July 20, 2025
1752924052678.jpg


ಚಿತ್ರದುರ್ಗಜುಲೈ18:
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಅತ್ಯುತ್ತಮ ವ್ಯವಸ್ಥೆಯಾಗಿದೆ. ಸಾರ್ವಜನಿಕರು ಇದಕ್ಕೆ ಬೆಂಬಲ ನೀಡಬೇಕು. ಪೊಲೀಸ್ ಇಲಾಖೆ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಅಪರಾಧಗಳನ್ನು ತಡೆಯಲು ಪೊಲೀಸರಿಗೆ ಸಾರ್ವಜನಿರ ಸಹಕಾರ ಅಗತ್ಯವಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮನೆ ಮನೆಗೆ ಪೊಲೀಸ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲೇ ವಿನೂತನವಾದ ‘ಮನೆ ಮನೆಗೆ ಪೊಲೀಸ್’ ಎನ್ನುವ ಪ್ರಯೋಗವನ್ನು ರಾಜ್ಯ ಪೊಲೀಸ್ ಇಲಾಖೆ ಮಾಡುತ್ತಿದೆ. ಇದನ್ನು ಯಶಸ್ವಿಗೊಳಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಪ್ರತಿಯೊಂದು ತಾಲ್ಲೂಕಿನಲ್ಲೂ 70 ರಿಂದ 80 ಸಾವಿರ ಮನೆಗಳು ಇವೆ. ಬೀಟ್ ಪೊಲೀಸರು ತಮ್ಮ ವ್ಯಾಪ್ತಿಯ ಪ್ರತಿ ಮನೆಯ ವಿವರಗಳನ್ನು ಸಂಗ್ರಹಿಸಿ ಎಲ್ಲಾ ರೀತಿಯ ಅಪರಾಧ ಕೃತ್ಯ ತಡೆಯಲು ಜಾಗರೂಕರಾಗಿರಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಸಮರ್ಥವಾಗಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಪೊಲೀಸ್ ಇಲಾಖೆ ಬಲಪಡಿಸಲು ಸಿದ್ಧ: ಪೊಲೀಸ್ ಇಲಾಖೆ ಬಲಪಡಿಸಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಶಾಸಕರ ಅನುದಾನದಲ್ಲಿ 16 ವಾಹನಗಳನ್ನು ಪೊಲೀಸ್ ಇಲಾಖೆಗೆ ನೀಡಲಾಗಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳ ವಸತಿ ಗೃಹ ನಿರ್ಮಾಣ ಮಾಡುವಂತೆ ಕೋರಿದು, ಮುಂಬರುವ ಆಯವ್ಯಯದಲ್ಲಿ ಅನುದಾನ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಸಚಿವ ಡಿ.ಸುಧಾಕರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಲು ಮನೆ ಮನೆಗೆ ಪೊಲೀಸ್ ಎನ್ನುವ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸರಹದ್ದನ್ನು ಬೀಟ್‍ಗಳನ್ನಾಗಿ, ನಂತರ ಈ ಬೀಟ್‍ಗಳನ್ನು ಸಬ್‍ಬೀಟ್‍ಗಳನ್ನಾಗಿ ವಿಂಗಡಿಸಲಾಗುವುದು. ಪ್ರತಿ ಸಬ್ ಬೀಟ್‍ನಲ್ಲಿ 40 ರಿಂದ 50 ಮನೆಗಳನ್ನು ಒಳಗೊಂಡ ಕ್ಲಸ್ಟರ್‍ಗಳ ರಚನೆ ಮಾಡಲಾಗುವುದು. ಕ್ಲಸ್ಟರ್‍ಗೆ ನೇಮಿಸಿದ ಪೊಲೀಸ್ ಸಿಬ್ಬಂದಿ ಬೀಟ್ ವೇಳೆ ಪ್ರತಿ ಮನೆಗಳಿಗೂ ಭೇಟಿ ನೀಡುತ್ತಾರೆ. ಈ ವೇಳೆ ಮನೆಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಗುರುತಿಸಿ, ಠಾಣೆಯ ನೊಂದಣಿ ಪುಸ್ತಕದಲ್ಲಿ ನಮೂದಿಸುತ್ತಾರೆ. ಏನಾದರೂ ದೊಡ್ಡ ಸಮಸ್ಯೆಗಳು ಇದ್ದರೇ ಪೊಲೀಸ್ ಇನ್ಸೆಪಕ್ಟರ್ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ ಎಂದರು.
ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವುದರ ಜೊತೆಗೆ, ಸಾರ್ವಜನಿಕರಲ್ಲಿ ಕಾಯ್ದೆ ಕಾನೂನುಗಳ ಕುರಿತು ಜಾಗೃತಿ ಸಹ ಮೂಡಿಸಲಾಗುವುದು. ಇದರೊಂದಿಗೆ ಏರಿಯಾದ ಮನೆಗಳಲ್ಲಿ ಹೆಚ್ಚಿನ ರಕ್ಷಣಾ ವ್ಯವಸ್ಥೆ ಅಳವಡಿಸಿಕೊಳ್ಳಲು ಪೊಲೀಸರು ಸಲಹೆಯನ್ನು ಸಹ ನೀಡುತ್ತಾರೆ. ಪೊಲೀಸರು ಜನರ ರಕ್ಷಣೆಗಾಗಿ ಇದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗಿದವರು ಮಾತ್ರ ಪೊಲೀಸರನ್ನು ಕಂಡರೆ ಭಯ ಪಡಬೇಕು. ಸಾಮಾನ್ಯ ಜನರಲ್ಲಿ ಪೊಲೀಸರನ್ನು ಕಂಡರೆ ವಿಶ್ವಾಸ ಹಾಗೂ ಧೈರ್ಯ ಮೂಡಬೇಕು. ಜನರು ಏನೇ ಸಮಸ್ಯೆಗಳು ಹಾಗೂ ಮಾಹಿತಿಯನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳ ಮನೋಭಾವ ಕೂಡ ಬದಲಾಗಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ಜಿಲ್ಲೆಯಲ್ಲಿ ನಮ್ಮ ನಡೆ ಜಾಗೃತಿ ಕಡೆಗೆ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳಲ್ಲಿ ಅಪರಾಧ ಕೃತ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪೊಲೀಸರ ಬಗ್ಗೆ ಸಾರ್ವಜನಿಕರು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದೇಶದ ಭದ್ರತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಬರೀ ಪೊಲೀಸರ ಕರ್ತವ್ಯವಲ್ಲ ಪ್ರತಿಯೊಬ್ಬ ನಾಗರಿಕರು ಸಹ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಳುವಾದ ಮೊಬೈಲ್‍ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಪೊಲೀಸ್ ಉಪಾಧೀಕ್ಷರಾದ ಪಿ.ಕೆ.ದಿನಕರ್, ರಾಜಣ್ಣ, ಶಿವಕುಮಾರ್, ಶ್ರೀನಿವಾಸ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading