ಚಿತ್ರದುರ್ಗ ಫೆ.20
ಸಾಮಾನ್ಯ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗಳು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿವೆ.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೂ ತೋಟಗಾರಿಕೆ ಬೆಳೆಗಳು ವಿಸ್ತೀರ್ಣ ಹೆಚ್ಚಿಸುವಂತೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ವಿ.ಪಿ.ಬಡಾವಣೆಯ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಫಲ-ಪುಷ್ಪ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಈ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾಗವಹಿಸುತ್ತಿದ್ದಾರೆ. ಹಿಂದೆ ಇಂತಹ ಅದ್ಭುತ ಪ್ರದರ್ಶನಗಳನ್ನು ನೋಡಲು ಬೆಂಗಳೂರಿನ ಲಾಲ್‍ಬಾಗ್‍ಗೆ ಹೋಗಬೇಕಿತ್ತು. ಆದರೆ ಕಳೆದ 35-36 ವರ್ಷಗಳಿಂದ ಚಿತ್ರದುರ್ಗದಲ್ಲೂ ಇಂತಹ ಕಾರ್ಯಕ್ರಮಗಳು ಆಯೋಜಿತವಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುದು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲೆಗೆ ಭದ್ರಾ ನೀರನ್ನು ಫೆಬ್ರವರಿ ಅಂತ್ಯದೊಳಗೆ ಪ್ರಾಯೋಗಿಕವಾಗಿ ಹರಿಸಲು ಯೋಜಿಸಲಾಗಿತ್ತು. ಕೆಲವು ತಾಂತ್ರಿಕ ಅಡೆತಡೆಗಳಿಂದ ಇದು ವಿಳಂಬವಾಗಿದ್ದು, ಮುಂದಿನ ತಿಂಗಳ ಅಂತ್ಯದೊಳಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.





ಸಾಹಿತಿ ಬಿ.ಎಲ್.ವೇಣು ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ತಮ್ಮ ಪ್ರತಿಮೆ ಹಾಗೂ ತಾವು ರಚಿಸಿದ ಕಾದಂಬರಿಗಳನ್ನು ಕಲ್ಲು ಬಂಡೆಗಳ ಮೇಲೆ ಕೆತ್ತಿ ಪ್ರದರ್ಶನಕ್ಕೆ ಇಟ್ಟಿರುವುದನ್ನು ಸಂತಸವಾಗಿದೆ ಸಾಮಾನ್ಯವಾಗಿ ಇಂತಹ ಗೌರವಗಳು ಸಾಹಿತಿ ಸತ್ತ ಮೇಲೆ ಸಿಗುತ್ತವೆ. ನಾನು ಬದುಕಿರುವಾಗಲೇ ತೋಟಗಾರಿಕೆ ಇಲಾಖೆಯು ಈ ರೀತಿ ಗೌರವಿಸಿರುವುದು ನನ್ನ ಪುಣ್ಯ ಎಂದು ಅವರು ಭಾವುಕರಾಗಿ ನುಡಿದರು.
ನಾನು ಸಂಭಾಷಣೆ ಬರೆದ ಚಲನಚಿತ್ರಗಳು ಯಶಸ್ವಿಯಾಗಿದ್ದಲ್ಲದೆ, ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನನ್ನ ಚಲಚಿತ್ರ ಜೀವನದ ಕುರಿತು ‘ಬೆಳ್ಳಿ ಹೆಜ್ಜೆ’ ಎನ್ನುವ ಸಾಕ್ಷ್ಯಚಿತ್ರ ನಿರ್ಮಿಸಿಗೌರವ ನೀಡಿದೆ. ಹಂಪಿ, ದಾವಣಗೆರೆ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ‘ದುರ್ಗದ ಬೇಡರು’, ‘ದೊಡ್ಡಗಾಡಿಸಿದ್ದನ ಪ್ರಸಂಗ’ ಮತ್ತು ‘ನಾಳೆಗಳಿಲ್ಲದವರು’ ಕಾದಂಬರಿಗಳು ಪಠ್ಯವಾಗಿವೆ. ಚಿತ್ರದುರ್ಗ ನಗರಸಭೆ ನನ್ನ ಹೆಸರಿನಲ್ಲಿ ‘ಬಿ.ಎಲ್.ವೇಣು ವೃತ್ತ’ ನಿರ್ಮಿಸಿದೆ. ಹೀಗೆ ನಾನಾ ರೀತಿಯಲ್ಲಿ ನನಗೆ ಬದುಕಿರುವಾಗಲೆ ಗೌರವಗಳು ಸಂದಿರುವುದು ನನ್ನ ಪುಣ್ಯವಾಗಿದೆ. ಅನಾರೋಗ್ಯ ಹಾಗೂ ಮಂಡಿ ನೋವು ಇದ್ದರೂ ಸಹ, ಇಲಾಖೆಯು ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಓಗೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿರುವುದಾಗಿ ಬಿ.ಎಲ್.ವೇಣು ಹೇಳಿದರು.
ಹೂಗಳ ಲೋಕದಲ್ಲಿ ಅರಳಿದ ತಿಪ್ಪೇರುದ್ರಸ್ವಾಮಿ, ಬಿ.ಎಲ್.ವೇಣು ಕಲಾಕೃತಿಗಳು: ಫಲಪುಷ್ಪ ಪ್ರದರ್ಶನದಲ್ಲಿ ಕಲಾವಿದರ ಕೈಚಳಕದಲ್ಲಿ ಮೂಡಿಬಂದಿರುವ ಹೂವಿನ ಟಾಂಗ, ನಾಯಕನಹಟ್ಟಿ ಶ್ರೀ ಕ್ಷೇತ್ರದ ಶ್ರೀ ತಿಪ್ಪೇರುದ್ರಸ್ವಾಮಿ, ಒನಕೆ ಓಬವ್ವ, ಒಳಮಠ, ಹೊರಮಠ, ಚಿತ್ರದುರ್ಗ ಹೆಸರಾಂತ ಸಾಹಿತಿ ಬಿ.ಎಲ್.ವೇಣು ಅವರ ಸಾಹಿತ್ಯ ಕೊಡುಗೆಗಳನ್ನು ಬಿಂಬಿಸುವ ಕಲಾಕೃತಿ, ಮತ್ಸ್ಯ ಪ್ರದರ್ಶನಗಳು ಆಕರ್ಷಣೆ ಎನಿಸಿವೆ.
ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುμÁ್ಠನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿ.ಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್,ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ,
ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ, ಜಲತಜ್ಞ ದೇವರಾಜ ರೆಡ್ಡಿ, ಜಿಲ್ಲಾ ತೋಟಗಾರಿಕೆ ಸಂಘದ ರೀನಾ ವೀರಭದ್ರಪ್ಪ, ಸುಮನ ಅಂಗಡಿ, ಸುಮನ ತಿಮ್ಮಾರೆಡ್ಡಿ, ಶ್ವೇತಾ, ನಾಗರಾಜ ಬೇಂದ್ರೆ ಸೇರಿದಂತೆ ಮತ್ತಿತರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.