September 16, 2025
FB_IMG_1732111563412.jpg


ಚಿತ್ರದುರ್ಗ. ನ.20:
ಆರೋಗ್ಯ ಕಾರ್ಯಕ್ರಮಗಳ ಕುರಿತು ಜನರಿಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊಸೈಟಿ ಸಭೆ ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಯೋಜನೆಯ ಲಾಭ ಫಲಾನುಭವಿಗಳಿಗೆ ಪಡೆಯುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.
ಅನಧಿಕೃತ ಗೈರು, ಸಿಬ್ಬಂದಿ ವಜಾ: ಎನ್‍ಹೆಚ್‍ಎಂ ಅಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಳ್ಳಕೆರೆ ತಾಲ್ಲೂಕು ದೊಡ್ಡ ಉಳ್ಳಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಘಟಪರ್ತಿ ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹಾಲಕ್ಷ್ಮೀ, ಹಿರಿಯೂರು ತಾಲ್ಲೂಕು ಬೇತೂರು ಪಾಳ್ಯ ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲತಾ, ಚಳ್ಳಕೆರೆ ತಾಲ್ಲೂಕು ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಕೆ.ಸಿ.ಅಶ್ವಿನಿ, ದೊಡ್ಡಚೆಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಟಿ.ಜಯಲಕ್ಷ್ಮೀ ಹಾಗೂ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ಆರ್.ಲಕ್ಷ್ಮೀದೇವಿ ಅವರು ಅನಧಿಕೃತ ಗೈರು ಹಾಜರಿಯಾದ ಹಿನ್ನಲೆಯಲ್ಲಿ ಕರ್ತವ್ಯದಿಂದ ವಜಾಗೊಳಿಸಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸೊಸೈಟಿ ಸಭೆಯಲ್ಲಿ ತೀರ್ಮಾನಗೊಳ್ಳಲಾಯಿತು.
ಆಶಾ ಕುಂದುಕೊರತೆ ಸಭೆ: ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ಆಶಾ ಕಾರ್ಯಕರ್ತರ ಕುಂದುಕೊರತೆ ಸಭೆ ನಡೆಯಿತು.
ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿಗೆ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಚುನಾವಣೆ ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತರನ್ನು ನಿಯೋಜಿಸಿದಾಗ ಟಿಎ, ಡಿಎ ನೀಡಬೇಕು ಎಂಬುದು ಸೇರಿದಂತೆ ಆಶಾ ಕಾರ್ಯಕರ್ತರ ಬೇಡಿಕೆಗಳ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸಿಇಒ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತರು ಉತ್ತಮವಾಗಿ ಸೇವೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರಿಗೆ ಸೂಚಿಸಿದರು.
2019ರ ಜನಸಂಖ್ಯೆಯಂತೆ ಜಿಲ್ಲೆಯಲ್ಲಿ 1481 ಆಶಾ ಕಾರ್ಯಕರ್ತರು ಇದ್ದು, ಕೆಲಸ ಬಿಟ್ಟವರು, ಮರಣ ಇತ್ಯಾದಿ ಕಾರಣಗಳಿಂದಾಗಿ 1445 ಆಶಾ ಇದ್ದು, ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಆಶಾ ಕಾರ್ಯಕರ್ತರ ನೇಮಕ ಮಾಡುವಂತೆ ಜಿಲ್ಲಾ ಆಶಾ ಮೆಂಟರ್ ಸಭೆಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ವಿಫ್ಸ್ ಕಾರ್ಯಕ್ರಮ (ಕಬ್ಬಿಣಾಂಶದ ಮಾತ್ರೆ), ಶುಚಿ ಕಾರ್ಯಕ್ರಮ, ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಜಂತುಹುಳು ನಿವಾರಣಾ ದಿನ ಅನುಷ್ಟಾನ ಕಾರ್ಯತಂತ್ರ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮದ ಅಂಗವಾಗಿ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading