January 29, 2026
IMG_20251219_184734.jpg

ನಾಯಕನಹಟ್ಟಿ :
ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮಪಂಚಾಯಿತಿ ಕಚೇರಿ ಕಾರ್ಯವೈಖರಿಗೆ ಬೇಸತ್ತ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಶುಕ್ರವಾರ ಪಂಚಾಯಿತಿ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಿದರು.

೨೦೨೫–೨೬ನೇ ಸಾಲಿನ ವಿವಿಧ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಕ್ರಿಯಾಯೋಜನೆ ರೂಪಿಸುವ ಸಲುವಾಗಿ ಶುಕ್ರವಾರ ಗ್ರಾಮಪಂಚಾಯಿತಿ ಸರ್ವಸದಸ್ಯರ ಸಭೆ ಕರೆಯಲಾಗಿತ್ತು. ಆದರೆ ಸಭೆಗೆಂದು ಆಗಮಿಸಿದ ಸದಸ್ಯರು ಬೆಳಿಗ್ಗೆ ೧೧ ಗಂಟೆಯಾದರೂ ಪಿಡಿಒ ಸೇರಿದಂತೆ ಯಾವುದೇ ಸಿಬ್ಬಂದಿ ಕಚೇರಿಗೆ ಆಗಮಿಸದಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಮಪಂಚಾಯಿತಿ ಅಧ್ಯಕ್ಷ ರುದ್ರಮುನಿಯಪ್ಪ, “ನೇರಲಗುಂಟೆ ಗ್ರಾಮಪಂಚಾಯಿತಿಯ ಪಿಡಿಒ ಹಾಗೂ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಪಿಡಿಒ ೧೫ ದಿನಗಳಿಂದ ರಜೆಯಲ್ಲಿದ್ದು, ಕಚೇರಿ ಕಾರ್ಯನಿರ್ವಹಣೆಗೆ ಯಾರೂ ಹೊಣೆ ಹೊರುವವರಿಲ್ಲ. ಇದರ ಪರಿಣಾಮವಾಗಿ ಪಂಚಾಯಿತಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ,” ಎಂದು ಆರೋಪಿಸಿದರು.

ಗ್ರಾಮಪಂಚಾಯಿತಿ ವ್ಯಾಪ್ತಿಯ ೩೩ ಫಲಾನುಭವಿಗಳ ವೈಯಕ್ತಿಕ ಶೌಚಾಲಯಗಳ ಬಿಲ್ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ರೂ.೧೨ ಸಾವಿರ ಹಾಗೂ ಪರಿಶಿಷ್ಟ ಜಾತಿ–ಪಂಗಡದ ಫಲಾನುಭವಿಗಳಿಗೆ ರೂ.೨೦ ಸಾವಿರ ಧನಸಹಾಯ ನೀಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಹಾಗೆಯೇ ರೂ.೫೭ ಸಾವಿರ ಘಟಕ ವೆಚ್ಚದಲ್ಲಿ ನಿರ್ಮಿಸಿರುವ ರೈತರ ೨೪ ಜಾನುವಾರು ಶೆಡ್‌ಗಳಿಗೂ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಅಧಿಕಾರಿಗಳು ಕಚೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ, ಅವಧಿಗೂ ಮುನ್ನ ಕಚೇರಿ ಬಿಟ್ಟು ಹೋಗುತ್ತಾರೆ. ಪ್ರಶ್ನಿಸಿದರೆ ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿದ್ದೇವೆ ಎಂಬ ನೆಪ ಹೇಳುತ್ತಾರೆ. ಇ-ಸ್ವತ್ತುಗಳ ನವೀಕರಣ ಹಾಗೂ ಹೊಸ ಇ-ಸ್ವತ್ತು ದಾಖಲಾತಿಗೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಸಾರ್ವಜನಿಕರನ್ನು ಕಾಡಲಾಗುತ್ತಿದೆ ಎಂದು ಆರೋಪಿಸಿದರು.

ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಚರಂಡಿಗಳು ಸ್ವಚ್ಛವಾಗಿಲ್ಲ. ಕುಡಿಯುವ ನೀರಿನ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು ಜೀವನ ನಡೆಸುವಂತಾಗಿದೆ. ಈ ಬಗ್ಗೆ ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೀಗಜಡಿದು ಪ್ರತಿಭಟನೆಗೆ ಮುಂದಾಗಬೇಕಾಯಿತು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ತಿಪ್ಪೇಸ್ವಾಮಿ, ಈರಣ್ಣ, ಗಿಡಯ್ಯ, ಚಂದ್ರಶೇಖರ ಹಾಗೂ ಗ್ರಾಮಸ್ಥರಾದ ರೇವಣ್ಣ, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading