
ಚಿತ್ರದುರ್ಗ ಮೇ.19:
ಗೊಲ್ಲರಹಟ್ಟಿಗಳಲ್ಲಿ ಮೌಢ್ಯಗಳನ್ನು ಆಚರಿಸುವ ಅನಿಷ್ಟ ಪದ್ಧತಿ ದೂರವಾಗಬೇಕು ಎಂದು ಲಿಂಗತಜ್ಞೆ ಡಿ.ಗೀತಾ ಹೇಳಿದರು.
ಹಿರಿಯೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಹೇಮದಳಗೊಲ್ಲರಹಟ್ಟಿ ಮತ್ತು ದಿಬ್ಬಾರ ಗೊಲ್ಲರಹಟ್ಟಿಗಳಲ್ಲಿ ಮೌಡ್ಯ ಪದ್ಧತಿ ಮತ್ತು ಆಚರಣೆ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಊರಿನಲ್ಲಿ ಯಾವುದೇ ಹೆಣ್ಣು ಮಗಳು ಋತುಮತಿಯಾದರೆ ಮತ್ತು ಯಾವುದೇ ಮಹಿಳೆ ಹೆರಿಗೆಯಾದರೆ ಆ ಊರಿನ ಪದ್ದತಿಯ ಪ್ರಕಾರ ಆ ಮಹಿಳೆಯರು ಮನೆಯನ್ನು ತೊರೆದು ಕುಟೀರಗಳಲ್ಲಿ ವಾಸ್ತವ್ಯ ಹೂಡುವುದು ವಾಡಿಕೆ ಆಗಿರುತ್ತದೆ ಮುಂದಿನ ದಿನಗಳಲ್ಲಿ ಈ ತರ ತಪ್ಪುಗಳನ್ನು ಮತ್ತು ಇತರ ಕೆಟ್ಟ ಆಚರಣೆಗಳನ್ನು ಮಾಡಬಾರದು ಎಂದು ಗ್ರಾಮದ ಮಹಿಳೆಯರಿಗೆ ಜಾಗೃತಿ ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ಈ ತರಹ ಆಚರಣೆಗಳು ಕಂಡು ಬಂದಲ್ಲಿ ಮೇಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುವುದು ಎಂದರು.
ಮೌಢ್ಯ ಪದ್ಧತಿಗಳು ಈ ಹಟ್ಟಿಗಳಲ್ಲಿ ಹೆಚ್ಚಾಗಿ ಕಂಡುಬಂದಲ್ಲಿ ಮಾಹಿತಿಯನ್ನು ತಿಳಿಸುವಂತೆ ಗ್ರಾಮದ ಮಹಿಳೆಯರಿಗೆ ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳ ನಡೆದಾಗ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡುವಂತೆ ತಿಳಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕರ ನಿಷೇಧ, ಬಾಲ ತಾಯಂದಿರು, ಫೋಕ್ಸೋ ಕಾಯಿದೆ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸೇರಿದಂತೆ ಸುರಕ್ಷಿತ ಸ್ಪರ್ಶ ಅಸುರಕ್ಷಿತ ಸ್ಪರ್ಶ, ಶಾಲೆಯನ್ನು ತೊರೆದರೆ ಆಗುವಂತಹ ಅನಾನುಕೂಲತೆಗಳು ಹಾಗೂ ತಮ್ಮ ತಮ್ಮ ಮನೆಯ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವಂತೆ ಪೋಷಕರಿಗೆ ಶಿಕ್ಷಣದ ಮಹತ್ವ ತಿಳಿಸಿದರು.
ಗೊಲ್ಲರಹಟ್ಟಿಗಳಲ್ಲಿ ಮೌಢ್ಯ ಪದ್ಧತಿ ಮತ್ತು ಆಚರಣೆ ಮಾಡುವುದು ತೀರ ತಪ್ಪು ಹಾಗೂ ಅಂತಹ ಆಚರಣೆಗಳನ್ನು ಮಾಡಿದ್ದಲ್ಲಿ ಹೆಣ್ಣು ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಹೆಣ್ಣು ಮಕ್ಕಳು ಋತುಮತಿಯಾದ ಸಂದರ್ಭದಲ್ಲಿ ಮತ್ತು ಹೆರಿಗೆಯಾದ ಸಂದರ್ಭದಲ್ಲಿ ಅವರಿಗೆ ವೈಯಕ್ತಿಕ ಸ್ವಚ್ಛತೆ ಮತ್ತು ಬೆಚ್ಚನೆಯ ವಾತಾವರಣ ತುಂಬಾ ಮುಖ್ಯವಾಗಿರುತ್ತದೆ. ಅದರಂತೆ ಹಸು ಗುಸಿಗೂ ಸಹ ಭದ್ರತೆ ತುಂಬಾ ಮುಖ್ಯವಾಗುತ್ತದೆ. ಇಂತಹ ಆಚರಣೆಗಳನ್ನು ಮಾಡುವುದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದೇಶ್, ಸದಸ್ಯೆ ಸುಮಾ, ಆರೋಗ್ಯ ನಿರೀಕ್ಷಣಾಧಿಕಾರಿ ನಾಗವೇಣಿ, ಅಂಗನವಾಡಿ ಮೇಲ್ವಿಚಾರಕಿ ನಿರ್ಮಲ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಮಹಿಳೆಯರು ಮತ್ತು ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.