
ಚಿತ್ರದುರ್ಗಏ.19:
ಜಿಲ್ಲೆಯಾದ್ಯಂತ 7ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಇದೇ ಏಪ್ರಿಲ್ 26 ರಿಂದ ಜೂನ್ 09 ರವರೆಗೆ ನಡೆಯಲಿದ್ದು, ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ 7ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನುವಾರುಗಳಿಗೆ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಜೊತೆಗೆ ಚರ್ಮಗಂಟು ರೋಗದ ಲಸಿಕೆಯನ್ನು ನೀಡಲಾಗುತ್ತಿದೆ. ತಪ್ಪದೇ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಿ, ರೋಗ ಬರದಂತೆ ಜಾನುವಾರುಗಳನ್ನು ರಕ್ಷಿಸಿ, ಆರ್ಥಿಕ ನಷ್ಟ ತಡೆಯಿರಿ ಎಂದು ಹೇಳಿದರು. ರೈತರು ಕೂಡ ಸರ್ಕಾರದಿಂದ ಏರ್ಪಡಿಸಲಾಗಿರುವ ಈ ವಿಶೇಷ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು, ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸುವ ಮೂಲಕ ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎನ್.ಕುಮಾರ್ ಮಾತನಾಡಿ, ಕಾಲುಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗ. ಇದರಿಂದ ಜಾನುವಾರುಗಳು ಸಾವನ್ನಪ್ಪುವುದಿಲ್ಲವಾದರೂ, ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಹೀಗಾಗಿ ಕಾಲುಬಾಯಿ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಈ ರೋಗದ ವಿರುದ್ಧ ಲಸಿಕೆ ಹಾಕಿಸುವುದು ಕಡ್ಡಾಯ ಎಂದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಕಾಲುಬಾಯಿ ರೋಗ ಲಸಿಕೆಯು ಕೇಂದ್ರ ಸರ್ಕಾರದಿಂದ ಸರಬರಾಜಾಗಿದ್ದು, ಈ ರೋಗದ ವಿರುದ್ಧ ಎಲ್ಲಾ ದನ, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಲಸಿಕಾ ಕಾರ್ಯಕ್ರಮವನ್ನು ಇದೇ ಏಪ್ರಿಲ್ 26 ರಿಂದ ಜೂನ್ 09 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ 1,76,949 ದನ, 78,654 ಎಮ್ಮೆ ಸೇರಿದಂತೆ ಒಟ್ಟು 2,55,603 ಜಾನುವಾರುಗಳಿದ್ದು, 3,17,587 ಡೋಸ್ ಲಸಿಕೆ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 3,390 ಬ್ಲಾಕ್‍ಗಳನ್ನು ಮಾಡಲಾಗಿದೆ. 291 ಲಸಿಕಾದಾರರು ಮನೆ ಬಾಗಿಲಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ರೈತರು ಲಸಿಕಾ ಸಿಬ್ಬಂದಿಗಳಿಗೆ ಸಹಕರಿಸಿ ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ “ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ” ಫೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎನ್.ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಶಿಕ್ಷಣ ಇಲಾಖೆಯ ಚಿದಾನಂದ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಸೇರಿದಂತೆ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಎನ್.ಗಿರಿರಾಜ್, ಡಾ.ಇಂದ್ರಬಾಯಿ, ಡಾ.ರಂಗಪ್ಪ, ಡಾ.ಕಿರಣ್, ಡಾ.ರಂಗಸ್ವಾಮಿ, ಡಾ.ರೇವಣ್ಣ, ಡಾ.ಹರೀಶ್ ಇದ್ದರು.




=========
About The Author
Discover more from JANADHWANI NEWS
Subscribe to get the latest posts sent to your email.