ಚಿತ್ರದುರ್ಗಫೆ.20:
ರನ್ನ ವೈಭವ-2025ರ ಅಂಗವಾಗಿ ಚಿತ್ರದುರ್ಗ ನಗರಕ್ಕೆ ಆಗಮಿಸಿದ ರನ್ನ ರಥಯಾತ್ರೆಗೆ ಬುಧವಾರ ರಾತ್ರಿ ಜಾನಪದ ಕಲಾಮೇಳಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುವ ರನ್ನ ವೈಭವ-2025ರ ಅಂಗವಾಗಿ ರನ್ನ ರಥಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ತುಮಕೂರಿನಿಂದ ಶಿರಾ, ಹಿರಿಯೂರು ಮಾರ್ಗವಾಗಿ ಚಿತ್ರದುರ್ಗ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಮದಕರಿ ವೃತ್ತದಲ್ಲಿ ಸ್ವಾಗತಿಸಲಾಯಿತು.
ಮದಕರಿ ವೃತ್ತದಿಂದ ಮೆರವಣಿಗೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು. ಈ ವೇಳೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ರನ್ನನ ಮೂರ್ತಿಗೆ ಪೂಜೆ ಸಲ್ಲಿಸಿ, ಪುಪ್ಪನಮನ ಸಲ್ಲಿಸಿದರು. ರನ್ನ ರಥ ಸಮಿತಿಯ ಸದಸ್ಯರಿಂದ ರನ್ನನ ಗದೆಯನ್ನು ಹಸ್ತಾಂತರ ಮಾಡಿಕೊಂಡ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ಮೂಲಕ ರನ್ನ ರಥಕ್ಕೆ ಚಾಲನೆ ನೀಡಿದರು.
ರನ್ನ ರಥಯಾತ್ರೆಯು ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ವೇಳೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಖಜಾಂಚಿ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ರಾಜಪ್ಪ, ನಿರ್ದೇಶಕರಾದ ಡಾ.ಬಿ.ಟಿ.ಲೋಲಾಕ್ಷಮ್ಮ, ಉಮೇಶಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಹೆಚ್.ಬಸವರಾಜಪ್ಪ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿ ರಥಯಾತ್ರೆಯ ಸ್ವಾಗತ ಮತ್ತು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ರಥಯಾತ್ರೆಯು ಚಿತ್ರದುರ್ಗ ನಗರದಿಂದ ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆಗೆ ತೆರಳಿತು.


About The Author
Discover more from JANADHWANI NEWS
Subscribe to get the latest posts sent to your email.