ಪರಿಹಾರಗಳ ಕುರಿತು ವಕೀಲ ಹಾಗೂ ಚಿಂತಕ ವದ್ದೀಕೆರೆ ಕೆ. ವಿಶ್ವಾನಂದ ಮಾತನಾಡಿ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆ ತರಬೇಕಿದೆ. ಸಮಾಜದ ಹಿಂದುಳಿದ ವರ್ಗಗಳನ್ನು ಸಬಲಗೊಳಿಸಲು ಕೈಗಾರಿಕೆಗಳು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವುದು ಮುಖ್ಯ ಎಂದರು.
ಕಾರ್ಯಕ್ರಮದ ಆಯೋಜಕ ಹಾಗೂ ಪರಿವರ್ತನಾ ಚಿಂತಕ ನಾಗತಿಹಳ್ಳಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಆಂದೋಲನದ ರಾಜ್ಯ ಸಂಚಾಲಕ ಪ್ರೋ. ಸಿ.ಕೆ. ಮಹೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ. ಚಿಕ್ಕಣ್ಣ, ನವಯಾನ ಬುದ್ಧ ಧರ್ಮ ಸಂಘದ ರಾಮು ಗೋಸಾಯಿ, ಎಸ್ಸಿ/ಎಸ್ಟಿ ನೌಕರರ ಒಕ್ಕೂಟದ ಹೆಚ್.ಓ. ತಿಪ್ಪೇಸ್ವಾಮಿ, ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್, ಜಂಬೂದ್ವೀಪ ಕರ್ನಾಟಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಾಲೇನಹಳ್ಳಿ ಆರ್. ರಾಮಣ್ಣ ಸೇರಿದಂತೆ ಚಿಂತಕರುಗಳಾದ ಕೆ. ಕುಮಾರ್, ಶ್ರೀರಾಂಪುರ ಸೋಮಶೇಖರ್, ಬೀರೇನಹಳ್ಳಿ ರಾಮಚಂದ್ರಪ್ಪ, ಡಾ. ಕಿರಣ್ ಕುಮಾರ್, ಆರ್. ಮೂರ್ತಪ್ಪ, ಬ್ಯಾಂಕ್ ಶಿವಮೂರ್ತಿ ಮತ್ತಿತರರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.