ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಯೋಜನೆಯ ಸಾಲಿಗ್ರಾಮ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ ಹೇಳಿದರು.
ಅವರು ಸಾಲಿಗ್ರಾಮ ಪಟ್ಟಣದ ಯೋಜನಾ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ 2026ನೇ ಸಾಲಿನ ನೂತನ ದಿನಚರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ತಾಲೂಕಿನಲ್ಲಿ ಸಾವಿರಾರು ಸಂಘಟನೆಗಳನ್ನು ರಚಿಸುವ ಕೆಲಸವನ್ನು ಮಾಡಿದ್ದು. ಅವುಗಳ ಮೂಲಕ ಮಹಿಳೆಯರು, ಪುರುಷರು, ರೈತರು ಹಾಗೂ ಯುವಕರುಗಳನ್ನು ಜಾಗೃತಗೊಳಿಸಿ ಅವರುಗಳನ್ನು ಸಬಲರನ್ನಾಗಿ ಮಾಡುವುದರ ಜೊತೆಗೆ ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಶಾಲಾ, ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ, ಮಧ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಮದ್ಯಪಾನಕ್ಕೆ ದಾಸರಾಗಿರುವವರನ್ನು ಅದನ್ನು ತ್ಯಜಿಸಿ ನವ ಜೀವನವನ್ನು ಆರಂಭಿಸಲು ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಿರ್ಗತಿಕರಿಗೆ ಮಾಸಾಶಸನವನ್ನು ನೀಡುವುದು, ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಿವಿಧ ಪರಿಕರಗಳ ವಿತರಣೆ, ಸಮುದಾಯ ಭವನಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಧನಸಹಾಯ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು ಮಾಡುವಂತಹ ಸಂದರ್ಭದಲ್ಲಿ ಹಾಗೂ ಯೋಜನೆಯ ಯಶಸ್ವಿ ನಡೆಗೆ ಮಾಧ್ಯಮದವರ ಸಹಕಾರ ಪ್ರಮುಖವಾದುದು. ಆ ನಿಟ್ಟಿನಲ್ಲಿ ತಾಲೂಕಿನ ಪತ್ರಕರ್ತರುಗಳು ಯೋಜನೆಗೆ ಉತ್ತಮ ಸಲಹೆ ಹಾಗೂ ಸಹಕಾರಗಳನ್ನು ನೀಡುತ್ತಾ ಬರುತ್ತಿದ್ದಾರೆ. ಯೋಜನೆಯ ಎಲ್ಲಾ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಹ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಮಾಧ್ಯಮದವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಸಿ.ಕೆ.ಬಾಲಮನೋಹರ, ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ
ವಡ್ಡರಕೊಪ್ಪಲು ಶಿವರಾಮು, ಪತ್ರಕರ್ತರುಗಳಾದ ಕೆ.ಟಿ.ಮೋಹನ್ ಕುಮಾರ್, ಹೊಸೂರ್ ಆನಂದ್ ಎಸ್.ಬಿ.ಹರೀಶ್, ಎಸ್.ಬಿ.ಬಸವರಾಜು, ಪ್ರಶಾಂತ್, ಮೇಲ್ವಿಚಾರಕಿ ಹೇಮಲತಾ, ಯೋಜನೆಯವರಾದ ಚಾಮರಾಜು, ಅಪ್ಸರಾ, ಶಿವರಾಜು, ಸೌಮ್ಯ, ರಂಜಿನಿ, ಜ್ಞಾನದೇವ್, ಅನುಷ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.