September 14, 2025
1755785728809.jpg


ಚಿತ್ರದುರ್ಗ ಆಗಸ್ಟ್21:
ಸಹಕಾರ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಗಣನೀಯ ಸೇವೆ ಸಲ್ಲಿಸಿರುವ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಿ.ಸುಧಾಕರ್ ಅವರ ಸಹಕಾರಿ ಸೇವೆ ಗುರುತಿಸಿ, ಸರ್ಕಾರ 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದೆ.
ಬೆಂಗಳೂರಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಟಿ. ದೇವೇಗೌಡ ಅವರು ಸಚಿವ ಡಿ.ಸುಧಾಕರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿದರು.
ಹಲವು ದಶಕಗಳಿಂದ ಸಹಕಾರ ಕ್ಷೇತ್ರದ ಮುಖಂಡರಾಗಿ ಸೇವೆ ಸಲ್ಲಿಸುವ ಮೂಲಕ ಹಲವಾರು ಸಂಘ ಸಂಸ್ಥೆಗಳ ಸ್ಥಾಪನೆ, ಬೆಳವಣಿಗೆ, ಅಭಿವೃದ್ಧಿಗೆ ಸಚಿವ ಡಿ.ಸುಧಾಕರ್ ಶ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್. ನವೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ: ಚಿತ್ರದುರ್ಗ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ಹೆಸರಿಸಬಹುದಾದ ಕೆಲವೇ ವ್ಯಕ್ತಿಗಳಲ್ಲಿ ಡಿ.ಸುಧಾಕರ್ ರವರು ಒಬ್ಬರು. ಸಹಕಾರ ಕ್ಷೇತ್ರದಲ್ಲಿ ಸುಮಾರು 25 ವರ್ಷಗಳಿಂದ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಸಮಾನತೆ, ಸಹಬಾಳ್ವೆ, ಸಹಕಾರ, ಸಮರಸವನ್ನು ಅಳವಡಿಸಿಕೊಂಡು ಸಹಕಾರ ರಂಗದಲ್ಲಿ ದುಡಿಯುತ್ತಿದ್ದಾರೆ. ಇವರ ಸಹಕಾರ ಕ್ಷೇತ್ರದ ಸೇವೆ ಚಿತ್ರದುರ್ಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ಮಟ್ಟದಲ್ಲೂ ವ್ಯಾಪಿಸಿರುತ್ತದೆ. ಇವರು 2003ನೇ ಸಾಲಿನಲ್ಲಿ ಚಳ್ಳಕೆರೆಯ ಹೊಯ್ಸಳ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಸ್ಥೆಯ ಸಂಸ್ಥಾಪಕರಾಗಿ ಸಂಘ ನೋಂದಾಯಿಸಿ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಆಯ್ಕೆಯಾಗಿ ಇದುವರೆವಿಗೂ ಅಂದರೆ ಸುಮಾರು 22 ವರ್ಷಗಳಿಂದ ಈ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಆಡಳಿತ ವೈಖರಿ ಅನುಕರಣೀಯವಾಗಿರುತ್ತದೆ. ಈ ಸಂಘವು ರೂ.102.63 ಕೋಟಿಯ ದುಡಿಯುವ ಬಂಡವಾಳ, ರೂ. 111.72 ಕೋಟಿಗಳ ವ್ಯವಹಾರ, ರೂ.5.63 ಕೋಟಿಗಳ ನಿವ್ವಳ ಲಾಭಗಳಿಸಿ ಶೇ.25 ಡಿವಿಡೆಂಡ್‍ನ್ನು ಸದಸ್ಯರಿಗೆ ನೀಡಿ ಸದಸ್ಯರ ಹಾಗೂ ಗ್ರಾಹಕರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿದ್ದು, ಈ ಸಂಸ್ಥೆಯು ಇವರ ನಾಯಕತ್ವ ಹಾಗೂ ಮುಂದಾಳತ್ವದಲ್ಲಿ ಪ್ರಗತಿಯ ಪಥದತ್ತ ಸಾಗುತ್ತಿದೆ.
ಚಳ್ಳಕೆರೆ ತಾಲ್ಲೂಕು ನಗರಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2004 ರಿಂದ 2024 ರವರೆಗೆ 5 ವರ್ಷಗಳ ಅವಧಿಗಳಲ್ಲಿ ನಡೆದ ಚಿತ್ರದುರ್ಗ ಡಿಸಿಸಿ ಬ್ಯಾಂಕಿನ ಚುನಾವಣೆಗಳಲ್ಲಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿ ನಂತರ ಬ್ಯಾಂಕಿನ ಅಧ್ಯಕ್ಷರಾಗಿ 20 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ 2024ರಲ್ಲಿ 2024 ರಿಂದ 2029ರ 5 ವರ್ಷಗಳ ಅವಧಿಗೆ ನಡೆದ ಡಿ.ಸಿ.ಸಿ ಬ್ಯಾಂಕಿನ ಚುನಾವಣೆಯಲ್ಲಿ ನಿರ್ದೇಶಕರಾಗಿ ಮರು ಆಯ್ಕೆಯಾಗಿ ಮತ್ತೊಮ್ಮೆ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜಿಲ್ಲೆಯ ಸಣ್ಣ, ಅತಿಸಣ್ಣ ರೈತರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ, ಅಲ್ಪಸಂಖ್ಯಾತ ಮತ್ತು ಮಹಿಳಾ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗಿದೆ ಮತ್ತು ಬ್ಯಾಂಕ್ ಲಾಭಗಳಿಸಲು ಸಾಧ್ಯವಾಗಿರುತ್ತದೆ. ಅಲ್ಲದೇ ಬ್ಯಾಂಕ್ ಇತಿಹಾಸದಲ್ಲಿ ಇವರ ಅಧ್ಯಕ್ಷತೆಯಲ್ಲಿ ಬ್ಯಾಂಕ್ 2018-2019ನೇ ಸಾಲಿನಿಂದ ಬ್ಯಾಂಕಿನ ಸದಸ್ಯರುಗಳಿಗೆ ಡಿವಿಡೆಂಡ್‍ನ್ನು ನೀಡಲಾಗುತ್ತಿದೆ. ಡಿ.ಸಿ.ಸಿ. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಮುಖ ಆಧ್ಯತೆಯನ್ನು ನೀಡಿ ಬ್ಯಾಂಕ್ ಪ್ರಗತಿ ಪಥದತ್ತ ಸಾಗಲು ಶ್ರಮಿಸಿರುತ್ತಾರೆ. 2013-14ರಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳ ರೂ.205.29ಕೋಟಿ ಇದ್ದು, 2024-25ನೇ ಸಾಲಿನ ಅಂತ್ಯಕ್ಕೆ ರೂ. 1338.40ಕೋಟಿ ಇರುತ್ತದೆ. ಬ್ಯಾಂಕಿನಿಂದ 71207 ರೈತರಿಗೆ ರೂ.703.00 ಕೋಟಿ ಕೃಷಿ ಸಾಲ ನೀಡಲಾಗಿದೆ. 280.00 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಬ್ಯಾಂಕ್ ಪ್ರತಿ ವರ್ಷ ಲಾಭ ಗಳಿಸುತ್ತಿದ್ದು, 2024-25ನೇ ಸಾಲಿಗೆ ರೂ.8.03 ಕೋಟಿ ಲಾಭ ಗಳಿಸಿದೆ.
ಸಿಡಿಸಿಸಿ ಬ್ಯಾಂಕಿನ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಸುಮಾರು 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಯ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಬ್ಯಾಂಕಿನ ಅಧ್ಯಕ್ಷರ ಕ್ರಿಯಾಶೀಲ ನಾಯಕತ್ವದ ಶ್ರಮದಿಂದ 2017-18ನೇ ಸಾಲಿನಲ್ಲಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಕ್ಕಾಗಿ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕಿನಿಂದ ಲೆಕ್ಕ ಪರಿಶೋಧನೆಯಲ್ಲಿ ‘ಎ’ ವರ್ಗೀಕರಣ ಗಳಿಸಿರುವ ಬ್ಯಾಂಕ್‍ಗಳ ಪೈಕಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದ ಪ್ರಶಸ್ತಿ ನೀಡಿರುತ್ತಾರೆ. ಬ್ಯಾಂಕಿನ 65 ವರ್ಷಗಳ ಇತಿಹಾಸದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ ಜಿಲ್ಲಾ ಬ್ಯಾಂಕುಗಳಿಗೆ ನೀಡುವ ಪ್ರಶಸ್ತಿಯಲ್ಲಿ 2017-18ನೇ ಸಾಲಿಗೆ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಥಮ ಪ್ರಶಸ್ತಿ ಗಳಿಸಿರುವುದು ಬ್ಯಾಂಕಿನ ಪ್ರಗತಿಯ ಸಂಕೇತವಾಗಿವೆ. 2019ರಲ್ಲಿ ಪುನಃ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ ಜಿಲ್ಲಾ ಬ್ಯಾಂಕುಗಳಿಗೆ ನೀಡುವ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. 2021-22ನೇ ಸಾಲಿನಲ್ಲಿ ಓಂಈSಅಔಃ ಮುಂಬೈ ಇವರು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಡಿ.ಸಿ.ಸಿ ಬ್ಯಾಂಕ್‍ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕಿಗೆ 2ನೇ ಅತ್ಯುತ್ತಮ ಪ್ರಶಸ್ತಿ ನೀಡಿರುತ್ತದೆ. ಈ ಪ್ರಶಸ್ತಿಗಳಿಂದ ಚಿತ್ರದುರ್ಗ ಜಿಲ್ಲೆಯ ಸಹಕಾರಿ ಕ್ಷೇತ್ರದ ಗೌರವ ಹೆಚ್ಚಿಸಿದಂತಾಗಿದೆ.
ಇತರೆ ಕ್ಷೇತ್ರಗಳಲ್ಲಿ ಮಾಡಿರುವ ಸೇವೆ: ಸುಮಾರು 20 ವರ್ಷಗಳ ಹಿಂದೆ ಚಳ್ಳಕೆರೆಯಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಇದರ ಅಧ್ಯಕ್ಷರಾಗಿ ಈ ಸಂಸ್ಥೆಯ ಮೂಲಕ ಸಾವಿರಾರು ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ಅವರ ಮುಂದಿನ ಜೀವನಕ್ಕೆ ದಾರಿ ದೀಪವಾಗಿದ್ದಾರೆ.
ಚಳ್ಳಕೆರೆಯಲ್ಲಿ ಪಾಶ್ರ್ವನಾಥಜೈನ್ ಮಂದಿರದ ಟ್ರಸ್ಟ್‍ನ್ನು ಸ್ಥಾಪಿಸಿ ಎಲ್ಲಾ ವರ್ಗದ ಬಡ ಮಕ್ಕಳಿಗೆ ಶಿಕ್ಷಣ, ಹಿರಿಯರಿಗೆ, ಮಹಿಳೆಯರಿಗೆ ಆರ್ಥಿಕ ಧನ ಸಹಾಯ ನೀಡುತ್ತಿದ್ದಾರೆ, ಗೋಶಾಲೆ ಸ್ಥಾಪಿಸಿ ಹೊರರಾಜ್ಯದಿಂದ ಗೋವುಗಳಿಗೆ ಮೇವನ್ನು ತರಿಸಿ ಸಹಾಯ ಮಾಡಿರುತ್ತಾರೆ. ಈ ಎಲ್ಲಾ ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.
2003ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿ ಜನರ ಸೇವೆಯನ್ನು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಂತರ 2008 ರಲ್ಲಿ ಜರುಗಿದ ಸಾರ್ವರ್ತಿಕ ಚುನಾವಣೆಯಲ್ಲಿ ಹಿರಿಯೂರು ವಿಧಾನ ಸಭಾಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿ ನಂತರರಾಜ್ಯ ಸರ್ಕಾರದ ಸಮಾಜಕಲ್ಯಾಣ ಸಚಿವರು ಹಾಗೂ ಮುಜರಾಯಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಪುನಃ 2013ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಇವರ ಜನಪರ ಕಾಳಜಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿರುವ ಕೆಲಸ ಕಾರ್ಯಗಳಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿರುತ್ತಾರೆ. ನಂತರ 2023ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾಗಿ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜನಪ್ರಿಯ ಶಾಸಕರಾಗಿ ಮತ್ತು ಶ್ರೇಷ್ಠ ಸಹಕಾರಿಯಾಗಿ, ರಾಜಕೀಯ ಕ್ಷೇತ್ರದಲ್ಲಿ ಮತ್ತು ಸಹಕಾರ ರಂಗದಲ್ಲಿ ಅಭಿವೃದ್ಧಿ ಪರ ಕೆಲಸವನ್ನು ಮಾಡುತ್ತಿದ್ದಾರೆ.
ಬಹುಮುಖ ವ್ಯಕ್ತಿತ್ವದ ಗರಿಷ್ಟ ಸೇವಾ ಮನೋಭಾವದ ಸಚಿವ ಡಿ.ಸುಧಾಕರ್ ಅವರು ಸಹಕಾರ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಪ್ರಶಂಸನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಜನ ಸಾಮಾನ್ಯರ ಏಳಿಗೆಗೆ ಶ್ರಮಿಸಿದವರಾಗಿದ್ದು, ಎಲ್ಲಾ ವರ್ಗಗಳ ಜನರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರು ಸೇವೆಗೆ ಆಯ್ಕೆ ಮಾಡಿಕೊಂಡಿರುವ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯ ದೂರ ದೃಷ್ಟಿಯನ್ನು ಇಟ್ಟುಕೊಂಡು ತಮ್ಮದೇ ಆದ ಅಭಿವೃದ್ಧಿ ಕಲ್ಪನೆಗಳನ್ನು ಹೊಂದಿರುತ್ತಾರೆ. ಅವುಗಳನ್ನು ಸಾಕಾರಗೊಳಿಸಲು ದಾಪುಗಾಲಿಡುತ್ತಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading