January 29, 2026
IMG-20260120-WA0294.jpg

**ನೊಂದಣಾಧಿಕಾರಿಗಳ ಮೇಲೆ ಶಾಸಕರ ಅಂಗರಕ್ಷಕನ ಪ್ರಭಾವ: ಬಿಜೆಪಿ ಆಕ್ರೋಶ
ತಾಲೂಕು ಆಡಳಿತದ ಭ್ರಷ್ಟಾಚಾರ ವಿರುದ್ಧ ಜನಾಂದೋಲನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಘೋಷಣೆ**
ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಅಂಗರಕ್ಷಕರ ಹಾಗೂ ತಾಲೂಕು ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪಕ್ಷದಿಂದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೃಂದಾವನಹಳ್ಳಿ ಗ್ರಾಮದ ರೈತನು ತನ್ನ ಜಮೀನನ್ನು ನೋಂದಣಿ ಮಾಡಿಸಿಕೊಳ್ಳಲು ತಾಲೂಕು ಕಚೇರಿಗೆ ಬಂದಾಗ, ಉಪನೊಂದಣಾಧಿಕಾರಿಗಳ ಮೇಲೆ ಶಾಸಕರ ಅಂಗರಕ್ಷಕ ದೂರವಾಣಿ ಕರೆ ಮೂಲಕ ಜಮೀನು ನೋಂದಣಿ ಮಾಡದಂತೆ ಒತ್ತಡ ಹೇರಿರುವುದು ಖಂಡನೀಯ ಎಂದು ಹೇಳಿದರು.
ಅಂಗರಕ್ಷಕನ ಕೆಲಸ ಶಾಸಕರಿಗೆ ಭದ್ರತೆ ಒದಗಿಸುವುದಷ್ಟೇ ಆಗಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಹಕ್ಕು ಇಲ್ಲ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ರೈತನಿಗೂ ತನ್ನ ಆಸ್ತಿಯನ್ನು ನೋಂದಣಿ ಮಾಡಿಸಿಕೊಳ್ಳುವ ಹಕ್ಕು ಇದೆ. ಇಂತಹ ಕಾನೂನುಬದ್ಧ ಪ್ರಕ್ರಿಯೆಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೊಂದಣಿ ವೇಳೆ ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿರುತ್ತಾರೆ. ಆದರೂ ಶಾಸಕರ ಅಂಗರಕ್ಷಕನ ದೂರವಾಣಿ ಕರೆಗೆ ಅಧಿಕಾರಿಗಳು ಮಣಿದಿರುವುದು ಶೋಭೆ ತರುವುದಿಲ್ಲ. ಶಾಸಕ ಟಿ. ರಘುಮೂರ್ತಿಯವರು ಕೇವಲ ತಮ್ಮ ನಿರ್ಮಾಣ ಕಾರ್ಯಗಳನ್ನು ತೋರಿಸಿ ತಾಲೂಕಿನ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕರ ಅಂಗರಕ್ಷಕ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರೆ, ಪೊಲೀಸ್ ಇಲಾಖೆ ಕೂಡಲೇ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಅಂಗರಕ್ಷಕರಿಗೆ ಶಾಸಕರು ರಕ್ಷಣೆ ನೀಡುವುದು ಸರಿಯಲ್ಲ ಎಂದರು.
ಇನ್ನೂ ತಾಲೂಕು ವ್ಯಾಪ್ತಿಯ ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ನಗರಸಭೆ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಲಂಚವಿಲ್ಲದೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಶಾಸಕರ ಬೆಂಬಲಿಗರು ನಗರಸಭೆಯಲ್ಲಿ ಅಕ್ರಮವಾಗಿ ಸ್ವತ್ತು ಮಾಡಿಸಿಕೊಡುವ ದಂಧೆಯಲ್ಲಿ ತೊಡಗಿದ್ದಾರೆ. ಇದರ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಿ ಜನರ ಪರ ಧ್ವನಿ ಎತ್ತಲಿದೆ ಎಂದು ತಿಳಿಸಿದರು.
ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈಯಕ್ತಿಕ ಆಸ್ತಿಯನ್ನೂ ನೋಂದಣಿ ಮಾಡಿಸಿಕೊಳ್ಳಲು ಸಾರ್ವಜನಿಕರು ಪರದಾಡುವಂತಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಎಲ್ಲಾ ಸರ್ಕಾರಿ ಇಲಾಖೆಗಳ ಮುಂದೆ ಬಿಜೆಪಿ ಪಕ್ಷದಿಂದ ಮುತ್ತಿಗೆ ಹಾಗೂ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವೃಂದಾವನಹಳ್ಳಿ ಗ್ರಾಮದ ಪ್ರಕರಣದಲ್ಲಿ ಶಾಸಕರ ಅಂಗರಕ್ಷಕನ ಪಾತ್ರವಿರುವುದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಇಂತಹ ಅಂಗರಕ್ಷಕರನ್ನು ಶಾಸಕರು ದೂರವಿಡದೆ ಇದ್ದರೆ ತಾಲೂಕಿನ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮಂಡಲ ಅಧ್ಯಕ್ಷ ಸುರೇಶ್, ಸೂರನಹಳ್ಳಿ ಶ್ರೀನಿವಾಸ್, ರುದ್ರಮುನಿ, ಶ್ರೀನಿವಾಸ್, ಈಶ್ವರ ನಾಯಕ್, ಎಬಿವಿಪಿ ಮಂಜುನಾಥ್, ಡಾ. ರಾಮರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading