September 16, 2025
FB_IMG_1732194841727.jpg



ಚಿತ್ರದುರ್ಗ  ನ.21:

ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜರುಗಿದ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಶಿಕ್ಷಣ, ಮನೆ ನಿರ್ಮಾಣ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಯಾವುದೇ ಸ್ಕೀಂಗಳಲ್ಲಿ ನಿಗದಿಗೊಳಿಸಿದ ಗುರಿಗಳನ್ನು ಬ್ಯಾಂಕುಗಳು ಸಾಧಿಸಿಲ್ಲ. ಬಡವರ ಕೆಲಸ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಯಾಕಿಷ್ಟು ತಾತ್ಸರ? ಎಂದು ಪ್ರಶ್ನಿಸಿದ ಸಂಸದರು, ರೈತರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಕಾಳಜಿ ಇಲ್ಲ, ನಬಾರ್ಡ್‍ನಿಂದ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಹೊರತುಪಡಿಸಿ, ಕುರಿ ಸಾಕಣಿಕೆ ಪ್ರಧಾನ ವೃತ್ತಿಯಾಗಿದೆ. ಆದರೆ ಬ್ಯಾಂಕುಗಳು ಇದುವರೆಗೂ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಿಲ್ಲ. ಬಡವರಿಗೆ ಸಾಲ ನೀಡಲು ಆಧಾರ ಕೇಳುವ ಬ್ಯಾಂಕುಗಳು, ಯಾವುದೇ ಆಧಾರ ಇಲ್ಲದೆ ಸಾವಿರಾರು ಕೋಟಿ ಸಾಲವನ್ನು ಉದ್ಯಮಿಗಳಿಗೆ ನೀಡುತ್ತವೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಅಸಮಧಾನ ಹೊರ ಹಾಕಿದರು.
ಸ್ವ-ಸಹಾಯ ಗುಂಪುಗಳಿಗೆ ಉದ್ದಿಮೆ ಸ್ಥಾಪಿಸಲು ಪ್ರೇರೇಪಿಸಿ :


ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಪ್ರೇರೇಪಿಸಬೇಕು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್.ಆರ್.ಎಲ್.ಎಂ) ಅಡಿ ಉದ್ದಿಮೆ ನಡೆಸುವ ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಸಹಾಯಧನ ನೀಡಿ ಸಾಲ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಸ್ವ-ಸಹಾಯ ಗುಂಪುಗಳು, ಅವುಗಳು ಬ್ಯಾಂಕಿನಲ್ಲಿ ಇರಿಸಿರುವ ಠೇವಣಿ, ಇವುಗಳಿಗೆ ಮಂಜೂರು ಮಾಡಿರುವ ಒಟ್ಟು ಸಾಲದ ಮೊತ್ತ, ಸಾಲ ಮರುಪಾವತಿ ಬಗ್ಗೆ ಸಂಪೂರ್ಣ ವಿವರವನ್ನು ಒದಗಿಸಬೇಕು. ತಾ.ಪಂ. ಇಓ ಗಳಿಂದ ಸ್ವ-ಸಹಾಯ ಸಂಘಗಳ ಕಾರ್ಯವೈಖರಿ ಪರಿಶೀಲನೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿನ ಮಹಿಳೆಯರಿಗೆ ಶೇಂಗಾ ಚಿಕ್ಕಿ ಹಾಗೂ ಗೋಕಾಕ್ ಕರದಂಟು ತಯಾರಿಸುವ ತರಬೇತಿಯನ್ನು ನೀಡಬೇಕು. ಇಂತಹ ಸ್ವ-ಸಹಾಯ ಗುಂಪುಗಳು ತಯಾರಿಸಿದ ಶೇಂಗಾ ಚಿಕ್ಕಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಖರೀದಿಸಿ, ಶಾಲಾ ಮಕ್ಕಳಿಗೆ ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಜಿಲ್ಲೆಯಲ್ಲಿ 10,700 ಸ್ವ-ಸಹಾಯ ಗುಂಪುಗಳಿವೆ. ಎನ್.ಆರ್.ಎಲ್.ಎಂ ಅಡಿ 2024-25 ಸಾಲಿನಲ್ಲಿ 2340 ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 1547 ಸಾಲ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 1402 ಸ್ವ ಸಹಾಯ ಗುಂಪುಗಳಿಗೆ ಸಾಲ ಮಂಜೂರು ಮಾಡಿದ್ದು, 145 ಅರ್ಜಿಗಳ ವಿಲೇವಾರಿ ಬಾಕಿಯಿದೆ ಎಂದು ಲೀಡ್ ಬ್ಯಾಂಕ್ ಮಾನೇಜರ್ ಕುಮಾರ್ ಬಾಬು ಸಭೆಯಲ್ಲಿ ಮಾಹಿತಿ ನೀಡಿದರು.
ಬೆಳೆ ವಿಮೆ ಪಾವತಿಗೆ ನ.30 ಗಡುವು:


ಹವಾಮಾನ ವೈಪರಿತ್ಯ ಆಧಾರಿತ ಬೆಳೆ ವಿಮೆ ಪಾವತಿಗೆ ನ.30ರ ಗಡುವು ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 2018-19ನೇ ಸಾಲಿನಿಂದ 2023-24ನೇ ಸಾಲಿನ ವರೆಗೆ ಒಟ್ಟು 514 ರೈತರಿಗೆ ತೋಟಗಾರಿಕೆ ಬೆಳೆ ವಿಮೆ ಪಾವತಿ ಬಾಕಿಯಿದೆ. ನ.30ರ ಒಳಗೆ ರೈತರ ಖಾತೆಗೆ ಜಮೆ ಮಾಡಿದ್ದರೆ ಹಣ ವಾಒಸ್ಸು ಹೊಗಲಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ವಿಮಾ ಕಂಪನಿಯಿಂದ ರೈತರಿಗೆ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದೆ. ಆದರೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಕೃಷಿ ಕ್ಷೇತ್ರಾಧಿಕಾರಿಗಳ ಲಾಗಿನ್‍ನಲ್ಲಿ ಹಣವಿದ್ದು, ಬ್ಯಾಂಕ್ ಅಧಿಕಾರಿಗಳಿಂದಲೇ ವಿಳಂಬವಾಗಿದೆ. ತೋಟಗಾರಿಕೆ ಇಲಾಖೆಯಿಂದ ಎಲ್ಲ ರೈತರ ಮಾಹಿತಿ ನೀಡಿ, ಬ್ಯಾಂಕುಗಳೊಂದಿಗೆ ಸಮನ್ವಯ ಕೈಗೊಳ್ಳಲು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.
ಪಿ.ಎಂ. ಸ್ವ-ನಿಧಿ ಹಾಗೂ ಪಿ.ಎಂ. ವಿಶ್ವಕರ್ಮ ಯೋಜನೆ ಸೇರಿದಂತೆ ವಿವಿಧ ಇಲಾಖೆ ಹಾಗೂ ನಿಗಮಗಳ ಸ್ಕೀಂಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ, ಸೌಲಭ್ಯ ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಜೀವನ್ ಬಿಮಾ ಯೋಜನೆಯಡಿ ಕೇವಲ ಶೇ.18 ರಷ್ಟು ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಶೇ.38 ರಷ್ಟು ಬ್ಯಾಂಕ್ ಗ್ರಾಹಕರು ಮಾತ್ರ ನೊಂದಣಿ ಮಾಡಿಕೊಂಡಿದ್ದಾರೆ. ಇದು ರಾಜ್ಯದಲ್ಲೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಇವು ಸಾಮಾಜಿಕ ಭಧ್ರತಾ ಯೋಜನೆಗಳಾಗಿದ್ದು, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ 18 ರಿಂದ 50 ವಯಸ್ಸಿನವರೆಗಿನ ನಾಗರೀಕರು ರೂ.436/-ಗಳ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 18 ರಿಂದ 70 ವಯಸ್ಸಿನವರೆಗಿನ ನಾಗರೀಕರು ರೂ.20/- ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಯಾವುದೇ ರೀತಿಯ ಮರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ ರೂ.2 ಲಕ್ಷದವರೆಗೆ ವಿಮೆ ಸೌಲಭ್ಯ ದೊರೆಯಲಿದೆ. ಈ ಬಗ್ಗೆ ಗ್ರಾಹಕರ ಮನವೊಲಿಸಿ ಸೌಲಭ್ಯ ನೀಡುವಂತೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.
ಜಿಲ್ಲೆಯಲ್ಲಿ ಹಲವು ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವ 93 ಬ್ಯಾಂಕ್ ಖಾತೆಗಳು ಇದ್ದು, ಆದ್ಯತೆ ಮೇರೆಗೆ ದಿನಾಂಕ ನಿಗದಿಪಡಿಸಿ ಕೈವೈಸಿ ಮಾಡುವ ಮೂಲಕ ಖಾತೆಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕುಮಾರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading