
ಹಿರಿಯೂರು:
ವಿದ್ಯಾರ್ಥಿಗಳು ಸಂಗೀತವನ್ನು ಕಲಿಯುವುದರಿಂದ ಶಿಸ್ತು ಮತ್ತು ಏಕಾಗ್ರತೆ ಬೆಳೆಯುತ್ತದೆಯಲ್ಲದೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಶಾಲೆಯ ಪಠ್ಯದಂತೆ ಸಂಗೀತವನ್ನು ಕಲಿಯಲು ಪೋಷಕರು ಮಕ್ಕಳಿಗೆ ಪ್ರೇರೇಪಿಸಬೇಕು ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಡಾ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸರು, ಪುರಂದರದಾಸರು ಮತ್ತು ತ್ಯಾಗರಾಜ ಮಹಾಸ್ವಾಮಿಗಳ ಪುಣ್ಯಸ್ಮರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮೊಬೈಲ್, ಕಂಪ್ಯೂಟರ್, ಗೀಳಿನಿಂದ ಕೇವಲ ವಿದ್ಯಾರ್ಥಿಗಳಲ್ಲದೆ, ಜನರು ಬದುಕಿನ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ, ಪರಸ್ಪರ ಪ್ರೀತಿ, ಒಡನಾಟ, ಸ್ನೇಹ ಬೆಸೆಯಲು ಜನರೊಂದಿಗೆ ಬೆರೆತು ಮಾತನಾಡುವುದನ್ನು ಬೆಳೆಸಿಕೊಳ್ಳಬೇಕು, ಹಿರಿಯೂರಿನಲ್ಲಿ ಏಕನಾಥೇಶ್ವರಿ ಸಂಗೀತ ಶಾಲೆಯು ಉತ್ತಮ ಸಮಾಜಮುಖಿ ಕಾರ್ಯ ನಡೆಸುತ್ತಿದೆ ಎಂಬುದಾಗಿ ಅವರು ಶ್ಲಾಘಿಸಿದರು.
ಜಾನಪದ ಪರಿಷತ್ ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ಸಾಹಿತ್ಯ ರಂಗಭೂಮಿ ಕಲೆಯು ತುಂಬಾ ಅಮೂಲ್ಯವಾದಂತದ್ದು, ಈ ಕಲೆಗಳಿಗೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂಬುದಾಗಿ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಸಂಗೀತ, ಸಾಹಿತ್ಯ ಕಲೆ ಹಾಗೂ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಬೇಕು. ಅಲ್ಲದೆ ದಾಸರ ಕೀರ್ತನೆಗಳನ್ನು ಸಹ ಮಕ್ಕಳಿಗೆ ತಿಳಿಸಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ತ್ಯಾಗರಾಜರ ಪುಣ್ಯಸ್ಮರಣೆ ಅಂಗವಾಗಿ ಶ್ರೀ ಏಕನಾಥೇಶ್ವರಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸುಮಧುರವಾದ ಸಂಗೀತವನ್ನು ಹಾಡಿ ಪ್ರೇಕ್ಷಕರಿಗೆ ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ಏಕನಾಥೇಶ್ವಲರಿ ಸಂಗೀತ ವಿದ್ಯಾಲಯದ ಸಂಸ್ಥಾಪಕರು, ಪ್ರಾಂಶುಪಾಲರು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ, ನಗರಸಭೆ ಸದಸ್ಯರಾದ ಶ್ರೀಮತಿ ವಿಶಾಲಾಕ್ಷಮ್ಮ, ಮಕ್ಕಳ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಬಿ.ಲಿಂಗಪ್ಪ, ಅಧ್ಯಕ್ಷರಾದ ಜೆ.ನಿಜಲಿಂಗಪ್ಪ, ಬಿ.ಡಿ.ವಿಶ್ವನಾಥ್, ವಿದುಷಿ ಜಗದಂಬ, ಎನ್.ಬಸವರಾಜ್, ತಿಮ್ಮಯ್ಯ, ಡಾ.ಆಂಜನೇಯ, ಕಿರಣ್ ಮಿರಜ್ಕರ್, ಶಿವಲಿಂಗಪ್ಪ, ಅಭಿಷೇಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.