December 14, 2025
1742390867934.jpg


ಚಿತ್ರದುರ್ಗ ಮಾರ್ಚ್19:
ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಮಿಕ ಸುಂಕ ಸಂಗ್ರಹಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996ರ ಅಡಿಯಲ್ಲಿ ರಚಿಸಲಾಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಗಳನ್ನಾಗಿ ನೋಂದಾಯಿಸಿ ಅವರಿಗೆ ಹಲವು ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಮಂಡಳಿಗೆ ಸಂಪನ್ಮೂಲ ಕ್ರೂಢೀಕರಿಸುವ ಸಲುವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಮಾಲೀಕರು, ನಿಯೋಜಕರಿಂದ ಒಟ್ಟು ನಿರ್ಮಾಣ ವೆಚ್ಚದ ಶೇ.1ರಷ್ಟು ಸುಂಕ ಸಂಗ್ರಹ ಮಾಡಬೇಕು ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರೂ.10 ಲಕ್ಷ ನಿರ್ಮಾಣ ವೆಚ್ಚ ಮೀರಿದ ವಾಸದ ಮನೆ ಹಾಗೂ ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಗಳ ಶೇ.1ರಷ್ಟು ಸುಂಕವನ್ನು ವ್ಯವಸ್ಥಿತವಾಗಿ ಸಂಗ್ರಹಿಸಬೇಕು. ಇದರಿಂದ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದಾಯ ಬರಲಿದೆ ಎಂದು ತಿಳಿಸಿದ ಅವರು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಷ್ಟು ಕಟ್ಟಡ ಕಾಮಗಾರಿಗಳಿಗೆ ಲೈಸೆನ್ಸ್ ನೀಡಲಾಗಿದೆ. ಸಂಗ್ರಹಿಸಿರುವ ಸುಂಕ ಎಷ್ಟು? ಕಟ್ಟಡ ನಿರ್ಮಾಣದ ವೆಚ್ಚದ ಕುರಿತು ಮರು ಪರಿಶೀಲನೆ ನಡೆಸಬೇಕು. ಒಂದು ವೇಳೆ ವ್ಯತ್ಯಾಸ ಕಂಡುಬಂದರೆ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕು. ಅದೇ ರೀತಿಯಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಡ ಕಾರ್ಮಿಕ ಸುಂಕ ಸಂಗ್ರಹವಾಗುವುದರ ಕುರಿತು ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರದ ಕಾಮಗಾರಿಗಳನ್ನು ಕೈಗೊಳ್ಳುವ ಇಲಾಖೆಯವರು 30 ದಿನಗಳ ಅವಧಿಯಲ್ಲಿ ಸುಂಕವನ್ನು ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಅಡಿ ಸಂಸ್ಥೆಗಳನ್ನು ನೋಂದಣಿ ಮಾಡಿಸಬೇಕು. ಇದರ ಜೊತೆಗೆ ಸರ್ಕಾರದ ವಿವಿಧ ಇಲಾಖೆಯ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಆರೋಗ್ಯ ತಪಾಸಣೆಗೆ ಕ್ರಮವಹಿಸಬೇಕು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಡಿ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996 ಮತ್ತು ಕರ್ನಾಟಕ ನಿಯಮಗಳು, 2006ರ ನಿಯಮ 15ರನ್ವಯ ಕಾಮಗಾರಿ ಕೈಗೊಳ್ಳುವ ಸಂಸ್ಥೆ, ವ್ಯಕ್ತಿಯು ಕಾಮಗಾರಿ ಪ್ರಾರಂಭಗೊಂಡಿರುವ ಬಗ್ಗೆ ನಮೂನೆ-1ನ್ನು ನಿಯಮದಂತೆ ಕಾರ್ಮಿಕ ಅಧಿಕಾರಿಗಳಿಗೆ ಆನ್‍ಲೈನ್ ಮುಖಾಂತರ ಸಲ್ಲಿಸಿ, ನೋಂದಣಿ ಪತ್ರ ಪಡೆಯುವುದು ಕಡ್ಡಾಯ. ಅದರಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ, 1996 ಮತ್ತು ನಿಯಮಗಳು, 1998ರ ನಿಯಮ 6(1) ರನ್ವಯ ಸುಂಕ ಪಾವತಿ ಮಾಡಿರುವ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೌಲಭ್ಯವೂ ದೊರೆಯಬೇಕು. ಈ ನಿಟ್ಟಿನಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆ ಮೂಲಕ ಸುಮಾರು 20 ಆರೋಗ್ಯ ತಪಾಸಣೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಮಂಡಳಿಯ ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ ಸೌಲಭ್ಯದಡಿ ಬರುವ ಪ್ರಮುಖ ಖಾಯಿಲೆಗಳಿಗೆ (ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ) ರೂ.2 ಲಕ್ಷದವರೆಗೂ ಚಿಕಿತ್ಸೆ ಸೌಲಭ್ಯ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಕಾರ್ಮಿಕ ನಿರೀಕ್ಷಕರಾದ ಡಿ.ರಾಜಣ್ಣ, ಅಲ್ಲಾ ಭಕ್ಷ್, ಟಿ.ಕುಸುಮ, ಭೀಮೇಶ್, ಬಾಲಕಾರ್ಮಿಕ ಯೋಜನಾ ಸೋಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ಎಸ್.ವಿ.ಪ್ರಸಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading