January 29, 2026
FB_IMG_1768929993138.jpg

ಚಿತ್ರದುರ್ಗ ಜ.20:
ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ನಿಖರ ಹಾಗೂ ವಾಸ್ತವ ಅಂಕಿ ಅಂಶಗಳ ಕ್ರೋಢೀಕರಣ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಆಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಾನವ ಅಭಿವೃದ್ಧಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಠಿ ಯೋಜನೆ-2031 ರ ಕುರಿತಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಭಾರತ 4 ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶವಾಗಿದೆ. ಆದರೆ ವಿಶ್ವದಲ್ಲಿಯೇ ಅತಿ ಕಡಿಮೆ ತಲಾದಾಯ ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿರುವುದು ವೈರುಧ್ಯ ಎನಿಸುತ್ತದೆ. ಸ್ಥಳೀಯವಾಗಿ ಜನರಿಗೆ ಉದ್ಯೋಗ ದೊರೆತು ಆದಾಯ ಮಟ್ಟ ಹೆಚ್ಚಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಸಂಗ್ರಹಿಸುವ ದತ್ತಾಂಶಗಳು ಅತಿ ಮುಖ್ಯವಾಗುತ್ತವೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಚಿತ್ರದುರ್ಗ ಅತ್ಯಂತ ಕಡಿಮೆ ತಲಾದಾಯ ಹೊಂದಿರುವ ಜಿಲ್ಲೆಯಾಗಿದೆ. ರಾಜ್ಯದ ಸರಾಸರಿ ತಲಾ ಆದಾಯ ರೂ.03 ಲಕ್ಷವಿದ್ದರೆ, ಜಿಲ್ಲೆಯ ತಲಾ ಆದಾಯ ರೂ. 1.77 ಲಕ್ಷವಿದೆ. ಜಿಲ್ಲೆಯಲ್ಲಿ ಶೇ.56.67 ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಹೆಚ್ಚಾಗಿದೆ. ಜಿಲ್ಲೆಯು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದು, ಈ ವರ್ಷದ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ 28 ಸ್ಥಾನ ಹಾಗೂ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 23ನೇ ಸ್ಥಾನದಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶೈಕ್ಷಣಿಕ ಸಾಧನೆ ತೀರಾ ಕಳಪೆ ಮಟ್ಟದಲ್ಲಿದ್ದು, ಇತ್ತೀಚಿನ ಶೈಕ್ಷಣಿಕ ವರದಿಯೊಂದರಲ್ಲಿ 6 ರಿಂದ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಶೇ.48 ರಷ್ಟು ವಿದ್ಯಾರ್ಥಿಗಳಿಗೆ 2 ತರಗತಿಯ ಪಠ್ಯ ಪುಸ್ತಕ ಓದಲು ಬರುವುದಿಲ್ಲ. ಶೇ.36ರಷ್ಟು ವಿದ್ಯಾರ್ಥಿಗಳಿಗೆ 2 ಅಂಕಿಯ ಕೂಡುವಿಕೆ, ಕಳೆಯುವಿಕೆ, ಗುಣಕಾರ ಹಾಗೂ ಭಾಗಕಾರ ಲೆಕ್ಕಗಳನ್ನು ಮಾಡಲು ಬರದಂತಹ ಸ್ಥಿತಿ ಇದೆ. ಇಂತಹ ವಿದ್ಯಾರ್ಥಿಗಳು ಮುಂದೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಉತ್ತಮ ಪಲಿತಾಂಶ ತರಲು ಹೇಗೆ ಸಾಧ್ಯ. ಇದೇ ಮಾದರಿಯಲ್ಲಿ ಜಿಲ್ಲೆ ಸಮುದಾಯ ಆರೋಗ್ಯ, ಪೌಷ್ಠಿಕಾಂಶ, ಅನಿಮೀಯತೆ, ವಾಣಿಜ್ಯ, ವ್ಯಾಪಾರ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಅತ್ಯಂತ ಹಿಂದಿಳಿದೆ. ಇವುಗಳನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆ ತಂದು, ಜಿಲ್ಲೆಯ ಜನರ ಆದಾಯ ಹಾಗೂ ಜೀವನ ಮಟ್ಟ ಸುಧಾರಿಸಲು ಅಗತ್ಯ ಇರುವ ಅಂಕಿ ಅಂಶಗಳನ್ನು ಅಧಿಕಾರಿಗಳು ಕ್ರೋಢಿಕರಿಸಿದರೆ, ಮುಂಬರುವ ವರ್ಷಗಳಲ್ಲಿ ಇವುಗಳ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ. ಯಾವುದೇ ಕಾರಣಕ್ಕೂ ಕಲ್ಪಿತ ಹಾಗೂ ಸುಳ್ಳು ಅಂಕಿ ಅಂಶಗಳನ್ನು ಅಧಿಕಾರಿಗಳು ನೀಡಬಾರದು. ಈ ಹಿನ್ನಲೆಯಲ್ಲಿಯೇ ಕಾರ್ಯಾಗಾರ ಏರ್ಪಡಿಸಲಾಗಿದೆ. ಪ್ರತಿ ತಿಂಗಳು ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಪರಿಶೀಲನೆಗಾಗಿ ಸಭೆ ನಡೆಸುವುದಾಗಿ ಸಿಇಓ ಡಾ.ಆಕಾಶ್ ತಿಳಿಸಿದರು.
ಯೋಜನೆ ಮತ್ತು ಅಂಕಿ ಸಂಖ್ಯೆ ಸಂಗ್ರಹಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಬಸವರಾಜ್.ಎಸ್ ಮಾತನಾಡಿ, ಕಾರ್ಯಾಗಾರದ ಪ್ರಮುಖ ಉದ್ದೇಶವೆಂದರೆ, ಮಾನವ ಅಭಿವೃದ್ಧಿ ಸೂಚ್ಯಂಕ-2025 ರಲ್ಲಿ ಜಿಲ್ಲೆಯ ಜನರ ಜೀವನ ಶೈಲಿ, ಜೀವನ ಮಟ್ಟ ಹಾಗೂ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವುದಾಗಿದೆ. ಇದಕ್ಕಾಗಿ ಹಲವಾರು ಇಲಾಖೆ ಅಧಿಕಾರಿಗಳು ವಿವಿಧ ರೀತಿಯ ಅಂಕಿ ಅಂಶಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ನೀಡಬೇಕು. ಇದನ್ನು ಆಧಾರಿಸಿ ಮಾನವ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳು ಅನುಷ್ಟಾನಗೊಳಿಸುತ್ತಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಜಿಲ್ಲೆಗೆ ಅಗತ್ಯ ಇರುವ ಹೊಸ ಯೋಜನೆಗಳನ್ನು ರೂಪಿಸಲು ಸಹಾಯಕವಾಗುತ್ತಿದೆ. ಇದರೊಂದಿಗೆ ಸುಸ್ಥರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದು ಎಂದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ದಾವಣಗೆರೆ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಪಕ ಡಾ.ಹುಚ್ಚೇಗೌಡ, ತುಮಕೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಮುನಿರಾಜು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading