January 30, 2026
FB_IMG_1737540897574.jpg



ಚಿತ್ರದುರ್ಗ.ಜ.22:
ಜನರಿಗೆ ಮೂಲಭೂತ ಹಕ್ಕುಗಳನ್ನು ಹಾಗೂ ಸರ್ಕಾರಕ್ಕೆ ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನ ನಿಡಿದ್ದು, ಮನುಷ್ಯರಿಗೆ ಉತ್ತಮ ಜೀವನ ರೂಪಿಸಲು ಕಾನೂನುಗಳು ರಚನೆ ಮಾಡಲಾಗಿದೆ, ಜನರ ಮೂಳಭೂತ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಕ್ರಿಯಾಶೀಲವಾಗಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣಮಂಟಪದಲ್ಲಿ ಬುಧವಾರ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗೌರವಯುತ ಜೀವನ ಮಾಡಲು ಭಾರತ ಸಂವಿಧಾನದಲ್ಲಿ ಹಾಗೂ ಬೇರೆ ಬೇರೆ ಕಾನೂನುಗಳ ಮೂಲಕ ರಕ್ಷಣೆ ಒದಗಿಸಲಾಗಿದೆ. ತನಗೆ ಬೇಕಾದಂತಹ ವೃತ್ತಿ ಆಯ್ಕೆಗೆ, ತನಗೆ ಬೇಕಾದ ರೀತಿಯಲ್ಲಿ ಜೀವನ ನಡೆಸಲು, ಕಾನೂನು ಬದ್ಧವಾಗಿ ಜೀವನ ನಡೆಸಲು ತನಗೆ ಬೇಕಾದ ಹಕ್ಕು, ಆಸ್ತಿ-ಪಾಸ್ತಿ, ದೇಹಕ್ಕೆ ಯಾವುದೇ ತೊಂದರೆ ಕೊಡದಂತಹ ರೀತಿಯಲ್ಲಿ ಕರ್ತವ್ಯ ಹೇರುವ ಮೂಲಕ ಕಾನೂನುಗಳ ರಚನೆ ಮಾಡಲಾಗಿದೆ ಎಂದು ಹೇಳಿದರು.
ಎಲ್ಲ ಧರ್ಮಗಳ ಆಶಯದ ಕ್ರೂಢೀಕರಣವೇ ಭಾರತ ಸಂವಿಧಾನದ ಆಶಯ. ಸಂವಿಧಾನದ ಆಶಯವನ್ನು ರಾಷ್ಟ್ರಕವಿ ಕುವೆಂಪು ಅವರು ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂದು ಒಂದೇ ವಾಕ್ಯದಲ್ಲಿ ಹೇಳಿದ್ದಾರೆ. ಭಾರತ ಸಂವಿಧಾನದಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯ ಹಾಗೂ ಸೈದ್ಧಾಂತಿಕವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸರ್ಕಾರಗಳ ಕರ್ತವ್ಯಗಳು, ಪ್ರಜೆಗಳನ್ನು ನೋಡಿಕೊಳ್ಳುವ ಬಗೆಯನ್ನು ವಿಸ್ತಾರವಾಗಿ, ಎಲ್ಲರಿಗೂ ಸಲ್ಲಬೇಕಾದ, ಎಲ್ಲರೂ ಅನುಸರಿಸಬೇಕಾದ ಗ್ರಂಥವೇ ಭಾರತ ಸಂವಿಧಾನ ಎಂದರು.
ಭಾರತ ಸಂವಿಧಾನದಲ್ಲಿ ಆಶಯ ಪರಿಶೀಲಿಸುವುದಾದರೆ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ಜೀವಿಸುವುದು ಅಂದರೆ ಬರೀ ಕಷ್ಟಗಳನ್ನೇ ಅನುಭವಿಸಿ ಸಾಯುವುದು ಜೀವಿಸುವ ಹಕ್ಕಲ್ಲ. ಸರ್ಕಾರಗಳು ಜೀವಿಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ತನ್ನ ಪ್ರಜೆಗಳಿಗೆ ಒದಗಿಸುವ ಮೂಲಕ ಆರೋಗ್ಯ, ಆಸ್ತಿ-ಪಾಸ್ತಿ ರಕ್ಷಣೆಗೆ ಬೇಕಾದ ಕಾನೂನುಗಳ ರಚನೆ, ನಿಯಮಾವಳಿ ರಚನೆ, ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ಉತ್ತಮ ಜೀವನ ರೂಪಿಸುವುದು ಎಲ್ಲ ಸರ್ಕಾರಗಳ ಕರ್ತವ್ಯವಾಗಿದೆ ಎಂದರು.
ಮೂಲಭೂತ ಹಕ್ಕುಗಳ ಅಡಿಯಲ್ಲಿ ಬೇಕಾದಷ್ಟು ಕಾನೂನುಗಳನ್ನು ನಾವು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂರು ಭಾಗಗಳಾಗಿ ವಿಂಗಡಣೆ ಮಾಡಿ ಶಾಸಕಾಂಗವು ಕಾನೂನು ರಚನೆ ಮಾಡಿದೆ. ಮೂಲಭೂತ ಹಕ್ಕುಗಳನ್ನು ನಾವು ಸಾಮಾನ್ಯ ನ್ಯಾಯಾಲಯಗಳಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕುಗಳನ್ನು ಚಲಾವಣೆ ಮಾಡಲು ಸಾಧ್ಯ. ಆದರೆ ಸಾಮಾನ್ಯವಾದ ಪ್ರಜೆ, ಒಂದು ಹಳ್ಳಿಯ ಮೂಲೆಯಲ್ಲಿರುವ ಪ್ರಜೆ ತನ್ನ ಹಕ್ಕುಗಳನ್ನು ಎಲ್ಲಿ ಚಲಾವಣೆ ಮಾಡಬೇಕು. ಆ ಒಂದು ಉದ್ದೇಶದಿಂದ ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿ ಸಾಕಷ್ಟು ಕಾನೂನುಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾನೂನುಗಳನ್ನು ಶಾಸಕಾಂಗವು ರಚನೆ ಮಾಡಲಿದೆ ಎಂದು ಹೇಳಿದರು.
ಶಾಸಕಾಂಗ, ಕಾರ್ಯಾಂಗ ಸರಿಯಾಗಿ ಕೆಲಸ ಮಾಡದಿದ್ದಾಗ ಮಾತ್ರ ಜನರ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕಾಗುತ್ತದೆ. ಸಾರ್ವಜನಿಕರಿಗೆ ನ್ಯಾಯಯುತವಾಗಿ ತಲುಪಬೇಕಾದ ಸೌಕರ್ಯ, ಮೂಲಭೂತ ಹಕ್ಕುಗಳು, ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ್ದು ಅಧಿಕಾರಿಗಳ ಕರ್ತವ್ಯ. ಈ ದಿಸೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ. ಈ ನಂಬಿಕೆಯನ್ನು ಸರ್ಕಾರಿ ಅಧಿಕಾರಿಗಳು ಹುಸಿಗೊಳಿಸಬಾರದು ಎಂದರು.
