February 20, 2026
IMG-20260220-WA0076.jpg

ಚಳ್ಳಕೆರೆ:
ತಾಲೂಕಿನ ಬಾಲೇನಹಳ್ಳಿ ಹಾಗೂ ಕುರುಡಿಹಳ್ಳಿ ನಡುವಿನ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಉಂಟಾಗಿರುವ ಆಳವಾದ ಗುಂಡಿಯು ವಾಹನ ಸವಾರರ ಜೀವಕ್ಕೆ ನೇರ ಅಪಾಯವಾಗಿ ಪರಿಣಮಿಸಿದೆ. ರಸ್ತೆ ಅಂಚಿನ ಮಣ್ಣು ಕೊರೆತದಿಂದ ಕುಸಿದು ಹೋಗಿ ದೊಡ್ಡ ಗಾತ್ರದ ಗುಂಡಿ ನಿರ್ಮಾಣವಾಗಿದ್ದು, ಸಂಚಾರಕ್ಕೆ ಭಾರೀ ಆತಂಕ ಸೃಷ್ಟಿಸಿದೆ.
ರಸ್ತೆಯ ಅಂಚಿನ ಭಾಗ ಸಂಪೂರ್ಣವಾಗಿ ಕುಸಿದಿರುವುದರಿಂದ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಅಥವಾ ವೇಗವಾಗಿ ಸಂಚರಿಸುವ ವಾಹನಗಳು ನಿಯಂತ್ರಣ ತಪ್ಪಿದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಇದೇ ಮಾರ್ಗವನ್ನು ನಿತ್ಯ ಶಾಲಾ ಮಕ್ಕಳು, ರೈತರು ಹಾಗೂ ದ್ವಿಚಕ್ರ ವಾಹನ ಸವಾರರು ಬಳಸುತ್ತಿರುವ ಹಿನ್ನೆಲೆ ಅಪಾಯದ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಓಟಿ ತಿಪ್ಪೇಸ್ವಾಮಿ, “ರಸ್ತೆ ನಿರ್ಮಾಣದ ವೇಳೆ ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ದುಸ್ಥಿತಿಗೆ ಕಾರಣವಾಗಿದೆ. ಹಲವು ದಿನಗಳಿಂದ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಅಂಚು ಮತ್ತು ಗುಂಡಿಯ ನಡುವಿನ ಅಂತರ ಅತಿ ಕಡಿಮೆ ಇರುವುದರಿಂದ ಸಣ್ಣ ತಪ್ಪಿನಿಂದಲೇ ದೊಡ್ಡ ಅಪಘಾತ ಸಂಭವಿಸಬಹುದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ರಸ್ತೆ ಪಕ್ಕದಲ್ಲಿ ಸುರಕ್ಷತಾ ಕಂಬಗಳು, ಪ್ರತಿಬಿಂಬ ಕಂಬಗಳು ಅಥವಾ ಎಚ್ಚರಿಕಾ ಫಲಕಗಳಿಲ್ಲದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. “ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಸ್ಥಳೀಯರು ದೂರಿದ್ದಾರೆ.
ತಕ್ಷಣ ಕ್ರಮಕ್ಕೆ ಆಗ್ರಹ
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕುಸಿದ ಭಾಗವನ್ನು ಭದ್ರವಾಗಿ ಮರುನಿರ್ಮಾಣ ಮಾಡಬೇಕು. ತಾತ್ಕಾಲಿಕವಾಗಿ ಮಣ್ಣು ತುಂಬಿಸಿ ಸಮತಟ್ಟುಗೊಳಿಸುವುದು, ಎಚ್ಚರಿಕಾ ಫಲಕಗಳು ಹಾಗೂ ಪ್ರತಿಬಿಂಬ ಕಂಬಗಳನ್ನು ಅಳವಡಿಸುವಂತಹ ತುರ್ತು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಓಟಿ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲು ಶೀಘ್ರ ಕ್ರಮ ಅಗತ್ಯವಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುವದೆಯೇ ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading