January 29, 2026
FB_IMG_1768829845129.jpg

ಚಿತ್ರದುರ್ಗ ಜ. 19
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಆವರಿಸಿದ್ದ ಅವಧಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ನ್ಯಾ. ಮೈಕಲ್ ಕುನ್ಹಾ ಅವರ ನೇತೃತ್ವದ ಆಯೋಗವು ಸಲ್ಲಿಸಿರುವ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಅದರನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಈ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಿಸಿದ್ದ ಸಂದರ್ಭದಲ್ಲಿ ಎಸ್‍ಡಿಆರ್‍ಎಫ್ (ರಾಜ್ಯ ವಿಪತ್ತು ಪರಿಹಾರ ನಿಧಿ), ಡಿಎಂಎಫ್ (ಖನಿಜ ನಿಧಿ) ಹಾಗೂ ಸಿಎಸ್‍ಆರ್ ನಿಧಿಯಡಿ ಆರೋಗ್ಯ ಇಲಾಖೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್, ಔಷಧಿ ಹಾಗು ಸಾಧನ ಸಲಕರಣೆಗಳನ್ನು ಖರೀದಿಸಲು ಅನುದಾನ ಒದಗಿಸಲಾಗಿತ್ತು. ಈ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗವು ಈ ಕುರಿತಂತೆ ವರದಿ ಸಲ್ಲಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‍ಡಿಆರ್‍ಎಫ್ ನಡಿ ಸುಮಾರು 30 ಕೋಟಿ ರೂ., ಡಿಎಂಎಫ್‍ನಲ್ಲಿ 46 ಕೋಟಿ ರೂ. ಹಾಗೂ ಸಿಎಸ್‍ಆರ್ ನಿಧಿಯಡಿ 30 ಕೋಟಿ ರೂ. ಗೂ ಹೆಚ್ಚಿನ ಅನುದಾನ ಒದಗಿಸಲಾಗಿದ್ದು, ಈ ಪೈಕಿ 38.46 ಕೋಟಿ ರೂ. ಗಳ ಮೊತ್ತದಲ್ಲಿ ಕಿಟ್, ಔಷಧಿ ಮತ್ತಿತರೆ ಸಾಮಗ್ರಿಗಳ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ಇಲ್ಲ ಎಂಬುದಾಗಿ ಆಯೋಗವು ವರದಿ ನೀಡಿದೆ. ಪ್ಯಾರಾಸೆಟಮಾಲ್, ಪಿಪಿಇ ಕಿಟ್, ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಮುಂತಾದ ಖರೀದಿಗಳಲ್ಲಿ ಆಗಿರುವ ಲೋಪದೋಷಗಳನ್ನು ಆಯೋಗವು ವರದಿಯಲ್ಲಿ ವಿವರವಾಗಿ ಎತ್ತಿ ತೋರಿಸಿದೆ. ಸಿಎಸ್‍ಆರ್ ನಿಧಿಯಡಿ ಖರೀದಿಸಿರುವ ಔಷಧಿ, ಕಿಟ್ ಸೇರಿದಂತೆ ಇತರೆ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ಸಲ್ಲಿಸಲು ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು, ಔಷಧಿ, ಪಿಪಿಇ ಕಿಟ್ ಸೇರಿದಂತೆ ಇತರೆ ವೈದ್ಯಕೀಯ ಸಾಮಗ್ರಿಗಳ ನೈಜ ದರವನ್ನು ಸಂಬಂಧಪಟ್ಟ ಅಧಿಕೃತ ಫಾರ್ಮಸಿಸ್ಟ್ ಅವರಿಂದ ಇನ್ನೊಮ್ಮೆ ಪಡೆದು, ಪರಿಶೀಲಿಸಿ, ಬಳಿಕ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಚಾರ್ಜ್ ಶೀಟ್ ತಯಾರಿಸಬೇಕಾಗುತ್ತದೆ. ಜನ ಸಾಯುತ್ತಿರುವಾಗಲೂ ಇದರಲ್ಲೂ ಹಗರಣ ಮಾಡಿರುವುದು ವಿಷಾದನೀಯ ಎಂದರು. ಹೊಳಲ್ಕೆರೆ ಶಾಸಕ ಡಾ. ಬಿ. ಚಂದ್ರಪ್ಪ ಅವರು ಮಾತನಾಡಿ, ಸಾಂಕ್ರಾಮಿಕ ರೋಗ ಉಲ್ಬಣ ಸಂದರ್ಭದಲ್ಲಿ ಜನ ಸಾಯುತ್ತಿರುವಾಗಲೂ, ಔಷಧಿ ಮತ್ತಿತರೆ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ಮಾಡಿದ್ದಲ್ಲಿ, ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹೀಗಾಗಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಯಾರು ತಪ್ಪಿತಸ್ಥರು ಇದ್ದಾರೆ, ಅವರ ಮೇಲೆ ಕ್ರಮ ಆಗಲಿ, ಇದು ಕೇವಲ ವರದಿ ಸಲ್ಲಿಕೆಗೆ ಸೀಮಿತ ಆಗುವುದು ಬೇಡ ಎಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚವ ಡಿ. ಸುಧಾಕರ್ ಅವರು, ನ್ಯಾ. ಕುನ್ಹಾ ಅವರು ಸಲ್ಲಿಸಿರುವ ಜಿಲ್ಲೆಗೆ ಸಂಬಂಧಿಸಿದ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಮತ್ತೊಮ್ಮೆ ತನಿಖೆ ಕೈಗೊಂಡು, ಔಷಧಿ ಮತ್ತಿತರ ಸಾಮಗ್ರಿ ಖರೀದಿಯಲ್ಲಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾದರೂ ಕೂಡ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೆಜೆಎಂ ಯೋಜನೆಯಡಿ 300 ಕ್ಕೂ ಹೆಚ್ಚು ಕಾಮಗಾರಿ ಕಳಪೆ :
ಸರ್ಕಾರ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎನ್ನುವ ಸದುದ್ದೇಶದೊಂದಿಗೆ ಜಾರಿಗೊಳಿಸಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ, ಪರಿಶೀಲಿಸಲು ಕಳೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು. ಅದರಂತೆ ಜಿಲ್ಲೆಯ ಎಲ್ಲ 189 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರೆ ಓರ್ವ ಇಂಜಿನಿಯರ್ ಅವರ ನೇತೃತ್ವದಲ್ಲಿ ಜೆಜೆಎಂ ಯೋಜನೆ ಕಾಮಗಾರಿಗಳ ಒಟ್ಟು 490 ಕಾಮಗಾರಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಈ ಪೈಕಿ 300 ಕ್ಕೂ ಹೆಚ್ಚು ಕಾಮಗಾರಿಗಳು ಕಳಪೆ ಎಂಬುದಾಗಿ ವರದಿ ಬಂದಿದೆ. ಇದರಲ್ಲಿ ಕೆಲವೆಡೆ ಪೂರೈಕೆ ಮಾಡುವ ನೀರಿನ ಗುಣಮಟ್ಟ ಕಳಪೆಯಾಗಿದ್ದರೆ, ಕೆಲವೆಡೆ ಕಾಮಗಾರಿಯ ಗುಣಮಟ್ಟವೇ ಕಳಪೆಯಾಗಿದೆ, ಇನ್ನು ಹಲವೆಡೆ ಜೆಜೆಎಂ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದಿದ್ದು, ಅದನ್ನು ಸಮರ್ಪಕವಾಗಿ ಮುಚ್ಚದೆ ಉತ್ತಮ ರಸ್ತೆಯನ್ನು ಹಾಳುಗೆಡವಿರುವುದು ಕಂಡುಬಂದಿದೆ. 14 ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿಗಳು ಕಳಪೆಯಾಗಿದೆ ಎಂಬುದಾಗಿ ಅಧಿಕಾರಿಗಳ ತಂಡ ವರದಿ ಸಲ್ಲಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ಹೇಳಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು, ಜೆಜೆಎಂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುಣಮಟ್ಟ ನಿಯಂತ್ರಣ ಕೋಶದಿಂದ ಕಾಮಗಾರಿಯ ಎಂ.ಬಿ. ಪರಿಶೀಲನಾ ವರದಿ ಪಡೆಯಬೇಕು. ಗುತ್ತಿಗೆದಾರರಿಗೆ ದಂಡ ವಿಧಿಸುವುದಲ್ಲದೆ, ಕಾಮಗಾರಿಯನ್ನು ಸರಿಪಡಿಸಿ ಕೊಡುವಂತೆ ತಿಳಿಸಲು ಅವಕಾಶವಿದೆ. ತಾಂತ್ರಿಕ ಸಮಿತಿಯನ್ನು ರಚಿಸಿ, ಇನ್ನೊಮ್ಮೆ ಪರಿಶೀಲನೆಗೆ ಒಳಪಡಿಸಬಹುದು ಎಂದು ನೀಡಿದರು.
ಜಿಲ್ಲೆಯಲ್ಲಿ ಶೇ. 80 ಕ್ಕೂ ಹೆಚ್ಚು ಹೆರಿಗೆ ಸಿಸೇರಿಯನ್ :
ಜಿಲ್ಲೆಯಲ್ಲಿ 2025 ರ ಏಪ್ರಿಲ್‍ನಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 4948 ಹೆರಿಗೆಗಳಾಗಿದ್ದು, ಇದರಲ್ಲಿ 3499 ಸಿಸೇರಿಯನ್ ಹಾಗೂ 1449 ಮಾತ್ರ ಸಾಮಾನ್ಯ ಹೆರಿಗೆಗಳಾಗಿವೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿಯಂತೂ ಶೇ. 80 ಕ್ಕಿಂತಲೂ ಹೆಚ್ಚಿನ ಹೆರಿಗೆಗಳನ್ನು ಸಿಸೇರಿಯನ್ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಸೇರಿಯನ್ ಹೆರಿಗೆ ಆಗುತ್ತಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್ ಮಾಹಿತಿ ನೀಡಿದರು. ಈ ಕುರಿತಂತೆ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಎಲ್ಲ ಶಾಸಕರುಗಳು ಕಳವಳ ವ್ಯಕ್ತಪಡಿಸಿದರು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಳ ಕುರಿತಂತೆ ಸೂಕ್ತ ತನಿಖೆ ನಡೆಸಿ ವರದಿ ಪಡೆಯಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಹಾಸ್ಟೆಲ್‍ಗಳಿಗೆ ಮೂಲಭೂತ ಸೌಕರ್ಯ ಒದಗಿಸಿ :
ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ, ಶೌಚಾಲಯಗಳ ಸ್ಥಿತಿಗತಿ ಶೋಚನೀಯವಾಗಿವೆ. ಅಧಿಕಾರಿಗಳು ಕಾಲಕಾಲಕ್ಕೆ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶನಿವಾರ, ಭಾನುವಾರ ರಜೆ ಸಂದರ್ಭದಲ್ಲಿ ಹಾಸ್ಟೆಲ್‍ನಿಂದ ತೆರಳುವ ಮಕ್ಕಳ ಬಗ್ಗೆ ಸೂಕ್ತ ನಿಗಾ ಇಡುವುದು ಅಗತ್ಯವಾಗಿದೆ. ಹಾಸ್ಟೆಲ್‍ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಿದ್ದು, ಇದಕ್ಕೆ ಅನುಗುಣವಾಗಿಯೇ ಆಹಾರ ಮತ್ತಿತರ ಬಿಲ್‍ಗಳು ಪಾವತಿಯಾಗಬೇಕು. ಕಳೆದ ವರ್ಷ ಹಾಸ್ಟೆಲ್‍ನಲ್ಲಿನ ಮಕ್ಕಳ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಫಲಿತಾಂಶಗಳು ತೀವ್ರ ಕಡಿಮೆ ಪ್ರಮಾಣದ್ದಾಗಿದ್ದು, ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿಯೂ ಸೂಕ್ತ ಕ್ರಮ ಆಗಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಈ ವರ್ಷ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲಾಗುತ್ತಿದೆ. ಹೀಗಾಗಿ ಈ ವರ್ಷ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಹಾಸ್ಟೆಲ್‍ಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿನ ನಿಟ್ಟಿನಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ಆಕಾಶ್ ಹೇಳಿದರು.
