March 16, 2026
FB_IMG_1729514884882.jpg


ಹಿರಿಯೂರು:
ಸಮಾಜದ ಜನರ ಮನಸ್ಸನ್ನು ಪರಿವರ್ತಿಸುವ, ಅವರಲ್ಲಿ ನವಸ್ಪೂರ್ತಿಯನ್ನು ತುಂಬುವಂತಹ ಅದ್ಭುತ ಶಕ್ತಿ ನಮ್ಮ ಸಾಹಿತ್ಯಕ್ಕೆ ಇದ್ದು, ಬದುಕನ್ನು ಸುಗಮ ಹಾದಿಯಲ್ಲಿ ಸಾಗಿಸುವ ಮಾಂತ್ರಿಕ ಶಕ್ತಿ ಬರವಣಿಗೆಗೆ ಇದೆ ಎಂಬುದಾಗಿ ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಹೇಳಿದರು.
ನಗರದ ನೆಹರು ಮೈದಾನದ ರೋಟರಿ ಭವನದಲ್ಲಿ ಭಾನುವಾರ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಹಾಗೂ ಬೆಂಗಳೂರಿನ ಸಿ.ವಿ.ಜಿ. ಪಬ್ಲಿಕೇಷನ್, ತೇಜಸ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಶಫೀವುಲ್ಲ ಅವರ “ಕಣ್ಮರೆ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕಣ್ಮರೆ ಕೃತಿ ಕೌಟುಂಬಿಕ ಪರಿಸರದ ಕಥೆಯನ್ನು ಹೊಂದಿದ್ದು, ಅತ್ಯುತ್ತಮವಾದ ಸಂದೇಶ ನೀಡುತ್ತದೆ, ಇಂತಹ ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುವ ಮೂಲಕ ಇಂದಿನ ಯುವಜನತೆ ಪುಸ್ತಕಗಳನ್ನು ರಚಿಸುವ ಕೌಶಲ್ಯ, ಆಸಕ್ತಿ ಬೆಳೆಸಿಕೊಂಡು ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆ ನೀಡಬೇಕು ಎಂಬುದಾಗಿ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಕೀಲ ಬಿ.ಕೆ.ರಹಮತ್ ಉಲ್ಲಾ ಮಾತನಾಡಿ, ಭಾಷೆಯೇ ಉತ್ತಮ ಆಸ್ತಿ, ಇಂದು ಸಮಾಜ, ಕಾನೂನು, ಮನರಂಜನೆ, ಧರ್ಮ, ಮನುಷ್ಯನ ಬದುಕಿನ ಚಿಂತನೆಯುಳ್ಳ ಪುಸ್ತಕಗಳು ಹೊರಹೊಮ್ಮುತ್ತಿರುವುದು ಉತ್ತಮ ಕೊಡುಗೆ ಎಂಬುದಾಗಿ ಅವರು ಹೇಳಿದರು.
ಅನುವಾದಕ ಫ್ರೊ.ಎಂ.ಜಿ.ರಂಗಸ್ವಾಮಿ ಮಾತನಾಡಿ, ಸರ್ಕಾರಗಳು ಎಲ್ಲಾ ವಲಯಗಳನ್ನು ಖಾಸಗೀಕರಣಗೊಳಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿವೆ. ಸರ್ಕಾರ ಜವಬ್ದಾರಿ ಅರಿತು ಶಿಕ್ಷಣದೊಂದಿಗೆ ಯುವಕರಿಗೆ ಉದ್ಯೋಗ ನೀಡಿದರೆ ಭಾಷೆ ಬೆಳೆಯುತ್ತದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಶ್ರೀಮತಿ ದಯಾಪುತ್ತೂರ್ಕರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಮರ್ಷಕ ಜಬಿವುಲ್ಲಾ ಎಂ.ಅಸನ್ ಕೃತಿ ಕುರಿತು ಮಾತನಾಡಿದರು. ಉಪಾಧ್ಯಕ್ಷೆ ಶ್ರೀಮತಿ ಶೋಭಾಮಲ್ಲಿಕಾರ್ಜುನ್, ಚಿತ್ರಕಲಾವಿದೆ ಶ್ರೀಮತಿ ಉಷಾರಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಲೀಲ್ ಸಾಬ್, ಆರನಕಟ್ಟೆ ಶಿವಕುಮಾರ್, ಪ್ರಾಧ್ಯಾಪಕ ಡಾ. ಧರಣೇಂದ್ರಯ್ಯ, ಈ.ರವೀಶ್, ಶಬ್ರೀನಾ ಮಹಮ್ಮದ್ ಅಲಿ, ಶಿವಮೂರ್ತಿ ಕೋಡಿಹಳ್ಳಿ, ಶಾರದಾ ಜೈರಾಮ್, ಸುಮಾರಾಜಶೇಖರ್, ವಿನಾಯಕ್, ಶಿವಾನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading