ಚಿತ್ರದುರ್ಗಜ.21:
ಮನೋದಾಸ್ಯ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶ ಬಿತ್ತಿಹೋದವರು ಛಡಿ ಏಟಿನ ಚೌಡಯ್ಯ ಎಂದು ಸಾಹಿತಿ ಗೀತಾ ಭರಮಸಾಗರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ, ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿದ್ದ ಜಾತಿ ಪದ್ಧತಿ, ಮೌಢ್ಯ, ಅನ್ಯಾಯಗಳನ್ನು ಚೌಡಯ್ಯನವರು ತಮ್ಮ ವಚನಗಳ ಮೂಲಕ ಕಟುವಾಗಿ ಟೀಕಿಸುತ್ತಿದ್ದರು. ಸರ್ವಜ್ಞರ ವಚನಗಳನ್ನು “ಸಿಡಿಲ ನುಡಿ” ಎಂದು ಕರೆದರೆ, ಚೌಡಯ್ಯನವರ ವಚನಗಳನ್ನು “ಛಡಿ ಏಟಿನ ನುಡಿ” ಎಂದು ಬಣ್ಣಿಸಲಾಗಿದೆ ಎಂದು ತಿಳಿಸಿದ ಅವರು, ಶೋಷಿತ ಸಮುದಾಯಗಳ ಆಶಯಗಳನ್ನು ಎತ್ತಿಹಿಡಿದು, ಸಮಾನತೆಯ ತತ್ವ ಸಾರಿದ ಚೌಡಯ್ಯನವರ ಬದುಕು ಇಂದಿಗೂ ಸಮಾಜಕ್ಕೆ ದಾರಿದೀಪ ಎಂದು ಎಂದರು.
12ನೇ ಶತಮಾನದ ವಚನ ಚಳವಳಿ ಸಮಾಜದ ಮೇಲೆ ಬೀರಿದ ಪ್ರಭಾವ ಅನನ್ಯವಾದುದು. ಸಮಾಜದ ನಾನಾ ಸ್ತರದವರು ಅನುಭವ ಮಂಟಪದ ಮೂಲಕ ತಮ್ಮೊಳಗಿನ ಬೆಳಕನ್ನು ಕಂಡುಕೊಂಡರು. ಜನಸಾಮಾನ್ಯರಿಗೂ ಬೆಳಕಾದರು. ಆ ಕಾಲದ ವಿಖ್ಯಾತ ಶಿವಶರಣ ಹಾಗೂ ವಚನಕಾರ ಅಂಬಿಗರ ಚೌಡಯ್ಯ ವೃತ್ತಿಯಿಂದ ದೋಣಿ ನಡೆಸುವವರಾಗಿದ್ದರೂ ಪ್ರವೃತ್ತಿಯಲ್ಲಿ ಅನುಭಾವಿ. ತಮ್ಮ ತೀಕ್ಷ್ಮ ವಚನಗಳಿಂದ ಶರಣ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ. ನ್ಯಾಯನಿಷ್ಠುರವಾದಿಯಾಗಿದ್ದರು. ಅಂಬಿಗರ ಚೌಡಯ್ಯನವರು ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವಾಗಿ ಬಳಸಿರುವುದು ಚೌಡಯ್ಯನವರ ದಿಟ್ಟತನ ತೋರಿಸುತ್ತದೆ. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವದ ಚೌಡಯ್ಯ ನೇರನಡೆ, ನಿಷ್ಠುರ, ನಿರ್ಭಿತ ನುಡಿ, ದಿಟ್ಟ ನಿಲುವಿನವರು ಇದನ್ನು ಅವರ ವಚನಗಳಲ್ಲಿಯೂ ಕಾಣಬಹುದು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಕೇವಲ ಅಧಿಕಾರ ಅಥವಾ ಹಣಕೋಸ್ಕರ ನಡೆದಿದ್ದಲ್ಲ. ಅದು ಸತ್ಯವನ್ನು ಉಳಿಸುವುದಕ್ಕಾಗಿ ನಡೆದ ಮಹಾನ್ ಚಳುವಳಿಯಾಗಿದೆ ಎಂದು ತಿಳಿಸಿದರು.
ಅಂಬಿಗರ ಚೌಡಯ್ಯನವರು ಸೇರಿದಂತೆ ಎಲ್ಲ ಶರಣರು ವಚನ ಸಾಹಿತ್ಯವನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದ ಅವರು, ಜಗತ್ತಿನಲ್ಲಿ ಎಲ್ಲವೂ ನಶ್ವರವಾಗಿದ್ದು, ಸತ್ಯ ಮಾತ್ರ ಉಳಿಯುವಂತದ್ದು. ಸತ್ಯಂ, ಶಿವಂ, ಸುಂದರಂ ತತ್ವದಂತೆ ಸತ್ಯವೇ ದೇವರಿಗೆ ಪ್ರಿಯವಾದದ್ದು. ಪ್ರತಿಯೊಂದು ಸಮುದಾಯದಿಂದ ಬಂದ ಶರಣರು ಅಂದು ಒಂದಾಗಿ ಸತ್ಯಕ್ಕಾಗಿ ಹೋರಾಡಿದ್ದು, ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಅಧ್ಯಕ್ಷ ಹೆಚ್.ಡಿ.ರಂಗಯ್ಯ ಅವರು ಚಿತ್ರದುರ್ಗ ನಗರದಲ್ಲಿ ಅಂಬಿಗರ ಚೌಡಯ್ಯ ಸ್ಮಾರಕ ನಿರ್ಮಿಸಲು ಭೂಮಿ ಮಂಜೂರಾತಿ ಹಾಗೂ ಕುಲಕಸುಬಗಳಾದ ಮೀನುಗಾರಿಕೆ ಹಾಗೂ ಸುಣ್ಣ ಸುಡಲು ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಗಂಗಾಭಿಕ ಬೆಸ್ತರ ಸಮಾಜದ ಹಿರಿಯ ಮುಖಂಡ ಚಂದ್ರಣ್ಣ ಮಾತನಾಡಿ, ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಈ ಹಿನ್ನಲೆಯಲ್ಲಿ ಮೀನುಗಾರಿಕೆ ಹರಾಜು ಪ್ರಕ್ರಿಯೆಯಲ್ಲಿ ಸಮುದಾಯಕ್ಕೆ ಆದ್ಯತೆ ನೀಡಿ, ಕುಲಕಸುಬುಗಳಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಕಾರ್ಯದರ್ಶಿ ಪಿ.ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣ ಮೂರ್ತಿ, ಖಜಾಂಚಿ ರಂಗನಾಥ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಚಂದ್ರ, ಎಸಿಎಫ್ ಬಹುಗುಣ, ಶಶಿ, ಟಿಪ್ಪು ಸುಲ್ತಾನ್ ವೇದಿಕೆಯ ಟಿಪ್ಪು ಖಾಸಿಂ ಅಲಿ ಸೇರಿದಂತೆ ಮತ್ತಿತರರು ಇದ್ದರು. ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿಯ ಮುತ್ತುರಾಜ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ನವೀನ್ ಮಸ್ಕಲ್ ನಿರೂಪಿಸಿದರು.
About The Author
Discover more from JANADHWANI NEWS
Subscribe to get the latest posts sent to your email.