ಚಿತ್ರದುರ್ಗ:
ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರೋಟರಿ ಕ್ಲಬ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನವಜಾತ ಶಿಶುಗಳು ಸೇರಿದಂತೆ ಈಗಾಗಲೇ ಎಷ್ಟು ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಪಲ್ಸ್ ಪೋಲಿಯೋ ದಿನದಂದು ತಪ್ಪದೇ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕು. ಇದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಪೋಲಿಯೋ ವೈರಸ್ ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಡಿ.ಎಂ. ಅಭಿನವ ಮಾತನಾಡಿ, ಜಿಲ್ಲೆಯಲ್ಲಿ 4,12,426 ಮನೆಗಳನ್ನು ಒಳಗೊಂಡಂತೆ 1169 ಬೂತ್ ತಂಡಗಳನ್ನು ರಚಿಸಲಾಗಿದ್ದು, 239 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಒಟ್ಟು 1,26,361 ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು. ರೋಟರಿ ಮತ್ತು ರೆಡ್ ಕ್ರಾಸ್ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ವಾಟ್ಸಪ್, ವಿಡಿಯೋ, ಜಿಂಗಲ್ಸ್ ಆಡಿಯೋ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪಲ್ಸ್ ಪೋಲಿಯೋ ಜಾಥಾ ಜಿಲ್ಲಾ ಆಸ್ಪತ್ರೆ ಆವರಣದಿಂದ ಪ್ರಾರಂಭವಾಗಿ ಮದಕರಿ ವೃತ್ತ, ಜಿಲ್ಲಾಧಿಕಾರಿಗಳ ವೃತ್ತ ಹಾಗೂ ಗಾಂಧಿ ವೃತ್ತದ ಮೂಲಕ ಸಾಗಿಹೋಗಿ ಪುನಃ ಜಿಲ್ಲಾ ಆಸ್ಪತ್ರೆಯಲ್ಲಿ ಸಮಾಪ್ತಿಗೊಂಡಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ. ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ಡಿವೈಡಿಎಚ್‌ಇಒ ಗೌರಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸಮೂರ್ತಿ, ನಾಗರಾಜ, ಡಿಪಿಎಂ ಮ್ಯಾನೇಜರ್ ಪ್ರಫುಲ್ಲಚಂದ್ರ, ಜಿಲ್ಲಾ ಲಸಿಕೆ ಮೇಲ್ವಿಚಾರಕ ದಸ್ತಗಿರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರಸನ್ನಕುಮಾರ್, ಗಂಗಾಧರ ರೆಡ್ಡಿ, ಶಿರೀಶ್, ರುದ್ರಮುನಿ ಸೇರಿದಂತೆ ಸಿಬ್ಬಂದಿ ವರ್ಗ, ರೆಡ್ ಕ್ರಾಸ್ ಪದಾಧಿಕಾರಿಗಳಾದ ಶಿವರಾಂ, ಮಜಾಹರ್ ಬಾಷಾ, ರೋಟರಿ ಕ್ಲಬ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಹಾಗೂ ಸದಸ್ಯರು, ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿಗಳು, ಕೆ.ಕೆ. ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಶಾಲೆ, ಶರಣಬಸವೇಶ್ವರ ಶಾಲೆ, ರೋಟರಿ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಾದ್ಯತಂಡದೊಂದಿಗೆ ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.