ರಾಜ್ಯದಲ್ಲಿ ಈಗ ಅಂದಾಜು 8 ಕೋಟಿ ಜನಸಂಖ್ಯೆ ಇರಬಹುದಾಗಿದ್ದು, ಇಷ್ಟು ಜನಸಂಖ್ಯೆಯ ಜನರ ರಕ್ಷಣೆ ಹಾಗೂ ಸೌಲಭ್ಯ ಒದಗಿಸಲು ಜನಸಂಖ್ಯೆಯ ಶೇ. 01 ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಕಾರ್ಯಾಂಗದ ಸಿಬ್ಬಂದಿಗಳಿದ್ದಾರೆ. ಇದೂ ಕೂಡ ಯೋಚಿಸಬೇಕಾದ ಸಂಗತಿಯಾಗಿದೆ. ಆದಾಗ್ಯೂ ಸರ್ಕಾರಿ ಅಧಿಕಾರಿಗಳು ತಮಗೆ ನೀಡಲಾಗಿರುವ ಹೊಣೆಗಾರಿಕೆಯನ್ನು ಅರಿತು, ನಿಯಮಾನುಸಾರ, ಸಂದರ್ಭೋಚಿತವಾಗಿ ಮಾಡಲೇಬೇಕಾದ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಲ್ಲಿ, ಲೋಕಾಯುಕ್ತಕ್ಕೆ ಬರುವ ದೂರುಗಳ ಸಂಖ್ಯೆ ಕಡಿಮೆಯಾಗುತ್ತವೆ. ಹೀಗಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಮುಂದಾಗೋಣ ಎಂದರು.
ಸುಳ್ಳು ದೂರು ನೀಡಿದಲ್ಲಿ ಕ್ರಮ :
ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡಬೇಕು ಎಂಬ ದುರುದ್ದೇಶದಿಂದ ಆಧಾರರಹಿತ ಹಾಗೂ ದಾಖಲೆ ರಹಿತ ಸುಳ್ಳು ದೂರನ್ನು ಲೋಕಾಯುಕ್ತಕ್ಕೆ ನೀಡಿದಲ್ಲಿ ಅಂತಹ ದೂರುದಾರರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಕಾನೂನಿನನ್ವಯ ಕನಿಷ್ಟ 6 ತಿಂಗಳ ಜೈಲುಶಿಕ್ಷೆ ವಿಧಿಸಲು ಅವಕಾಶವಿದ್ದು, ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಜರುಗಿಸಲಾಗುವುದು. ಹೀಗಾಗಿ ದೂರುದಾರರು ಕೂಡ ಎಚ್ಚರಿಕೆ ವಹಿಸಬೇಕು. ನ್ಯಾಯಾಲಯ ವ್ಯಾಪ್ತಿಗೆ ಬರುವಂತಹ ಪ್ರಕರಣಗಳನ್ನು ಲೋಕಾಯುಕ್ತವು ವಿಚಾರಣೆ ನಡೆಸುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, ಅಧಿಕಾರಿಗಳು ಕಾರ್ಯಾಂಗದ ಜವಾಬ್ದಾರಿಯನ್ನು ಅರಿತು ನಮ್ಮ ನಮ್ಮ ಇಲಾಖೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯತೆ, ನ್ಯೂನತೆಗಳು ಕಂಡುಬಂದಾಗ ದೂರುಗಳು ಹೆಚ್ಚಾಗುತ್ತವೆ. ಲೋಕಾಯುಕ್ತ ಸಂಸ್ಥೆಯೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕಾರ ಮಾಡುತ್ತಿದೆ. ಜಿಲ್ಲೆಯಲ್ಲಿ ಕೂಡ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಕುರಿತ ಅಹವಾಲು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶಾಶ್ವತ ಅಹವಾಲು ಸ್ವೀಕಾರ ಕೇಂದ್ರವನ್ನು ಸ್ಥಾಪಿಸಿದೆ. ಕಂದಾಯ ಇಲಾಖೆಯನ್ನು ಸಂಪೂರ್ಣವಾಗಿ ಡಿಜಿಟೈಜೇಶನ್ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ, ಜಿ.ಪಂ. ಸಿಇಒ ಸೋಮಶೇಖರ್ ಎಸ್.ಜೆ., ಎಸ್.ಪಿ. ರಂಜಿತ್ ಕುಮಾರ ಬಂಡಾರು, ಲೋಕಾಯುಕ್ತ ಅಧೀಕ್ಷಕ ವಾಸುದೇವರಾಮ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading