ಯಾದಲಗಟ್ಟೆ:
ಯಾದಲಗಟ್ಟೆ ಗ್ರಾಮದ ಮಾರಮ್ಮ ಹಾಗೂ ಕರಿಯಮ್ಮ ದೇವತೆಗಳ ದೊಡ್ಡ ಜಾತ್ರೆಗೆ ಮಾರಮ್ಮ ದೇವಸ್ಥಾನದಲ್ಲಿ ಕಂಕಣ ಕಟ್ಟುವ ಮೂಲಕ ಬೆಂಗಳೂರಿನ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ಪರಮಪೂಜ್ಯ ಶ್ರೀ ಶ್ರೀ ಲಕ್ಷ್ಮೀ ಶ್ರೀನಿವಾಸ ಗುರೂಜಿ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಈ ಜಾತ್ರೆಯಿಂದ ಯಾದಲಗಟ್ಟೆ ಗ್ರಾಮವು ಉಜ್ಜಲವಾಗಿ ಬೆಳೆಯಲಿ, ಹೆಚ್ಚು ವಿದ್ಯಾವಂತರನ್ನು ರೂಪಿಸಲಿ, ಗ್ರಾಮದಲ್ಲಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ನಿರ್ಮೂಲನೆ ಆಗಲಿ, ರೈತರಿಗೆ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ದೊರೆತು ಗ್ರಾಮವು ಉಜ್ಜಲ ಭವಿಷ್ಯವನ್ನು ಕಾಣಲಿ ಎಂದು ಆಶಿಸಿದರು.
ಗ್ರಾಮ ದೇವತೆಗಳ ಮಹತ್ವ ಕರ್ನಾಟಕದಲ್ಲಿ ಅಪಾರವಾಗಿದ್ದು, ರೋಗ–ಕಷ್ಟ–ನಷ್ಟದ ಸಂದರ್ಭದಲ್ಲಿ ದೇವತೆಗಳ ಪೂಜೆ ಪುನಸ್ಕಾರದಿಂದ ಪರಿಹಾರ ಸಿಗುತ್ತದೆ. ದೇವತೆಯ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಯಾದಲಗಟ್ಟೆ ಜಗನ್ನಾಥ್ ಮಾತನಾಡಿ, ಯಾದಲಗಟ್ಟೆ ಗ್ರಾಮಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ದೊಡ್ಡೇರಿ ತಾಲ್ಲೂಕು ಕೇಂದ್ರವಾಗಿದ್ದ ಈ ಗ್ರಾಮ ರಾಜರ ಆಳ್ವಿಕೆಯ ಕೇಂದ್ರವಾಗಿತ್ತು. ಊರಿನ ಹೊರಭಾಗದಲ್ಲಿ ರಾಜನ ಸಮಾಧಿ ಇದ್ದು, ಗ್ರಾಮಸ್ಥರು ಅದನ್ನು ಸ್ಮರಿಸಿ ದೇವಸ್ಥಾನ ನಿರ್ಮಿಸಿದ್ದಾರೆ. ಗ್ರಾಮದ ಇತಿಹಾಸವನ್ನು ದಾಖಲಿಸುವ ಉದ್ದೇಶದಿಂದ ಒಂದು ದಾಖಲೆ ರೂಪದ ಪುಸ್ತಕ ಹೊರತರುವ ಅಗತ್ಯವಿದೆ ಎಂದು ಹೇಳಿದರು. ಜಾತ್ರೆಯ ಸಂದರ್ಭದಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಿ ಶಾಂತಿಯುತವಾಗಿ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.
ಗ್ರಾಮದ ಯುವ ಮುಖಂಡ ರಂಗಸ್ವಾಮಿ ಮಾತನಾಡಿ, ಯುವ ಪೀಳಿಗೆಗೆ ದೇವಸ್ಥಾನಗಳು ಮತ್ತು ದೇವರ ಆರಾಧನೆ ಮಹತ್ವದ್ದಾಗಿದ್ದು, ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಅರ್ಚಕರಾದ ರಾಮಮೂರ್ತಿ, ಮಾರಿಕಾಂಬಾ ದೇವಿಯ ಪೂಜಾರಿ ಗುರುಮೂರ್ತಿ, ಗ್ರಾಮದ ಮುಖಂಡರಾದ ಓ. ಪಾಲಯ್ಯ, ದೇವಸ್ಥಾನದ ಕಾರ್ಯದರ್ಶಿ ಹನುಮಣ್ಣ ಗೌಡ, ಮುತ್ತುರಾಜ್, ರಾಜಣ್ಣ, ಚಿಕ್ಕಣ್ಣ, ಹನುಮಂತರಾಯ, ಓಬಳೇಶಪ್ಪ, ಜಯರಾಮ್, ಗೌರಣ್ಣ, ವಕೀಲ ಮಂಜಣ್ಣ, ಉಪನ್ಯಾಸಕ ಡಾ. ಮಂಜಣ್ಣ, ಬೊಮ್ಮಜ್ಜ, ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾತ್ರೆಯ ಪ್ರಯುಕ್ತ ಗ್ರಾಮದ ವಿವಿಧ ಬಡಾವಣೆಗಳನ್ನು ದೀಪಾಲಂಕಾರ ಹಾಗೂ ತೋರಣಗಳಿಂದ ಅಲಂಕರಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಾತ್ರೆಯ ಸರ್ವ ವ್ಯವಸ್ಥೆಗೆ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಕೋರಲಾಗಿದೆ.
ಗ್ರಾಮದಲ್ಲಿ ಈಗಾಗಲೇ ಮಧ್ಯಪಾನ ನಿಷೇಧ ಜಾರಿಯಲ್ಲಿದ್ದು, ಜಾತ್ರೆ ಅವಧಿಯಲ್ಲಿ ಮುಂಜಾಗ್ರತೆ ಕ್ರಮವಾಗಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
21 ವರ್ಷಗಳ ಬಳಿಕ ನಡೆಯುತ್ತಿರುವ ಈ ಜಾತ್ರೆ ಈ ತಿಂಗಳ 24ರವರೆಗೆ ಅದ್ದೂರಿಯಾಗಿ ಜರುಗಲಿದೆ.
About The Author
Discover more from JANADHWANI NEWS
Subscribe to get the latest posts sent to your email.