January 29, 2026
IMG-20260119-WA0246.jpg

ಚಳ್ಳಕೆರೆ:
ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ನಾಡಿನ ಶ್ರೀಮಂತ ಕಲೆಯಾದ ಭರತನಾಟ್ಯವನ್ನು ಪೋಷಿಸಿ, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ದೇಶ–ವಿದೇಶಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ ಹಾಗೂ ಸಂಗೀತ ಶಿಕ್ಷಣ ಸಂಸ್ಥೆ ತಾಲೂಕಿನ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹೆಮ್ಮೆಯ ಮುಕುಟವಾಗಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವ ಮೂರ್ತಿ ಹೇಳಿದರು.

ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನೃತ್ಯನಿಕೇತನ ಶಾಸ್ತ್ರೀಯ ನೃತ್ಯ–ಸಂಗೀತ ಶಿಕ್ಷಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ಚಳ್ಳಕೆರೆ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಕಲೆಯನ್ನು ಪ್ರೀತಿಸಿ ಅದರಲ್ಲಿ ತೊಡಗಿಕೊಂಡಾಗ ಮಾತ್ರ ಕಲೆ ಒಲಿಯುತ್ತದೆ. ಅಂತಹ ಕಲೆಯನ್ನು ಗುರುತಿಸಿ ಬೆಳೆಸುವುದು ಮಹತ್ವದ ಸಾಧನೆ. ಇಂದು ದೇಶ–ವಿದೇಶಗಳಲ್ಲಿ ಭರತನಾಟ್ಯ ಕಲೆಯನ್ನು ಕಲಿತ ಶಿಷ್ಯವರ್ಗವನ್ನು ಹೊಂದಿರುವ ಹೆಗ್ಗಳಿಕೆ ನೃತ್ಯನಿಕೇತನ ಸಂಸ್ಥೆಗೆ ಸಲ್ಲುತ್ತದೆ ಎಂದರು. ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಚಳ್ಳಕೆರೆ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ, ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ತರಾಸುರರಂತಹ ಮಹಾನ್ ಕವಿಗಳು ಜನಿಸಿದ ಚಳ್ಳಕೆರೆ ತಾಲೂಕಿನಲ್ಲಿ ಕಳೆದ 40 ವರ್ಷಗಳಿಂದ ನೃತ್ಯನಿಕೇತನ ಸಂಸ್ಥೆಯ ಸುಧಾ ಮೂರ್ತಿಯವರು ಭರತನಾಟ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ, ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವುದು ಶ್ಲಾಘನೀಯ ಸಾಧನೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವಾ ರತ್ನ ಪ್ರಶಸ್ತಿಯನ್ನು ಅಂಚೆ ಇಲಾಖೆಯಲ್ಲಿ 43 ವರ್ಷಗಳ ಕಾಲ ನಿರಂತರ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಗೋಸಿಕೆರೆ ಗ್ರಾಮದ ಮುದ್ದುರಾಜು ಅವರಿಗೆ ಪ್ರದಾನಿಸಲಾಯಿತು. ಇದೇ ವೇಳೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ವಾಸ್ತು ವಿನ್ಯಾಸದ ಸಲಹೆಗಾರ ಪಾವಗಡ ತಾಲೂಕಿನ ಶೈಲಾಪುರದ ವಾಸ್ತು ರಾಮಣ್ಣ ಅವರಿಗೆ ಸದ್ವಿದ್ಯಾ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ರೂಪವತ್ ವರಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ನೃತ್ಯನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್, ಕಾರ್ಯದರ್ಶಿ ಸುಧಾ ಮೂರ್ತಿ, ಸಂಜೀವಿನಿ ಲ್ಯಾಬ್‌ನ ಎಂ.ಎನ್. ಮೃತ್ಯುಂಜಯ ಸೇರಿದಂತೆ ವಿದ್ಯಾರ್ಥಿಗಳು, ಕಲಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading