ಚಿತ್ರದುರ್ಗ ಡಿ.20:
ಸಂಸದರು ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸದರ ಅನುದಾನದಡಿಯಲ್ಲಿ ಕೈಗೊಂಡಿರುವ ಅನೇಕ ಅಭಿವೃದ್ಧಿ ಕಾಮಗಾರಿಗಳು ಕಳೆದ ನಾಲ್ಕೈದು ವರ್ಷಗಳಿಂದಲೂ ಬಾಕಿ ಇದ್ದು, ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಧೋರಣೆ ಬೇಡ: ರೂ.5 ಲಕ್ಷ, ರೂ.8 ಲಕ್ಷ ಹಾಗೂ ರೂ.10 ಲಕ್ಷದ ಕಾಮಗಾರಿಗಳನ್ನು ಪೂರ್ಣಗೊಳಿಸಲು ವರ್ಷಗಟ್ಟಲೇ ಸಮಯಬೇಕಾ ಎಂದು ಪ್ರಶ್ನಿಸಿದ ಅಪರ ಜಿಲ್ಲಾಧಿಕಾರಿಗಳು, ಯಾವುದೇ ಕಾರಣಕ್ಕೂ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಕಾಮಗಾರಿ ಪ್ರಾರಂಭ ಮಾಡಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಅನುಷ್ಠಾನ ಏಜೆನ್ಸಿಗಳು ಅನುದಾನ ಹಿಂದುರಿಗಿಸಬೇಕು ಎಂದು ತಿಳಿಸಿದರು.
ನಿರ್ಲಕ್ಷೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷತೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಅನುಷ್ಠಾನ ಏಜೆನ್ಸಿಗಳಾದ ನಿರ್ಮಿತಿ ಕೇಂದ್ರ, ಕೆಆರ್‍ಡಿಎಲ್, ಪಿಆರ್‍ಇಡಿ, ಆರ್‍ಡಬ್ಲ್ಯೂಎಸ್ ಸಂಸ್ಥೆಯ ಮುಖ್ಯಸ್ಥರು ಕೆಳ ಹಂತದ ಸಿಬ್ಬಂದಿಯವರ ಪ್ರಗತಿ ಪರಿಶೀಲನೆ ನಡೆಸಿ, ತಮಗೆ ನೀಡಿರುವ ಕಾಮಗಾರಿಯ ಪ್ರತಿ ಹಂತದ ಮಾಹಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ, ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸಬೇಕು. ಪ್ರತಿ ಕಾಮಗಾರಿಯ ಮಾಹಿತಿಯನ್ನು ಸಂಗ್ರಹಿಸಬೇಕು. ನಿಮ್ಮಗಳ ಹಂತದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಸಭೆಯ ನಡಾವಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಹರೀಶ್, ಪಿಆರ್‍ಇಡಿ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ, ಕೆಆರ್‍ಐಡಿಎಲ್ ಕಾರ್ಯಪಾಲಕ ಇಂಜಿನಿಯರ್‍ಗಳಾದ ಶಿವಪ್ರಕಾಶ್, ವಿನಾಯಕ್, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೆದಾರ್ ಮಲ್ಲಿಕಾರ್ಜುನ್, ಪ್ರೋಗ್ರಾಮರ್ ವಿಶ್ವನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.