ಸರ್ಕಾರಿ ಕಾಮಗಾರಿಗಳಿಗೆ ಸಾರಿಗೆ ಅಧಿಕಾರಿಗಳಿಂದ ತಡೆ ಬೇಡ :
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಮಾತನಾಡಿ, ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ, ಮರಳು, ಕಾಂಕ್ರಿಟ್ ಮತ್ತಿತರೆ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳನ್ನು ತಡೆದು, ವಿವಿಧ ಕಾರಣಗಳನ್ನು ಒಡ್ಡಿ ಪ್ರಾದೇಶಿಕ ಸಾರಿಗೆ ಇಲಾಖೆ ಇನ್‍ಸ್ಪೆಕ್ಟರ್ ಗಳು ದಂಡ ವಿಧಿಸುವುದು ಸೇರಿದಂತೆ ಅಡೆ ತಡೆ ಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೆ ಕುಂಠಿತವಾಗುತ್ತದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳಿಸಿಂಘೆ ಅವರು, ಈ ಕುರಿತು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ತಡೆಗೆ ಕಠಿಣ ಕ್ರಮ ಅಗತ್ಯ :
ಜಿಲ್ಲೆಯ ವಿವಿಧೆಡೆ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮವಾಗಿ ಕಳ್ಳ ಸಾಗಾಣಿಕೆಯಾಗುತ್ತಿದ್ದು, ಈ ಕುರಿತು ಆಹಾರ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬಡವರಿಗಾಗಿ ಸರ್ಕಾರ ನೀಡುತ್ತಿರುವ ಅಕ್ಕಿ ಈ ರೀತಿ ಅಕ್ರಮಗಳಿಗೆ ಬಳಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳು ಸುಮ್ಮನೆ ನೋಡಿಕೊಂಡು ಕೂರುವುದು ಸಮಂಜಸ ಅಲ್ಲ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ಆಹಾರ ಇಲಾಖೆ ಉಪನಿರ್ದೇಶಕ ಶಿದ್ರಾಮ ಮಾರಿಹಾಳ ಅವರು, ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳು ತಮ್ಮ ಕುಟುಂಬಕ್ಕೆ ಬೇಕಾದ್ದಷ್ಟನ್ನು ಉಳಿಸಿಕೊಂಡು, ಹೆಚ್ಚುವರಿ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದು, ಇಂತಹ ಅಕ್ಕಿಯನ್ನು ಅಕ್ರಮ ಸಾಗಾಣಿಕೆಗೆ ಬಳಸುತ್ತಿರುವುದು ಕಂಡುಬರುತ್ತಿದೆ. ಅಕ್ರಮದಲ್ಲಿ ಸಹಕರಿಸಿದ ಜಿಲ್ಲೆಯ 04 ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಅಕ್ಕಿಯ ಜೊತೆಗೆ ತೊಗರಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಸೇರಿದಂತೆ ಇಂದಿರಾ ಕಿಟ್ ಅನ್ನು ಅನ್ನಭಾಗ್ಯ ಫಲಾನುಭವಿಗಳಿಗೆ ನೀಡುವ ಯೋಜನೆಗೆ ಸಿದ್ಧತೆ ನಡೆದಿದ್ದು, ಶೀಘ್ರದಲ್ಲೇ ಜಾರಿಯಾಗಲಿದೆ ಎಂದರು.
ಗ್ಯಾರಂಟಿ ಯೋಜನೆಗಳ ಪರಿಶೀಲನೆ:

ಕೆ.ಡಿ.ಪಿ. ಸಭೆಯ ಆರಂಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು 3,98,498 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಪ್ರಸ್ತುತ 3,86,680 ಫಲಾನುಭವಿಗಳ ಖಾತೆಗೆ 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನದ್ದು ಹೊರತುಪಡಿಸಿ, ಸೆಪ್ಟೆಂಬರ್-2025 ವರಗೆ ಗೃಹಲಕ್ಷ್ಮಿ ಹಣ ಜಮೆ ಮಾಡಲಾಗಿದೆ. ಸುಮಾರು 5,000 ಗೃಹಲಕ್ಷ್ಮಿ ಫಲಾನುಭವಿಗಳು ಮರಣ ಹೊಂದಿದ್ದು, ಬ್ಯಾಂಕ್‍ಗಳು ಪಾವತಿಯಾದ ಗೃಹಲಕ್ಷ್ಮಿ ಹಣವನ್ನು ಸರ್ಕಾರದ ಲೆಕ್ಕಶಿರ್ಷಿಕೆಗೆ ಜಮೆ ಮಾಡುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಇದುವರೆಗೆ 231.21 ಕೋಟಿ ಮೌಲ್ಯದ ಉಚಿತ ಟಿಕೆಟ್‍ಗಳನ್ನು ನೀಡಲಾಗಿದೆ. ಪ್ರತಿದಿನ ಜಿಲ್ಲೆಯ ನಿಗಮ ಬಸ್‍ಗಳಲ್ಲಿ 58,000 ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದು ಕೆ.ಎಸ್.ಆರ್.ಟಿ. ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ 4.21 ಲಕ್ಷ ಸ್ಥಾವರಗಳಿದ್ದು, 3.82 ಲಕ್ಷ ಫಲಾನುಭವಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಸುಮಾರು 18 ಕೋಟಿ ರೂ. ಯೋಜನೆಗೆ ವೆಚ್ಚವಾಗುತ್ತದೆ. ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಮಾತನಾಡಿ, ವಾಣಿಜ್ಯ ವಿದ್ಯುತ್ ಸಂಪರ್ಕಗಳನ್ನು ಹೊರತುಪಡಿಸಿ, ಉಳಿದಂತೆ ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡಿಸಲಾಗಿದ್ದು, ಎಲ್ಲ ಅರ್ಹ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಗೆ ತರಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಯುವನಿಧಿ ಯೋಜನೆಯಡಿ ಪದವಿ ಪೂರೈಹಿಸಿದ 7,841 ಹಾಗೂ 151 ಡಿಪ್ಲೋಮೊ ಪೂರೈಸಿದ ಅಭ್ಯರ್ಥಿಗಳು ಸೇರಿ ಒಟ್ಟು 7,992 ಜನರಿಗೆ ಸೆಪ್ಟಂಬರ್ ವರೆಗೆ 22.27 ಕೋಟಿ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ಜಿ.ಪಂ. ಸಿಇಒ ಆಕಾಶ್ ಅವರು ಮಾತನಾಡಿ, ಜನವರಿ ತಿಂಗಳಾಂತ್ಯದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಎಲ್ಲ ಯುವನಿಧಿ ಫಲಾನುಭವಿಗಳನ್ನು ಉದ್ಯೋಗಮೇಳಕ್ಕೆ ಕರೆಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹೊಳಲ್ಕೆರೆ ಶಾಸಕ ಡಾ. ಬಿ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯರುಗಳಾದ ಡಿ.ಟಿ. ಶ್ರೀನಿವಾಸ್, ಕೆ.ಎಸ್. ನವೀನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಡಾ. ಎಸ್. ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಕೆಡಿಪಿ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading