February 20, 2026
IMG-20260220-WA0190.jpg

ಚಳ್ಳಕೆರೆ: ನಗರದ ಕೋರ್ಟ್ ಆವರಣದಲ್ಲಿ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಿವಿಲ್ ಹಿರಿಯ ನ್ಯಾಯಾಧೀಶರಾದ ಬಿ.ಆರ್. ಪುನೀತ್ ಕುಮಾರ್ ಮಾತನಾಡಿ, ಸಮಾಜದ ಪ್ರತಿಯೊಂದು ಸಮುದಾಯಕ್ಕೂ ಸಾಮಾಜಿಕ ನ್ಯಾಯವು ಮೂಲಭೂತ ಹಕ್ಕು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಯಾವುದೇ ಸಮುದಾಯವೂ ನ್ಯಾಯದಿಂದ ವಂಚಿತರಾಗಬಾರದು. ಸಾಮಾಜಿಕ ನ್ಯಾಯವು ಯಾರೊಬ್ಬರ ವೈಯಕ್ತಿಕ ಹಕ್ಕಾಗಿರದೆ, ಪ್ರತಿಯೊಬ್ಬ ಸಮುದಾಯಕ್ಕೂ ಸಮಾನವಾಗಿ ಸೇರಿರುವ ಹಕ್ಕಾಗಿದೆ. ಎಲ್ಲ ಸಮುದಾಯದವರು ಸಂಸ್ಕಾರ, ಜವಾಬ್ದಾರಿ ಮತ್ತು ಕರ್ತವ್ಯಬೋಧನೆ ಬೆಳೆಸಿಕೊಂಡು ನ್ಯಾಯಪಾಲನೆಗೆ ಬದ್ಧರಾಗಬೇಕು ಎಂದು ಅವರು ಹೇಳಿದರು.
ಕೆಳಮಟ್ಟದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬುದು ಕಾಲದ ಅಗತ್ಯವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾನ ಹಕ್ಕುಗಳಲ್ಲಿ ಬೆಳೆಯುವಂತಹ ಪರಿಸರ ನಿರ್ಮಾಣವಾಗಬೇಕು. ಜಾತಿ-ಧರ್ಮದ ಭೇದಭಾವ ತೊರೆದು, ಎಲ್ಲ ಸಮುದಾಯಗಳು ಒಂದಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಿದಾಗ ಮಾತ್ರ ಸಮಗ್ರ ನ್ಯಾಯ ಸಾಧನೆ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶರಾದ ಎಚ್.ಆರ್. ಹೇಮ ಅವರು ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳು ಒಂದಾಗಿರುತ್ತವೆ. ಪ್ರತಿಯೊಬ್ಬ ನಾಗರಿಕರು ಕಾನೂನಿನ ರೂಪರೇಷೆಗಳನ್ನು ತಿಳಿದುಕೊಂಡು ಕಾನೂನು ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಕಾನೂನು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಸಿದ್ದರಾಜು ತಿಪ್ಪೇಸ್ವಾಮಿ, ನೇತ್ರಾವತಿ, ಗಂಗಾಧರ್ ಸೇರಿದಂತೆ ಅನೇಕ ವಕೀಲರು ಹಾಗೂ ಕಕ್ಷಿದಾರರು ಉಪಸ್ಥಿತರಿದ್ದರು.
ಸಮಾಜದಲ್ಲಿ ಸಮಾನತೆ, ಹಕ್ಕುಗಳ ಅರಿವು ಹಾಗೂ ನ್ಯಾಯಬದ್ಧತೆಯ ಮಹತ್ವವನ್ನು ಸಾರುವ ಮೂಲಕ ಕಾರ್ಯಕ್ರಮ ಗಮನ ಸೆಳೆಯಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading