ಚಿತ್ರದುರ್ಗಫೆ.21:
ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲು ಬೈಸಿಕಲ್ ವಿತರಣೆ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿನಿಯರಿಗೆ ಎಸ್‍ಬಿಐ ನಿಂದ ಸಿಎಸ್‍ಆರ್ ಚಟುವಟಿಕೆಯಡಿ ಶನಿವಾರ ಬೈಸಿಕಲ್ ವಿತರಿಸಿ ಅವರು ಮಾತನಾಡಿದರು.
ಈಚೆಗೆ ಮುಖ್ಯಮಂತ್ರಿಗಳೊಂದಿಗೆ ನಡೆದ ಯೋಜನಾ ಇಲಾಖೆಯ ಸಭೆಯಲ್ಲಿ ಶಿಕ್ಷಣ ತಜ್ಞರು ಸಲ್ಲಿಸಿದ ವರದಿಯ ಪ್ರಕಾರ, ಸೈಕಲ್ ಸೌಲಭ್ಯ ಒದಗಿಸುವುದರಿಂದ ಮಕ್ಕಳ ಶಾಲಾ ಡ್ರಾಪ್‍ಔಟ್ ಪ್ರಮಾಣ ಗಣನೀಯವಾಗಿ ತಗ್ಗಿಸಬಹುದು ಎಂಬ ಅಂಶ ಸಾಬೀತಾಗಿದ್ದು. ಹಳ್ಳಿಗಳಲ್ಲಿ ಇಂದಿಗೂ ಹೆಣ್ಣುಮಕ್ಕಳು 5 ರಿಂದ 8 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗುತ್ತಿರುವುದನ್ನು ನಾನು ಕಂಡಿದ್ದೇನೆ. ಈ ಕಷ್ಟವನ್ನು ತಪ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಎಸ್.ಬಿ.ಐ ದೊಡ್ಡ ಸಂಸ್ಥೆಯಾಗಿದ್ದು, ಕೇವಲ 100 ಸೈಕಲ್‍ಗಳ ವಿತರಣೆಗೆ ಸೀಮಿತವಾಗಬಾರದು. ಸರ್.ಎಂ. ವಿಶ್ವೇಶ್ವರಯ್ಯನವರು ಕಟ್ಟಿ ಬೆಳಿಸಿದ ಸಂಸ್ಥೆ ಇದು. ಚಿತ್ರದುರ್ಗದಂತಹ ಬರಪೀಡಿತ ಜಿಲ್ಲೆಯ ಬಡ ಮಕ್ಕಳ ಶಿಕ್ಷಣಕ್ಕೆ ಬ್ಯಾಂಕ್‍ಗಳು ಇನ್ನಷ್ಟು ಉದಾರವಾಗಿ ನೆರವಾಗಬೇಕು. ಇಂತಹ ಸೌಲಭ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ವಿಸ್ತರಿಸಬೇಕು ಎಂದು ಸಚಿವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್.ಎಸ್.ಎಲ್.ಸಿ ಕಡಿಮೆ ಫಲಿತಾಂಶಕ್ಕೆ ಸಚಿವರ ಅಸಮಾಧಾನ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಬಾಲಕಿಯರ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಕುರಿತು ಸಚಿವ ಡಿ.ಸುಧಾಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯದ ಸರಾಸರಿ ಫಲಿತಾಂಶ ಶೇ.68 ರಷ್ಟಿದ್ದರೆ, ಈ ಶಾಲೆಯ ಫಲಿತಾಂಶ ಶೇ.48ರಷ್ಟು ಬಂದಿರುವುದು ಜಿಲ್ಲಾ ಕೇಂದ್ರದಲ್ಲಿರುವ ಈ ಶಾಲೆಗೆ ಶೋಭೆ ತರುವುದಿಲ್ಲ. ಬಿಇಒ ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ಯಾವ ಕ್ರಮಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ಮುಂದಿನವಾರ ನಾನೇ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿಶೇಷ ಸಭೆ ಕರೆದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿತಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಲೆಯ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸಿಎಸ್‍ಆರ್ ನಿಧಿಯಡಿ ಕೊಡಮಾಡಿದ 100 ಬೈಸಿಕಲ್, ಪೋಷಕರು ಹಾಗೂ ಶಿಕ್ಷಕರು 15 ಬೈಸಿಕಲ್ ಸೇರಿದಂತೆ ಒಟ್ಟು 115 ವಿದ್ಯಾರ್ಥಿನಿಯರಿಗೆ ಬೈಸಿಕಲ್ ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಬ್ಯಾಂಕಿನ ಅಧಿಕಾರಿಗಳಾದ ಅಲೋಕ್ ಚಂದ್ರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಕ್ಷೇತ್ರ ಶಿಕ್ಷಾಣಾಧಿಕಾರಿ ಗಿರೀಜಾ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಏಳುಕೋಟಿ, ಸಾಯಿ ಸೈಕಲ್ ವರ್ಡ್ ಸಾಯಿ ನಯನ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಸಣ್ಣಪಾಲಯ್ಯ, ಉಪ ಪ್ರಾಂಶುಪಾಲ ಕರಿಯಪ್ಪ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಇದ್ದರು.
=============
About The Author
Discover more from JANADHWANI NEWS
Subscribe to get the latest posts sent to your email.